ನಾಳಿನ ಬೈಜುಸ್ ಮಂಡಳಿ ಅಸಾಮಾನ್ಯ ಮಹಾಸಭೆಗೆ ತಡೆ ನೀಡಲು ಎನ್‌ಸಿಎಲ್‌ಟಿ ಬೆಂಗಳೂರು ನಕಾರ

ಹಕ್ಕುಗಳ ವಿತರಣೆ ಜಾರಿಗಾಗಿ ತನ್ನ ಮೂಲ ಕಂಪನಿ ʼಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ʼನ ಅಧಿಕೃತ ಬಂಡವಾಳ ಹೆಚ್ಚಿಸುವ ಕುರಿತು ನಿರ್ಧಾರ ಕೈಗೊಳ್ಳಲು ಅಸಾಮಾನ್ಯ ಮಹಾಸಭೆ ಕರೆಯಲಾಗಿತ್ತು.
ಬೈಜುಸ್
ಬೈಜುಸ್

ಬೈಜುಸ್‌ ಮಂಡಳಿ ನಾಳೆ (ಮಾರ್ಚ್ 29) ಕರೆದಿರುವ ಅಸಾಮಾನ್ಯ ಮಹಾಸಭೆಗೆ (ಇಜಿಎಂ) ತಡೆ ನೀಡಲು ಬೆಂಗಳೂರಿನ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ನಿರಾಕರಿಸಿದೆ [ಎಂಐಎಚ್‌ ಎಡ್‌ಟೆಕ್‌ ಇನ್‌ವೆಸ್ಟ್‌ಮೆಂಟ್ಸ್‌ ಮತ್ತು ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್‌ ಹಾಗೂ ಇನ್ನಿತರರ ನಡುವಣ ಪ್ರಕರಣ]

ಹಕ್ಕುಗಳ ವಿತರಣೆ ಜಾರಿಗಾಗಿ ತನ್ನ ಮೂಲ ಕಂಪನಿ ʼಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ʼನ ಅಧಿಕೃತ ಬಂಡವಾಳ ಹೆಚ್ಚಿಸುವ ಕುರಿತು ನಿರ್ಧಾರ ಕೈಗೊಳ್ಳಲು ಅಸಾಮಾನ್ಯ ಮಹಾಸಭೆ ಕರೆಯಲಾಗಿತ್ತು.

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ವಿವಿಧ ತೀರ್ಪುಗಳ ಮೂಸೆಯಲ್ಲಿ ಇಜಿಎಂಗೆ ತಡೆ ನೀಡಲು ತಾನು ಒಲವು ತೋರುತ್ತಿಲ್ಲ ಎಂದು ನ್ಯಾಯಾಂಗ ಸದಸ್ಯ ಕೆ ಬಿಸ್ವಾಲ್ ಮತ್ತು ತಾಂತ್ರಿಕ ಸದಸ್ಯ ಮನೋಜ್ ಕುಮಾರ್ ದುಬೆ ಅವರನ್ನೊಳಗೊಂಡ ಪೀಠ ತೀರ್ಪು ನೀಡಿತು.

ಬೈಜುಸ್ ಪರ ಹಿರಿಯ ವಕೀಲರಾದ ಕೆ ಜಿ ರಾಘವನ್ ಮತ್ತು ಧ್ಯಾನ್ ಚಿನ್ನಪ್ಪ, ವಕೀಲರಾದ ರಿಷಬ್ ಗುಪ್ತಾ, ಮನ್ಮೀತ್ ಸಿಂಗ್ ಹಾಗೂ ಸಾಯಿರಾಮ್ ಸುಬ್ರಮಣಿಯನ್ ವಾದ ಮಂಡಿಸಿದ್ದರು.

ಹೂಡಿಕೆದಾರರನ್ನು ಹಿರಿಯ ವಕೀಲರಾದ ಸುದೀಪ್ತೋ ಸರ್ಕಾರ್, ಸತೀಶ್ ಪರಾಶರನ್ ಹಾಗೂ ವಕೀಲ ಟೈನ್ ಅಬ್ರಹಾಂ ಪ್ರತಿನಿಧಿಸಿದ್ದರು.

ಬೈಜುಸ್‌ ದಬ್ಬಾಳಿಕೆ ಮತ್ತು ದುರಾಡಳಿತ ನಡೆಸಿದೆ ಎಂದು ಪ್ರೋಸೆಸ್‌ ಎನ್‌ವಿಯ ಅಂಗಸಂಸ್ಥೆಯಾದ ಎಡ್ಟೆಕ್ ಇನ್ವೆಸ್ಟ್ಮೆಂಟ್ಸ್; ಜನರಲ್ ಅಟ್ಲಾಂಟಿಕ್ ಸಿಂಗಾಪುರ್; ಪೀಕ್ XV ಪಾರ್ಟ್ನರ್ಸ್ ಆಪರೇಷನ್ಸ್ ಎಲ್‌ಎಲ್‌ಸಿ ಹಾಗೂ ಸೋಫಿನಾ ಆರೋಪಿಸಿದ್ದವು.

ಬಾಕಿ ಇರುವ ಈ ಅರ್ಜಿಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಕರಣ ನಿರ್ಧರಿಸುವವರೆಗೆ ನಿಗದಿತ ಇಜಿಎಂ ಅನ್ನು ಎನ್‌ಸಿಎಲ್‌ಟಿ ಮುಂದೂಡಬೇಕು ಎಂದು ಅರ್ಜಿದಾರ ಸಂಸ್ಥೆಗಳು ಕೋರಿದ್ದವು.

ಇಜಿಎಂ ನೆಪವೊಡ್ಡಿ, ಬೈಜುಸ್ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಹೊರಟಿದ್ದು ಆ ಮೂಲಕ ದಬ್ಬಾಳಿಕೆ ಮತ್ತು ದುರಾಡಳಿತವನ್ನು ಆರೋಪಿಸಿರುವ ತಮ್ಮ ಅರ್ಜಿಯನ್ನು ನಿಷ್ಪ್ರಯೋಜಕವೆಂದು ಪರಿಗಣಿಸುವಂತೆ ಕೋರಲು ಯತ್ನಿಸುತ್ತಿದೆ ಎಂದು ಅವು ಅಳಲು ತೋಡಿಕೊಂಡಿದ್ದವು.

ಆದರೆ, ಹೂಡಿಕೆದಾರರು ತೊಂದರೆಗೀಡಾದ ಯಾವುದೇ ನಿರ್ಧಾರ ಅಥವಾ ನಿರ್ಣಯವನ್ನು ಮಹಾಸಭೆಯಲ್ಲಿ ತೆಗೆದುಕೊಂಡರೆ, ಆಗ ಅದನ್ನು ತನ್ನೆದುರು ಪ್ರಶ್ನಿಸಬಹುದು ಎಂದು ನ್ಯಾಯಮಂಡಳಿ ಸ್ಪಷ್ಟಪಡಿಸಿದೆ.

"ಇಜಿಎಂ ೆ ತಡೆ ನೀಡಲು ಸಾಧ್ಯವಿಲ್ಲ, ತೀರ್ಪುಗಳು ಬಂದಿವೆ. ಆದರೆ ಇಜಿಎಂ ಕೈಗೊಳ್ಳುವ ನಿರ್ಧಾರವನ್ನು ಪ್ರಶ್ನಿಸಬಹುದಾಗಿದೆ" ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ.

ತನ್ನ ಅಧಿಕೃತ ಷೇರು ಬಂಡವಾಳವನ್ನು ಹೆಚ್ಚಿಸದೆ ಷೇರುಗಳ ಹಂಚಿಕೆ ಮಾಡುವುದಿಲ್ಲ ಎಂಬ ಬೈಜುಸ್ ಹೇಳಿಕೆಯನ್ನು ಎನ್‌ಸಿಎಲ್‌ಟಿ ಬೆಂಗಳೂರು ಫೆಬ್ರವರಿ 27ರಂದು ದಾಖಲಿಸಿತ್ತು.

ಇದಲ್ಲದೆ, ಹೂಡಿಕೆದಾರರ ಹಕ್ಕುಗಳು ಪೂರ್ವಾಗ್ರಹಕ್ಕೆ ಒಳಗಾಗದಂತೆ ಹಕ್ಕುಗಳ ವಿತರಣೆಯ ಮುಕ್ತಾಯ ದಿನಾಂಕ ವಿಸ್ತರಿಸುವಂತೆ ಬೈಜೂಸ್‌ಗೆ ನಿರ್ದೇಶಿಸಲಾಗಿತ್ತು..

ಪ್ರಸ್ತುತ ಆಡಳಿತ ಮಂಡಳಿಯನ್ನು ವಜಾಗೊಳಿಸುವಂತೆ ಕೋರಿ ಹೂಡಿಕೆದಾರರು ಸಲ್ಲಿಸಿರು ಅರ್ಜಿಯ ವಿಚಾರಣೆಗಾಗಿ ಪ್ರಕರಣವನ್ನು ಏಪ್ರಿಲ್ 4ಕ್ಕೆ ಮುಂದೂಡಲಾಗಿದೆ.

ನಾಳಿನ ಮಹಾಸಭೆಗೆ ಕಂಪೆನಿ ಕರೆ ನೀಡಿದ್ದನ್ನು ಪ್ರಶ್ನಿಸಿ ಹೂಡಿಕೆದಾರರು ಮಾರ್ಚ್ 20ರಂದು ನ್ಯಾಯಮಂಡಳಿಯ ಮೊರೆ ಹೋಗಿದ್ದರು.

ಆದರೆ, ಅಧಿಕೃತ ಬಂಡವಾಳ ಸಂಗ್ರಹಿಸುವ ಕುರಿತಂತೆ ನ್ಯಾಯಮಂಡಳಿ ನೀಡಿರುವ ಆದೇಶಗಳನ್ನಷ್ಟೇ ತಾನು ಪಾಲಿಸುತ್ತಿರುವುದಾಗಿ ಬೈಜುಸ್ ವಾದಿಸಿತು. ಇದಕ್ಕೆ ವಿರುದ್ಧವಾಗಿ, ಹೂಡಿಕೆದಾರರು ತನಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಅದು ಕಳವಳ ವ್ಯಕ್ತಪಡಿಸಿತು.

Kannada Bar & Bench
kannada.barandbench.com