ಸಲಿಂಗ ವಿವಾಹವಾದ ದಂಪತಿಗೆ ಮಕ್ಕಳನ್ನು ದತ್ತು ಪಡೆಯುವ ಹಕ್ಕು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿನ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್) ಸುಪ್ರೀಂ ಕೋರ್ಟ್‌ಗೆ ಮಧ್ಯಪ್ರವೇಶ ಅರ್ಜಿ ಸಲ್ಲಿಸಿದೆ.
ಸಲಿಂಗ ಮನೋಧರ್ಮದ ಪೋಷಕರು ದತ್ತು ಪಡೆದ ಮಗುವಿನ ಮೇಲೆ ಸಾಮಾಜಿಕ ಮತ್ತು ಮಾನಸಿಕ ಪರಿಣಾಮಗಳಾಗುತ್ತವೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಯಲ್ಲಿ ಎನ್‌ಸಿಪಿಸಿಆರ್ ವಾದಿಸಿದೆ.
ಅರ್ಜಿಯ ಪ್ರಮುಖಾಂಶಗಳು
ಸಲಿಂಗ ದಂಪತಿಗೆ ದತ್ತು ಪಡೆಯಲು ಅವಕಾಶ ನೀಡುವುದು ಮಕ್ಕಳಿಗೆ ಅಪಾಯಕಾರಿ.
ಅಮೆರಿಕದ ಕ್ಯಾಥೋಲಿಕ್ ವಿಶ್ವವಿದ್ಯಾನಿಲಯದ ಡಾ ಪಾಲ್ ಸುಲ್ಲಿನ್ಸ್ ನಡೆಸಿರುವ ಅಧ್ಯಯನದ ಪ್ರಕಾರ ಪುರುಷ- ಮಹಿಳೆಯಿಂದ ಜನಿಸಿದ ಮಕ್ಕಳಿಗಿಂತ ಸಲಿಂಗ ಪೋಷಕರನ್ನು ಪಡೆದ ಮಕ್ಕಳಿಗೆ ಭಾವನಾತ್ಮಕ ಮತ್ತು ಬೆಳವಣಿಗೆಯ ಸಮಸ್ಯೆಗಳು ಎರಡು ಪಟ್ಟು ಹೆಚ್ಚು.
ಸಮಸ್ಯೆಇರುವ ವ್ಯಕ್ತಿಗಳು ಮಕ್ಕಳನ್ನು ಬೆಳಸಲು ಅವಕಾಶ ನೀಡಿದರೆ ಪ್ರಯೋಗಕ್ಕಾಗಿ ಮಕ್ಕಳನ್ನು ಸಂಘರ್ಷಕ್ಕೆ ಒಡ್ಡಿದಂತಾಗುತ್ತದೆ. ಇದು ಮಕ್ಕಳ ಹಿತದೃಷ್ಟಿಯಿಂದ ಕೂಡಿಲ್ಲ.
ಸಾಂಪ್ರದಾಯಿಕವಾಗಿ ವಿವಾಹವಾದವರಿಗಿಂತಲೂ ಸಲಿಂಗಿ ಪೋಷಕರಿಗೆ ಸೀಮಿತ ಮಾನ್ಯತೆ ಸಿಗಬಹುದು. ಇದರಿಂದ ಅವರ ಮಕ್ಕಳಿಗೂ ಮಾನ್ಯತೆ ಸೀಮಿತವಾಗಿದ್ದು ಮಕ್ಕಳ ಒಟ್ಟಾರೆ ವ್ಯಕ್ತಿತ್ವದ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ.
ಸಮಾನತೆಯ ಹಕ್ಕು ಎಂದರೆ ಅಸಮಾನತೆಯನ್ನು ಸಮೀಕರಿಸುವುದು ಎಂದರ್ಥವಲ್ಲ. ಆದ್ದರಿಂದ, ಒಂದು ವರ್ಗ ರೂಪಿಸುವುದು ಸಂವಿಧಾನದ 14ನೇ ವಿಧಿಯ ನಿಬಂಧನೆಗಳಿಗೆ ವಿರುದ್ಧವಾಗದು. ಮಕ್ಕಳನ್ನು ಪಡೆಯುವುದಕ್ಕಾಗಿ ಭಿನ್ನಲಿಂಗೀಯ ದಂಪತಿಯನ್ನು ಒಂದು ವರ್ಗಕ್ಕೆ ಸೇರಿಸಿ ಸಲಿಂಗ ವಿವಾಹಿತರನ್ನು ಬೇರೊಂದು ವರ್ಗಕ್ಕೆ ಸೇರಿಸುವುದು ಸೂಕ್ತ.
ಇದೇ ರೀತಿಯ ಸಾಮಾಜಿಕ-ಸಾಂಸ್ಕೃತಿಕ ಪರಿಸರದಲ್ಲಿ ದತ್ತು ಪಡೆಯುವುದು ಪ್ರಸ್ತುತ ಸನ್ನಿವೇಶದಲ್ಲಿ ಸಾಧ್ಯವಾಗುವುದಿಲ್ಲ ಆದ್ದರಿಂದ, ಕಾನೂನು ಸಂಘರ್ಷದಲ್ಲಿರುವ ಬಾಲಕರ ಕಾಯಿದೆಯ ತತ್ವಗಳಿಗೆ ಹಾಗೂ ಭಾರತೀಯ ಕಾನೂನು, ಅಂತಾರಾಷ್ಟ್ರೀಯ ಒಪ್ಪಂದಗಳ ಅಡಿಯ ನಿಯಮಗಳಿಗೆ ಇದು ವಿರುದ್ಧವಾಗಿದೆ
ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆಯು ಹಿಂದೂ ಗಂಡು ಮತ್ತು ಹೆಣ್ಣುಗಳಿಗೆ ಮಾತ್ರ ದತ್ತು ತೆಗೆದುಕೊಳ್ಳುವ ಅಧಿಕಾರ ನೀಡುತ್ತದೆ. ಹೀಗಾಗಿ ಸಲಿಂಗ ದಂಪತಿಗೆ ಇದು ಅನ್ವಯವಾಗದು.
ಮಕ್ಕಳಿಗೆ ಸಂಬಂಧಿಸಿದಂತೆ ಜಾರಿಯಲ್ಲಿರುವ ಕಾನೂನು ವ್ಯವಸ್ಥೆಯಲ್ಲಿ ಸಲಿಂಗ ದಂಪತಿಗ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದಕ್ಕೆ ಅವಕಾಶ ಇಲ್ಲ.
ಸಲಿಂಗ ದಂಪತಿ ಬಗ್ಗೆ ಸೂಕ್ತ ಕಾನೂನು ರೂಪಿಸುವ ಅಗತ್ಯವಿದೆ. ಆಗ ಮಾತ್ರ ಮಕ್ಕಳನ್ನು ದತ್ತು ನೀಡಬಹುದಾಗಿದ್ದು ಪ್ರಸ್ತುತ ಅರ್ಜಿಗಳ ಮೂಲಕ ದತ್ತು ಪಡೆಯುವುದು ಅಕಾಲಿಕವಾಗುತ್ತದೆ.
ಸಲಿಂಗವಿವಾಹಕ್ಕೆಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಿವೈಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಪಿಎಸ್ ನರಸಿಂಹ ಹಾಗೂ ಹಿಮಾಕೊಹ್ಲಿ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ನಾಳೆ ವಿಚಾರಣೆ ನಡೆಸಲಿದೆ.