ಎನ್‌ಡಿಟಿವಿ ಪ್ರವರ್ತಕರಿಂದ ರೂ 27 ಕೋಟಿ ದಂಡ ವಸೂಲಿಗೆ ತಡೆ ನೀಡಿದ ಸುಪ್ರೀಂಕೋರ್ಟ್, ಎಸ್‌ಎಟಿ ಆದೇಶ ಮಾರ್ಪಾಡು

ಎನ್‌ಡಿಟಿವಿಯ ಮೂವರು ಪ್ರವರ್ತಕರಾದ ಪ್ರಣಯ್ ರಾಯ್ ರಾಧಿಕಾ ರಾಯ್ ಹಾಗೂ ಆರ್‌ಆರ್‌ಪಿಆರ್‌ ಹೋಲ್ಡಿಂಗ್ ಲಿಮಿಟೆಡ್‌ಗೆ ಸೆಬಿ ಕಳೆದ ಡಿಸೆಂಬರ್ 24ರಂದು ರೂ 27 ಕೋಟಿ ದಂಡ ವಿಧಿಸಿತ್ತು.
ಎನ್‌ಡಿಟಿವಿ ಪ್ರವರ್ತಕರಿಂದ ರೂ 27 ಕೋಟಿ ದಂಡ ವಸೂಲಿಗೆ ತಡೆ ನೀಡಿದ ಸುಪ್ರೀಂಕೋರ್ಟ್, ಎಸ್‌ಎಟಿ ಆದೇಶ ಮಾರ್ಪಾಡು

ಎನ್‌ಡಿಟಿವಿಯ ಷೇರುದಾರರಿಗೆ ದರ ಸಂವೇದಿ ಮಾಹಿತಿ ಬಹಿರಂಗಪಡಿಸದೇ ಇರುವ ಕಾರಣಕ್ಕೆ ವಾಹಿನಿಯ ಮೂವರು ಪ್ರವರ್ತಕರಾದ ಪ್ರಣಯ್‌ ರಾಯ್‌, ರಾಧಿಕಾ ರಾಯ್‌ ಮತ್ತು ಆರ್‌ಆರ್‌ಪಿಆರ್‌ ಹೋಲ್ಡಿಂಗ್‌ ಲಿಮಿಟೆಡ್‌ಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ವಿಧಿಸಿದ್ದ ₹ 27 ಕೋಟಿ ದಂಡ ವಸೂಲಿಗೆ ಸುಪ್ರೀಂಕೋರ್ಟ್‌ ಶುಕ್ರವಾರ ತಡೆ ನೀಡಿದೆ.

ಸೆಬಿ ಆದೇಶದ ವಿರುದ್ಧ ಮೇಲ್ಮನವಿ ವಿಚಾರಣೆ ಹೊತ್ತಿಗೆ ದಂಡ ಮೊತ್ತದ ಶೇ 50 ರಷ್ಟನ್ನು ಠೇವಣಿಯಾಗಿಡಬೇಕು ಎಂದು ಷೇರು ಮೇಲ್ಮನವಿ ನ್ಯಾಯಮಂಡಳಿ (ಎಸ್‌ಎಟಿ- ಸೆಕ್ಯುರಿಟೀಸ್‌ ಅಪೆಲೆಟ್‌ ಟ್ರಿಬ್ಯುನಲ್‌) ಫೆಬ್ರವರಿ 15 ರಂದು ನೀಡಿದ್ದ ಆದೇಶವನ್ನು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರಿದ್ದ ಪೀಠ ಮಾರ್ಪಡಿಸಿತು.

ಏಪ್ರಿಲ್ 6 ರಂದು ಅಂತಿಮ ವಿಚಾರಣೆಗೆ ಪಟ್ಟಿ ಮಾಡಲಾದ ಎಸ್‌ಎಟಿ ವಿ ಮೇಲ್ಮನವಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದಕ್ಕಾಗಿ ಸಹಕಾರ ನೀಡುವಂತೆ ಸುಪ್ರೀಂಕೋರ್ಟ್‌ ರಾಯ್‌ ದಂಪತಿಗೆ ನಿರ್ದೇಶನ ನೀಡಿತು.

Also Read
ಷೇರುದಾರರಿಂದ ದರ ಸಂವೇದಿ ಮಾಹಿತಿ ಬಚ್ಚಿಟ್ಟ ಆರೋಪ: ಪ್ರಣಯ್‌, ರಾಧಿಕಾ, ಆರ್‌ಆರ್‌ಪಿಆರ್‌‌ಗೆ ₹27 ಕೋಟಿ ದಂಡ

ರೂ. 25 ಕೋಟಿ ರೂಪಾಯಿಗಳನ್ನು ಎಲ್ಲಾ ಮೂವರು ಪ್ರವರ್ತಕರಿಗೂ ಹಾಗೂ ತಲಾ ರೂ 1 ಕೋಟಿ ಮೊತ್ತದ ದಂಡವನ್ನು ಪ್ರಣಯ್ ಮತ್ತು ರಾಧಿಕಾ ರಾಯ್ ಪ್ರತ್ಯೇಕವಾಗಿ ಪಾವತಿಸಲು ಸೆಬಿ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ರಾಯ್‌ ದಂಪತಿ ಎಸ್‌ಎಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಸೆಬಿ ಆದೇಶದ ವಿರುದ್ಧದ ಮೇಲ್ಮನವಿ ವಿಚಾರಣೆ ಹೊತ್ತಿಗೆ ನಾಲ್ಕು ವಾರದೊಳಗೆ ದಂಡ ಮೊತ್ತದ ಶೇ 50 ರಷ್ಟನ್ನು ಬಡ್ಡಿರಹಿತವಾಗಿ ಠೇವಣಿ ಇರಿಸಿದರೆ ಮೇಲ್ಮನವಿ ವಿಚಾರಣೆ ನಡೆಯುವಾಗ ಬಾಕಿ ಮೊತ್ತವನ್ನು ವಸೂಲಿ ಮಾಡುವಂತಿಲ್ಲ ಎಂದು ಎಸ್‌ಎಟಿ ಫೆಬ್ರವರಿ 15 ರಂದು ನೀಡಿದ್ದ ಆದೇಶದಲ್ಲಿ ಹೇಳಿತ್ತು. ಈ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು.

ಎಸ್‌ಎಟಿ ತನ್ನ ಷರತ್ತುಬದ್ಧ ಆದೇಶಕ್ಕೆ ಯಾವುದೇ ಕಾರಣಗಳನ್ನು ನೀಡಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಉಲ್ಲೇಖಿಸಿದೆ. “ಅರ್ಧ ದಂಡ ಠೇವಣಿ ಇರಿಸುವ ಷರತ್ತುಬದ್ಧ ಆದೇಶಕ್ಕೆ ಎಸ್‌ಎಟಿ ಯಾವುದೇ ಕಾರಣ ನೀಡಿಲ್ಲ. ಎಸ್‌ಎಟಿ ಈ ನ್ಯಾಯಾಲಯದ ಮೇಲ್ಮನವಿ ವ್ಯಾಪ್ತಿಗೆ ಬರುತ್ತದೆ. ವಿವೇಚನಾರಹಿತ ಆದೇಶಗಳು ಸುಪ್ರೀಂಕೋರ್ಟ್‌ನ ನ್ಯಾಯಾಂಗ ಮೇಲ್ವಿಚಾರಣೆಗೆ ಅನುಕೂಲಕರವಾಗಿರುವುದಿಲ್ಲ” ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ತಾರ್ಕಿಕ ಆದೇಶ ನೀಡಿದ್ದಕ್ಕಾಗಿ ಪ್ರಕರಣವನ್ನು ಸಾಮಾನ್ಯವಾಗಿ ಎಸ್‌ಎಟಿಗೆ ಒಪ್ಪಿಸಬಹುದಾಗಿತ್ತು. ಆದರೆ ಮೇಲ್ಮನವಿಗಳನ್ನು ಏಪ್ರಿಲ್ 6 ರಂದು ಅಂತಿಮ ವಿಚಾರಣೆಗೆ ನಿಗದಿಪಡಿಸಲಾಗಿರುವುದರಿಂದ ಪ್ರಕರಣವನ್ನು ಎಸ್‌ಎಟಿಗೆ ಕಳುಹಿಸದೆ ಆದೇಶ ಹೊರಡಿಸುವುದಾಗಿ ಸುಪ್ರೀಂಕೋರ್ಟ್‌ ತಿಳಿಸಿತು. ಆ ಮೂಲಕ ಶೇ 50ರಷ್ಟು ದಂಡ ಠೇವಣಿ ಇಡುವ ಷರತ್ತನ್ನು ತೆಗೆದುಹಾಕಿ ಎಸ್‌ಎಟಿ ಆದೇಶವನ್ನು ಮಾರ್ಪಡಿಸಿತು.

Related Stories

No stories found.
Kannada Bar & Bench
kannada.barandbench.com