ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್‌ಸಿ ಎಸ್‌ಟಿ) ದೌರ್ಜನ್ಯ ತಡೆ ಕಾಯಿದೆಯಡಿ ಬಾಕಿ ಇರುವ ಪ್ರಕರಣಗಳ ವಿವರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿದೆ. ಜೊತೆಗೆ ಪ್ರಕರಣಗಳಲ್ಲಿ ನೀಡಲಾದ ಖುಲಾಸೆ/ವಿಲೇವಾರಿ/ಶಿಕ್ಷೆಯ ಆದೇಶದ ಕುರಿತು ಮಾಹಿತಿ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.
ಎಸ್‌ಸಿ / ಎಸ್‌ಟಿ ಕಾಯಿದೆ ಮತ್ತು ಅದರ ವಿವಿಧ ನಿಯಮಗಳನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು. ರಾಜ್ಯ ಸರ್ಕಾರದ ವರದಿ 2015ರಿಂದ 2020ರ ಅಕ್ಟೋಬರ್ ಅಂತ್ಯದವರೆಗಿನ ದತ್ತಾಂಶವನ್ನು ಒಳಗೊಂಡಿರಬೇಕು. ಅಲ್ಲದೆ ತಡೆಯಾಜ್ಞೆ ನೀಡಿದ ಪ್ರಕರಣಗಳ ವಿವರವನ್ನು ಕೂಡ ಸರ್ಕಾರ ಒದಗಿಸಬೇಕು ಎಂದಿರುವ ನ್ಯಾಯಾಲಯ ಎಸ್‌ಸಿ ಎಸ್‌ಟಿ ಕಾಯಿದೆಯಡಿ ರೂಪಿಸಲಾದ ವಿವಿಧ ಸಮಿತಿಗಳು ತೋರುತ್ತಿರುವ ಗಂಭೀರ ಜಡತ್ವವನ್ನು ಪ್ರಶ್ನಿಸಿದೆ.
ಸರ್ಕಾರದ ವರದಿಯು 2015ರಿಂದ 2020 ರ ಅಕ್ಟೋಬರ್ ಅಂತ್ಯದವರೆಗಿನ ದತ್ತಾಂಶವನ್ನು ಒಳಗೊಂಡಿರಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಅಕ್ಟೋಬರ್ 12 ರಂದು ಪುನಾರಚನೆಗೊಂಡ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ 2017ರ ನಂತರ ಇದೇ ಮೊದಲ ಬಾರಿಗೆ ನವೆಂಬರ್ 11ರಂದು ಸಭೆ ನಡೆಸಿದೆ ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿದೆ.
ಉನ್ನತಾಧಿಕಾರದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಕೂಡ ಇದೇ ರೀತಿ ಮಾಡಿತ್ತು. ಜಿಲ್ಲಾ ಮತ್ತು ಉಪ ವಿಭಾಗೀಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಗಳು ಕೂಡ ವಿರಳವಾಗಿ ಸಭೆ ಸೇರುತ್ತಿವೆ ಎಂದಿರುವ ಪೀಠ, ಎಸ್‌ಸಿ ಎಸ್‌ಟಿ ಕಾಯಿದೆಯ ನಿಬಂಧನೆಗಳು ಸೂಕ್ತ ರೀತಿಯಲ್ಲಿ ಜಾರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಾಯಿದೆಯ ನಿಯಮಾವಳಿಗಳ ಪ್ರಕಾರ ವರ್ಷಕ್ಕೆ ಎರಡು ಬಾರಿ ಜನವರಿ ಮತ್ತು ಜುಲೈ ತಿಂಗಳಿನಲ್ಲಿ ಈ ಸಮಿತಿ ಸಭೆ ನಡೆಸಬೇಕು ಎಂದು ತಿಳಿಸಿದೆ. ಅಲ್ಲದೆ ಈ ಸಮಿತಿಗಳು ಕನಿಷ್ಠ ಸಂಖ್ಯೆಯ ಸಭೆ ನಡೆಸುತ್ತಿವೆಯೇ ಎಂಬುದನ್ನು ರಾಜ್ಯ ಸರ್ಕಾರ ಖಾತ್ರಿಪಡಿಸಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.
ಸಂತ್ರಸ್ತರಿಗೆ ಪರಿಹಾರ ನೀಡಿದ ಪ್ರಕರಣಗಳೆಷ್ಟು ಎಂಬ ಬಗ್ಗೆ ಸರ್ಕಾರ ನೀಡಿರುವ ಮಾಹಿತಿ ಅಸಮರ್ಪಕವಾಗಿದೆ ಎಂದು ತಿಳಿಸಿರುವ ಪೀಠ ಪರಿಹಾರ ನೀಡಿದ ಪ್ರಕರಣಗಳ ವರ್ಷವಾರು ಮಾಹಿತಿ ಕಲೆಹಾಕುವಂತೆ ನಿರ್ದೇಶನ ನೀಡಿದೆ. ಇದಲ್ಲದೆ, ಕಾಯಿದೆಯಲ್ಲಿ ಉಲ್ಲೇಖಿಸಿರುವಂತೆ ʼಪ್ರಾಸಂಗಿಕ ಯೋಜನೆʼಯನ್ನು ಜಾರಿಗೆ ತರಲು ಯಾವುದೇ ಪ್ರಯತ್ನ ನಡೆಯುತ್ತಿದೆಯೇ ಎಂಬ ಕುರಿತು ರಾಜ್ಯ ಸರ್ಕಾರ ದಾಖಲೆ ಒದಗಿಸಬೇಕೆಂದು ನ್ಯಾಯಾಲಯ ಸೂಚಿಸಿದೆ.
ಆದೇಶವನ್ನು ಇಲ್ಲಿ ಓದಿ: