ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲು ರೈತರು ದೆಹಲಿಗೆ ತೆರಳದಂತೆ ತಡೆಯುವ ಸಲುವಾಗಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ನಡುವಿನ ಶಂಭು ಗಡಿಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಹಂತ ಹಂತವಾಗಿ ತೆಗೆದುಹಾಕಲು ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ [ಹರಿಯಾಣ ಸರ್ಕಾರ ಮತ್ತು ಉದಯ್ ಪ್ರತಾಪ್ ಸಿಂಗ್ ನಡುವಣ ಪ್ರಕರಣ].
ಗಡಿಗಳನ್ನು ಮುಚ್ಚಲು ಹರಿಯಾಣ ಸರ್ಕಾರ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಹಂತಹಂತವಾಗಿ ತೆಗೆದುಹಾಕುವ ಸಂಬಂಧ ರಾಜ್ಯದ ಪೊಲೀಸ್ ಅಧಿಕಾರಿಗಳು ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು ಸಭೆ ನಡೆಸಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಸೂಚಿಸಿತು. ಸಂಬಂಧಪಟ್ಟ ಕಕ್ಷಿದಾರರು ನ್ಯಾಯಾಲಯದ ಆದೇಶಕ್ಕೆ ಕಾಯದೆ ಬ್ಯಾರಿಕೇಡ್ ತೆರವುಗೊಳಿಸಬಹುದು ಎಂದು ಹೇಳಿತು.
ಪಂಜಾಬ್ ಮತ್ತು ಹರಿಯಾಣವನ್ನು ಸಂಪರ್ಕಿಸುವ ಶಂಭು ಗಡಿಯನ್ನುಸಂಚಾರಕ್ಕೆ ಮುಕ್ತಗೊಳಿಸಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚಿಗೆ ನೀಡಿದ್ದ ನಿರ್ದೇಶನ ಪ್ರಶ್ನಿಸಿ ಹರಿಯಾಣ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠ ಈ ವಿಚಾರ ತಿಳಿಸಿದೆ.
ಪ್ರತಿಭಟನಾನಿರತ ರೈತರಿಗೆ ತಮ್ಮ ಕುಂದುಕೊರತೆ ಹೇಳಲು ಹಕ್ಕಿದ್ದು ಕೇಂದ್ರ ಮತ್ತು ಪಂಜಾಬ್ ಸರ್ಕಾರಗಳು ಸೇರಿದಂತೆ ಅಧಿಕಾರಿಗಳು ರೈತರ ಬೇಡಿಕೆ ಈಡೇರಿಸುವುದಕ್ಕಾಗಿ ತಟಸ್ಥ ವ್ಯಕ್ತಿಗಳನ್ನು ನೇಮಿಸಬೇಕು ಎಂದು ಹಿಂದಿನ ವಿಚಾರಣೆಗಳಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.
ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹಾಗೂ ಅಲ್ಲಿನ ಬ್ಯಾರಿಕೇಡ್‌ಗಳನ್ನು ಹಂತಹಂತವಾಗಿ ತೆಗೆಯಲು ಪ್ರಸ್ತಾವನೆ ಸಲ್ಲಿಸುವಂತೆ ಅದು ಎರಡು ರಾಜ್ಯಗಳಿಗೆ ಸೂಚಿಸಿತ್ತು.
ರೈತರ ಬೇಡಿಕೆ ಈಡೇರಿಸುವ ಸಂಬಂಧ ಅವರೊಡನೆ ಮಾತನಾಡಲು ರಚಿಸಲಾದ ಸಮಿತಿಯ ಸದಸ್ಯರ ಹೆಸರುಗಳನ್ನು ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಮತ್ತು ಪಂಜಾಬ್‌ನ ಅಡ್ವೊಕೇಟ್ ಜನರಲ್ (ಎಜಿ) ಗುರ್ಮಿಂದರ್ ಸಿಂಗ್ ಅವರು ಇಂದು ನ್ಯಾಯಾಲಯಕ್ಕೆ ಸಲ್ಲಿಸಿದರು. ಆ ಪಟ್ಟಿಗೆ ನ್ಯಾಯಾಲಯ ಮೆಚ್ಚುಗೆ ಸೂಚಿಸಿತು.
ಪ್ರಕರಣದ ವಿಚಾರಣೆಯನ್ನು ಆಗಸ್ಟ್ 22ಕ್ಕೆ ಮುಂದೂಡಲಾಗಿದೆ.