ಭಾರತೀಯ ಚಿಂತನೆ ಅಪಮಾನಿಸುವ ದನಿ, ಕೃತಿ ಬಗ್ಗೆ ಎಚ್ಚರ ಅಗತ್ಯ: ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌

ಭಾರತ ಮಾತೆಗೆ ಅನ್ಯಾಯವಾಗದಂತೆ ಮಾಡಲು ಏನು ಮಾಡಬೇಕು ಎಂದು ಎಲ್ಲರೂ ಯೋಚಿಸಬೇಕು. ಆಗ ರಾಷ್ಟ್ರೀಯ ಮೌಲ್ಯಗಳು ಮತ್ತು ಅದನ್ನು ಆಧರಿಸಿದ ಸಂವಿಧಾನ ಉಳಿಯುತ್ತದೆ. ಇಲ್ಲವಾದಲ್ಲಿ ಭಾರತಕ್ಕೂ ಆಪತ್ತು ಎದುರಾಗುತ್ತದೆ ಎಂದ ನ್ಯಾ. ದೀಕ್ಷಿತ್‌.
ಭಾರತೀಯ ಚಿಂತನೆ ಅಪಮಾನಿಸುವ ದನಿ, ಕೃತಿ ಬಗ್ಗೆ ಎಚ್ಚರ ಅಗತ್ಯ: ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌
Published on

“ಭಾರತೀಯ ಚಿಂತನೆ ಅಪಮಾನಿಸುವ ಸ್ವರ, ಕೃತಿಗಳ ಬಗ್ಗೆ ಎಚ್ಚರದಿಂದ ಇರಬೇಕು” ಎಂದು ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಯೋಜಿಸಿದ್ದ ಬೃಹತ್‌ ಬ್ರಾಹ್ಮಣ ಸಮಾವೇಶದಲ್ಲಿ ಅವರು ಮಾತನಾಡಿದ್ದಾರೆ.

“ಪೂರ್ವಾಶ್ರಮದಲ್ಲಿ, ನ್ಯಾಯಮೂರ್ತಿಯಾಗುವುದಕ್ಕೂ ಮುನ್ನ ರಾಷ್ಟ್ರೀಯವಾದಿ ಚಿಂತನೆಗಳ ಬ್ರಾಹ್ಮಣೇತರ ಚಳವಳಿಗಳೊಂದಿಗೆ ಗುರುತಿಸಿಕೊಂಡಿದ್ದೆ. ನ್ಯಾಯಮೂರ್ತಿಯಾದ ಮೇಲೆ ಎಲ್ಲಾ ಚಳವಳಿಗಳಿಂದ ನಿವೃತ್ತಿಗೊಂಡು, ನ್ಯಾಯಮೂರ್ತಿಯಾಗಿ ಕೆಲಸ ಮಾಡುತ್ತಿದ್ದೇನೆ. ನ್ಯಾಯಮೂರ್ತಿಯಾಗಿರುವುದರಿಂದ ನನಗೆ ಕೆಲವು ಇತಿಮಿತಿಗಳಿವೆ. ಆ ಇತಿಮಿತಿಯ ಹಿನ್ನೆಲೆಯಲ್ಲಿ ನನ್ನ ಮಾತನ್ನು ಹೇಳುತ್ತಿದ್ದೇನೆ” ಎಂದು ಹೇಳಿದ್ದಾರೆ.

“ಬ್ರಾಹ್ಮಣ್ಯ ಎನ್ನುವ ವಿಷಯವು ಜಾತಿ ಸೂಚಕವಾಗಬಾರದು, ವರ್ಣ ಸೂಚಕವಾಗಬೇಕು ಎಂಬುದು ನನ್ನ ಅಭಿಮತ. ಏಕೆಂದರೆ ನಮ್ಮ ವೇದಗಳನ್ನು ವಿಂಗಡಿಸಿದ ವೇದವ್ಯಾಸ ಮೀನುಗಾರನ ಮಗ. ಆ ವೇದಗಳನ್ನು ತಲೆಯ ಮೇಲೆ ಇಟ್ಟುಕೊಂಡಿದ್ದು, ಗೌರವಿಸುತ್ತೇವೆ. ರಾಮಾಯಣದ ಕರ್ತೃ ವಾಲ್ಮೀಕಿ ಪರಿಶಿಷ್ಟ ಪಂಗಡಕ್ಕೆ ಸೇರಿದವನು. ಹಾಗೆಂದು ನಾವು ಅದನ್ನು ಕಡೆಗಣಿಸಿದ್ದೇವೆಯೇ? ಅದು ಶ್ರೀರಾಮನ ಕತೆ. ನಮ್ಮೆಲ್ಲರ ಶ್ರೀರಾಮ. ನಾವು ಅದನ್ನು ಮನಸ್ಸು, ತಲೆಯ ಮೇಲೆ ಇರಿಸಿಕೊಂಡು ಶತಮಾನಗಳಿಂದ ಆರಾಧಿಸುತ್ತಿದ್ದೇವೆ. ರಾಮಾಯಣದ ಮೌಲ್ಯಗಳನ್ನ ಸಂವಿಧಾನದಲ್ಲಿ ಸೇರಿಸಿದ್ದೇವೆ. ಸಂವಿಧಾನದಲ್ಲಿರುವ 32 ಚಿತ್ರಗಳಲ್ಲಿ ಒಂದು ಚಿತ್ರ ಶ್ರೀರಾಮನದ್ದಾಗಿದೆ. ಅನೇಕ ಅಬ್ರಾಹ್ಮಣರು ವೇದ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಭಾರತ ರತ್ನ ಬಿ ವಿ ಕಾಣೆ ಅವರು “ಹಿಸ್ಟರಿ ಆಫ್‌ ಧರ್ಮ ಶಾಸ್ತ್ರ” ಎಂಬ ಏಳು ಸಂಪುಟಗಳ ಕೃತಿಯಲ್ಲಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಎಲ್ಲಾ ಸಮುದಾಯಗಳನ್ನು ಪ್ರೀತಿಸಿ, ಗೌರವಿಸುತ್ತಾ ಹೆಜ್ಜೆ ಇಡಬೇಕು. ನನ್ನ ಮುಂದಿನ ಮಾತುಗಳನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು ಎಂಬುದು ನನ್ನ ಮನವಿ” ಎಂದು ಕೋರಿದ್ದಾರೆ.

Akhila Karnataka Brahmana Mahasabha
Akhila Karnataka Brahmana Mahasabha

“ಬ್ರಾಹ್ಮಣರು ಎಂಬುದು ಹೆಮ್ಮೆಯ ವಿಚಾರ. ದ್ವೈತ, ಅದ್ವೈತ, ಶುದ್ಧಾದೈತ ಮತ್ತು ವಿಶಿಷ್ಟಾದ್ವೈತ ಒಳಗೊಂಡು ಅನೇಕ ಮತ, ಚಿಂತನೆ ಹುಟ್ಟಿ ಹಾಕಿ ಬೆಳೆಸಿದವರು ಬ್ರಾಹ್ಮಣರು. ಸಮಾಜಕ್ಕೆ ಬಸವೇಶ್ವರರನ್ನು ನೀಡಿದ್ದೂ ಬ್ರಾಹ್ಮಣ ಸಮುದಾಯವೇ.. ಅಂಬೇಡ್ಕರ್‌ ಅವರಿಗೆ ಮಹರ್‌ ಎಂಬ ಅಡ್ಡ ಹೆಸರು ಇತ್ತು. ಕೃಷ್ಣಾಜೀ ಅಂಬೇಡ್ಕರ್‌ ಎಂಬಂಥ ಮರಾಠಿ ಬ್ರಾಹ್ಮಣ ಗುರು ಅವರು ಅಂಬೇಡ್ಕರ್‌ ಎಂದು ಹೆಸರು ಬದಲಿಸಿಕೋ ಎಂದು ಹೇಳಿ, ಅಧ್ಯಯನಕ್ಕೆ ಹಣಕಾಸಿನ ಸಹಾಯ ಮಾಡುತ್ತಾರೆ. ಅದೇ ಅಂಬೇಡ್ಕರ್‌ ನಮಗೆ ಸಂವಿಧಾನ ನೀಡಿದರು. ಸಂವಿಧಾನ ಕರಡು ರಚನಾ ಸಮಿತಿಯಲ್ಲಿ ಏಳು ಮಂದಿ ಇದ್ದು, ಅದರಲ್ಲಿ ಮೂವರು ಬ್ರಾಹ್ಮಣರು ಇದ್ದರು” ಎಂದು ವಿವರಿಸಿದರು.

“ಅಲ್ಲಾಡಿ ಕೃಷ್ಣಸ್ವಾಮಿ ಐಯ್ಯರ್‌, ಗೋಪಾಲ ಸ್ವಾಮಿ ಐಯ್ಯಾಂಗಾರ್‌, ಬಿ ಎನ್‌ ರಾವ್‌ (ಬೆನಗಲ್‌ ನರಸಿಂಗ ರಾವ್‌) ಅವರನ್ನು ಸಂವಿಧಾನದ ಸಲಹಾ ಸಮಿತಿಗೆ ನೇಮಕ ಮಾಡಲಾಗಿತ್ತು. ಅನೇಕ ಮತ, ವಂಶಗಳು, ರಾಜ್ಯಗಳನ್ನು ಕಟ್ಟಿದವರಲ್ಲಿ ಬ್ರಾಹ್ಮಣ ಇದ್ದರು ಎಂದು ಮಹಾನ್‌ ಇತಿಹಾಸಕಾರರಾದ ಅರ್ನಾಲ್ಡ್‌ ಟಾಯನ್‌ಬೀ, ವಿಲ್‌ ಡುರಂಟ್‌ ಬರೆದಿದ್ದಾರೆ. ದಿ ಸ್ಟೋರಿ ಆಫ್‌ ಸಿವಿಲೈಜೇಷನ್‌, 11 ಸಂಪುಟಗಳ ಗ್ರಂಥದಲ್ಲಿನ ಒಂದು ಗ್ರಂಥವನ್ನ ಅವರ್‌ ಓರಿಯಂಟಲ್‌ ಹೆರಿಟೇಜ್‌ ಎಂದು ಡುರೆಂಟ್‌ ಕರೆದಿದ್ದಾನೆ. ಅದರಲ್ಲಿ ಭಗವದ್ಗೀತೆ, ರಾಮಾಯಣ, ಕೃಷ್ಣ, ಕೃಷ್ಣನ ಕೊಳಲಿನ ಬಗ್ಗೆ ವಿವರಿಸಿದ್ದಾನೆ” ಎಂದರು.

“1333ನೇ ಇಸವಿಯಲ್ಲಿ ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯವನ್ನು ಹಕ್ಕ-ಬುಕ್ಕ ಎಂಬ ಇಬ್ಬರು ಕುರುಬ ಜನಾಂಗದವರಿಂದ ಸ್ಥಾಪಿಸುತ್ತಾರೆ. ಇದಕ್ಕೂ ಮುನ್ನ, ಚಾಣಕ್ಯ ಕ್ಷೌರಿಕ ಸಮುದಾಯದವನ್ನು ಕರೆತಂದು ರಾಜ್ಯ ಸ್ಥಾಪಿಸುತ್ತಾನೆ. ಕಾಶ್ಮೀರದ ಪಂಡಿತ ಕಲ್ಹಣ ರಾಜತರಂಗಿಣಿ ಎಂಬ ನ್ಯಾಯಶಾಸ್ತ್ರ ಪ್ರಧಾನ ಗ್ರಂಥ ನೀಡಿದ್ದಾನೆ. ಸಾರೆ ಜಹಾನ್‌ ಸೇ ಅಚ್ಚಾ ಇದರ ಕರ್ತೃ ಮುಹಮ್ಮದ್‌ ಅಲ್ಲಮಾ ಇಕ್ಬಾಲ್‌. ಆತನ ಪೂರ್ವಜರು ಕಾಶ್ಮೀರಿ ಬ್ರಾಹ್ಮಣರು. ಬಿ ಎನ್‌ ರಾವ್‌ ಅವರು ಕರಡನ್ನು ಸಿದ್ಧಪಡಿಸಿಕೊಡದಿದ್ದರೆ ಸಂವಿಧಾನ ರೂಪಿಸಲು ಇನ್ನೂ 25 ವರ್ಷ ಬೇಕಾಗುತ್ತಿತ್ತು ಎಂದು ಭಂಡಾರ್ಕರ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಅಂಬೇಡ್ಕರ್‌ ಹೇಳಿದ್ದರು” ಎಂದು ನೆನಪಿಸಿದರು.

“ಜನಗಣ ಮನ.. ಅಮರ್‌ ಸೋನಾರ್‌ ಬಾಂಗ್ಲಾ ರಾಷ್ಟ್ರಗೀತೆ ಬರೆದವರು ರವೀಂದ್ರನಾಥ್‌ ಟ್ಯಾಗೋರ್.‌ ಶ್ರೀಲಂಕಾದ ರಾಷ್ಟ್ರಗೀತೆಯು ಟ್ಯಾಗೋರ್‌ ಅವರ ಬರಹದ ಪ್ರೇರಣೆಯಿಂದ ಹುಟ್ಟಿದೆ ಎನ್ನಲಾಗಿದೆ” ಎಂದರು.

“ಕೃಷಿ ಮತ್ತು ಭೂ ಸುಧಾರಣೆ ಮಾಡಿದರೆ ಅವುಗಳನ್ನು ಸಮಾಜಮುಖಿಯಾಗಿ ಬಳಕೆ ಮಾಡಬಹುದು. ಆದ್ದರಿಂದ ಸಂವಿಧಾನದ 9ನೇ ಷೆಡ್ಯೂಲ್‌ಗೆ ತಿದ್ದುಪಡಿ ಮಾಡಿ ಎಂದು ಮದ್ರಾಸ್‌ನ ಐಯ್ಯರ್‌ ಬ್ರಾಹ್ಮಣರೊಬ್ಬರು ಮಾಜಿ ಪ್ರಧಾನಿ ಪಂಡಿತ್‌ ಜವಹರಲಾಲ್‌ ನೆಹರೂಗೆ ಸಲಹೆ ನೀಡುತ್ತಾರೆ. ಇದನ್ನು ಖ್ಯಾತ ನ್ಯಾಯವಾದಿ ಪಾಲ್ಖಿವಾಲಾ ಅವರ “ಕೋರ್ಟ್‌ ರೂಮ್‌ ಜೀನಿಯಸ್‌” ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಸೋಲಿ ಸೊರಾಬ್ಜಿ ಮತ್ತು ಅರವಿಂದ್‌ ದಾತಾರ್‌ ನಮೂದಿಸಿದ್ದಾರೆ. ಇದರಿಂದ ಟೆನೆನ್ಸಿ ಕಾನೂನು, ಭೂಸುಧಾರಣೆ ಕಾನೂನುಗಳು ಊರ್ಜಿತವಾಗಿವೆ. ಇದರಿಂದ ಕೆಲವೇ ಜನರ ಬಳಿ ಇರುವ ಭೂಮಿಯು ಎಲ್ಲರಿಗೂ ಲಭ್ಯವಾಗಿತ್ತು. ಉಳುವವನೇ ಭೂಮಿಯ ಒಡೆಯ ಕಾನೂನುಗಳು ಇದರಿಂದಲೇ ಊರ್ಜಿತವಾಗಿವೆ. ಬ್ರಾಹ್ಮಣರ ಕೊಡುಗೆ ಏನು ಎಂದು ನೇರವಾಗಿ ಕೇಳುವುದಲ್ಲ. ಇತಿಹಾಸದ ಪುಟಗಳ ಒಳ ಹೋಗಬೇಕು, ನೋಡಬೇಕು. ಆಗ ಗೊತ್ತಾಗುತ್ತದೆ” ಎಂದರು.

“ವಿನೋಬಾ ಭಾವೆ ಅವರ ಭೂದಾನ ಚಳವಳಿಯ ನಂತರ ಸರ್ಕಾರದ ಅಂಕಿ-ಅಂಶಗಳ ಪ್ರಕಾರ 17 ರಾಜ್ಯಗಳಲ್ಲಿ ಭೂದಾನ ಕಾಯಿದೆಗಳು ಜಾರಿಗೆ ಬರುತ್ತವೆ. ಸುಮಾರು 40 ಲಕ್ಷ ಎಕರೆ ಭೂಮಿಯನ್ನು ಅದರ ಒಡೆಯರು ಸರ್ಕಾರದ ವಶಕ್ಕೆ ನೀಡಿ, ಇದನ್ನು ಹಂಚಲು ಹೇಳುತ್ತಾರೆ. ಈ ಐಡಿಯಾ ಕೊಟ್ಟವರು ಯಾರು? ಭೂಮಿಯನ್ನು ಹಂಚಿದ್ದು ಯಾರು? ಯಾವ ರೀತಿ ಕೊಡುಗೆಯಾಗುತ್ತಿದೆ? ಸಂವಿಧಾನದಲ್ಲಿ ತುಳಿತಕ್ಕೆ ಒಳಗಾದ ಅನೇಕ ಸಮುದಾಯಗಳನ್ನು ಮೇಲೆತ್ತುವುದಕ್ಕೆ ಸಂಬಂಧಿಸಿದ ವಿಧಿಗಳುಂಟು. ಸಂವಿಧಾನದ ರಚನಾ ಸಭೆಯ ಚರ್ಚೆಗಳನ್ನು ಓದಬೇಕು. ಐದು ಸಂಪುಟಗಳಲ್ಲಿ ಅದು ಪ್ರಕಟವಾಗಿದ್ದು, ಅದನ್ನು ಓದಬೇಕು. ಆ ವಿಧಿಗಳನ್ನು ರೂಪಿಸುವಾಗ ಬ್ರಾಹ್ಮಣ ಸಮುದಾಯದ ಯಾವೊಬ್ಬ ಸದಸ್ಯನೂ ಅದಕ್ಕೆ ಆಕ್ಷೇಪಿಸಿಲ್ಲ” ಎಂದರು.

“ಹಲವು ಮಹನೀಯರು ಬ್ರಾಹ್ಮಣ ಮಹಾಸಭಾವನ್ನು ಕಟ್ಟಿದ್ದಾರೆ. ಈ ಮಹಾಸಭಾಕ್ಕೆ ಅರ್ಧ ಶತಮಾನವಾಗುತ್ತಿದೆ. ಸಾಮಾನ್ಯ ವ್ಯಕ್ತಿಗೆ ಅರ್ಧ ಶತಮಾನವಾದಾಗ ಇಳಿತ ಆರಂಭವಾಗುತ್ತದೆ. ಅಂತೆಯೇ ಸಂಸ್ಥೆ, ರಾಷ್ಟ್ರ, ಸಂವಿಧಾನ, ಪ್ರಜಾಪ್ರಭುತ್ವ ಇದ್ಯಾವುದು ಶಾಶ್ವತವಲ್ಲ ಎಂದು ಅಮೆರಿಕಾದ 2ನೇ ಅಧ್ಯಕ್ಷ ಜಾನ್‌ ಆಡಮ್ಸ್‌ ಬರೆದಿದ್ದಾನೆ. ಈ ಸಂಸ್ಥೆ ಮತ್ತು ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲರೂ ಮಸಣ ಮುಖಿಗಳು. ಈ ಸಂಸ್ಥೆಗಳನ್ನು ಪ್ರಬಲಗೊಳಿಸಲು ಹೊಸ ನೀರು ಈ ಸಂಸ್ಥೆಯ ಸಂವಿಧಾನದಲ್ಲಿ ಸೇರಬೇಕು. ಯಾವುದೂ ಶಾಶ್ವತವಲ್ಲ” ಎಂದರು.

“ಭಾರತ ಮಾತೆಗೆ ಅನ್ಯಾಯವಾಗದಂತೆ ಮಾಡಲು ಏನು ಮಾಡಬೇಕು ಎಂದು ಎಲ್ಲರೂ ಯೋಚಿಸಬೇಕು. ಆಗ ರಾಷ್ಟ್ರೀಯ ಮೌಲ್ಯಗಳು ಮತ್ತು ಅದನ್ನು ಆಧರಿಸಿದ ಸಂವಿಧಾನ ಉಳಿಯುತ್ತದೆ. ಇಲ್ಲವಾದಲ್ಲಿ ಭಾರತಕ್ಕೂ ಆಪತ್ತು ಎದುರಾಗುತ್ತದೆ. ಈಗಾಗಲೇ ಆಪತ್ತು ಆಗುತ್ತಿದೆ ಎಂದು ಅನೇಕ ಕಡೆ ಹೇಳಲಾಗುತ್ತಿದೆ. ನಾನೊಬ್ಬ ಹಾಲಿ ನ್ಯಾಯಾಧೀಶ ಎಂದು ಮತ್ತೊಮ್ಮೆ ನೆನಪಿಸಿ ಹೇಳುತ್ತಿದ್ದು, ಈ ಮಾತಿನಲ್ಲಿ ಅಡಕವಾಗಿರುವ ಸತ್ಯವನ್ನು ನೀವು ತಿಳಿದುಕೊಳ್ಳಬೇಕು. ಇದನ್ನು ಮೀರಿದ ಸ್ವಾತಂತ್ರ್ಯ ನ್ಯಾಯಾಧೀಶರಿಗೆ ಇಲ್ಲ. ಜನರಿಗೆ ಇರುವ ವಾಕ್‌ ಸ್ವಾತಂತ್ರ್ಯ ನಮಗಿಲ್ಲ. ನಿಮ್ಮ ಸ್ವಾತಂತ್ರ್ಯ ಹರಣವಾದಾಗ ಅದನ್ನು ತೀರ್ಮಾನಿಸುವ ಅಧಿಕಾರ ಮಾತ್ರ ನಮಗಿದೆ” ಎಂದು ಸೂಚ್ಯವಾಗಿ ಹೇಳಿದರು.

“ಭಾರತೀಯ ಚಿಂತನೆ, ಸಂವಿಧಾನ ಬೆಳೆಯಬೇಕು. ದೇಶದ ಅಂಗಾಂಗಕ್ಕೆ ಊನತೆ ಉಂಟಾಗಬಾರದು. ಭಾರತೀಯ ಚಿಂತನೆ ಅಪಮಾನಿಸುವ ದನಿ, ಕೃತಿಗಳನ್ನು ನೀವು ಕೇಳುತ್ತಿದ್ದು, ನೋಡುತ್ತಿದ್ದೀರಿ. ಅದರ ಬಗ್ಗೆ ಎಚ್ಚರದಿಂದ ಇರಬೇಕು. ಅನ್ಯ ಸಮುದಾಯದವರನ್ನು ಪ್ರೀತಿಯಿಂದ ಕರೆದುಕೊಂಡು ಹೋಗಬೇಕು. ಭಾರತ ಸಾವಿರ ಗಂಗೆ, ತೊರೆಗಳಾಗಿ ಹರಿಯಬೇಕು. ಇದರಲ್ಲಿ ಬ್ರಾಹ್ಮಣ್ಯ ಒಂದು ತೊರೆ ಮಾತ್ರ. ಬೇರೆಲ್ಲಾ ತೊರೆಗಳ ಜೊತೆ ಸೇರಿ ಹರಿದಾಗ ಗಂಗೆಗೆ ಮತ್ತಷ್ಟು ಶಕ್ತಿ ಬರುತ್ತದೆ. ತುಂಗೆಗೂ ಗಂಗೆಯಾಗುವ ಶಕ್ತಿ ಬರುತ್ತದೆ” ಎಂದರು.

ಹೈಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು “ಎಷ್ಟೋ ಜನ ಸಮಾಜದಲ್ಲಿ ಎರಡು ಹೊತ್ತಿನ ಊಟ, ವಿದ್ಯಾಭ್ಯಾಸಕ್ಕೆ ತೊಂದರೆ ಅನುಭವಿಸುತ್ತಿರುವಾಗ ಇಷ್ಟು ವೈಭವೋಪೇತ ಮಹಾಸಭಾ, ಸಮ್ಮೇಳನ ಬೇಕಿತ್ತಾ ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ. ಎಲ್ಲರ ಮನಸುಗಳನ್ನು ಒಂದೆಡೆ ಸೇರಿಸಿ, ನಮ್ಮ ವಿಷಯಗಳನ್ನು ಪ್ರಸ್ತಾಪಿಸುವ ಉದ್ದೇಶ ಹೊಂದಲಾಗಿದೆ. ಅನ್ಯ ಉದ್ದೇಶವಿಲ್ಲ” ಎಂದರು.

“ಯಾವ ವಿಚಾರವನ್ನು ಯಾರ ಮುಂದೆ ಸಮಪರ್ಕವಾಗಿ ವಾದಿಸಬೇಕೋ, ಆ ವಾದ ಮಂಡನೆಯಿಂದ ಆಗಬೇಕೆ ವಿನಾ ಖಂಡನೆಯಿಂದ ಅಲ್ಲ. ಶ್ರೀರಂಗದಲ್ಲಿ ತ್ರಿಮತಸ್ಥರೆಲ್ಲರೂ ವಾಖ್ಯಾರ್ಥ ಮಾಡಿ, ಒಬ್ಬರನ್ನೊಬ್ಬರು ಅಪ್ಪಿಕೊಂಡು ಶ್ರೀರಂಗನಿಗೆ ಅರ್ಪಣೆ ಮಾಡಿ ಹೋಗುವ ಪದ್ಧತಿ ಈಗಲೂ ಇದೆ. ಹೀಗಿರುವಾಗ ನಮ್ಮನಮ್ಮಲ್ಲಿ ಭಿನ್ನಾಭಿಪ್ರಾಯಗಳು ಏಕೆ? ಸದ್ವಿಚಾರಗಳು ಯಾವುದಾದರೂ ಮೂಲೆಯಿಂದ ಬರಲಿ ನನ್ನ ಅಂಗಾಂಗಳನ್ನು ಅದಕ್ಕೆ ತೆರೆದಿಟ್ಟುಕೊಂಡಿರಬೇಕು. ಕುವೆಂಪು ಅವರು ತೆರೆದಿದೆ ಮನೆ ಓ ಬಾ ಅತಿಥಿ.. ಎಂದು ಹೇಳಿದ್ದು ಈ ನೆಲೆಯಲ್ಲಿಯೇ” ಎಂದರು.

“ಇಷ್ಟೊಂದು ಸ್ಥಳ, ಇಷ್ಟು ವೈಭವ ಯಾಕಾಗಬಾರದು? ಯಾವುದರಲ್ಲಿ ನಾವು ಕಡಿಮೆ ಇದ್ದೇವೆ. ಯಾವುದರಲ್ಲಿ ನಾವು ಬಡವರು? ಭಗವಂತನ ಕೃಪಾ ದೃಷ್ಟಿಯಲ್ಲಿರುವ ಪ್ರತಿಯೊಬ್ಬರೂ ಶ್ರೀಮಂತರೇ.. ಪ್ರತಿಯೊಂದು ಕಾಯಕವನ್ನು ಭಕ್ತಿ ಪ್ರೇರಿತವಾಗಿ ಮಾಡಿದರೆ ಭಗವಂತನಿಗೆ ಇಷ್ಟವಾಗುವ ಕೆಲಸವಾಗುವುದರಿಂದ ಭಗವದ್ಗೀತೆಯ ಸಾರವಾದ ಕರ್ಮವಾಗುತ್ತದೆ. ಮತ ಭೇದವಿರಲಿ, ಮನೆ ಭೇದ ಬೇಡ” ಎಂದರು.

Kannada Bar & Bench
kannada.barandbench.com