ನೀಟ್ ಎಐಕ್ಯೂ: ಇಡಬ್ಲ್ಯೂಎಸ್ ವರ್ಗ ನಿರ್ಧರಿಸುವ ಮಾನದಂಡಗಳನ್ನು ಮರುಪರಿಶೀಲಿಸಲಿರುವ ಕೇಂದ್ರ ಸರ್ಕಾರ

ವೈದ್ಯಕೀಯ ಪ್ರವೇಶಾತಿ ದೃಷ್ಟಿಯಿಂದ ಸಾಂವಿಧಾನಿಕ ತಿದ್ದುಪಡಿಯನ್ನು ಮುಂದೂಡುವುದು ಕೊನೆಯ ಪ್ರಯತ್ನವಾಗಿರಬೇಕು ಎಂದು ತಿಳಿಸಿದ ಎಸ್‌ಜಿ. ಇಡಬ್ಲ್ಯೂಎಸ್ ಮಾನದಂಡಗಳ ಮರುಪರಿಶೀಲನೆಗೆ ನಾಲ್ಕು ವಾರಗಳ ಕಾಲಾವಧಿ ಕೋರಿದ ಕೇಂದ್ರ.
ನೀಟ್ ಎಐಕ್ಯೂ: ಇಡಬ್ಲ್ಯೂಎಸ್ ವರ್ಗ ನಿರ್ಧರಿಸುವ ಮಾನದಂಡಗಳನ್ನು ಮರುಪರಿಶೀಲಿಸಲಿರುವ ಕೇಂದ್ರ ಸರ್ಕಾರ
Published on

ಆರ್ಥಿಕವಾಗಿ ದುರ್ಬಲ ವರ್ಗಗಳನ್ನು (ಇಡಬ್ಲ್ಯುಎಸ್) ನಿರ್ಧರಿಸುವ ಮಾನದಂಡವನ್ನು ಮರುಪರಿಶೀಲಿಸುವ ಬಗ್ಗೆ ಪ್ರಸ್ತಾವಿಸುತ್ತಿರುವುದಾಗಿ ಕೇಂದ್ರ ಸರ್ಕಾರವು ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ನೀಲ್ ಆರೆಲಿಯೊ ನ್ಯೂನ್ಸ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಖಿಲ ಭಾರತ ಕೋಟಾ ಸೀಟುಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ 27 ಮೀಸಲಾತಿ ಮತ್ತು ಇಡಬ್ಲ್ಯೂಎಸ್‌ಗೆ ಶೇ 10 ಮೀಸಲಾತಿ ನಿಗದಿಪಡಿಸಿರುವುದನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಡಿ ವೈ ಚಂದ್ರಚೂಡ್‌ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ಸಾಲಿಸಿಟರ್ ಜನರಲ್‌ (ಎಸ್‌ಜಿ) ತುಷಾರ್‌ ಮೆಹ್ತಾ ಈ ಮಾಹಿತಿ ನೀಡಿದ್ದಾರೆ.

ವೈದ್ಯಕೀಯ ಪ್ರವೇಶಾತಿಗೆ ಸಂಬಂಧಿಸಿದಂತೆ ಸಾಂವಿಧಾನಿಕ ತಿದ್ದುಪಡಿಯನ್ನು ಮುಂದೂಡುವುದು ಕೊನೆಯ ಪ್ರಯತ್ನವಾಗಬೇಕು ಎಂದು ವಾದಿಸಿದ ತುಷಾರ್‌ ಮೆಹ್ತಾ, ಇಡಬ್ಲ್ಯೂಎಸ್ ಮಾನದಂಡಗಳನ್ನು ಮರುಪರಿಶೀಲಿಸಲು ಕೇಂದ್ರಕ್ಕೆ ನಾಲ್ಕು ವಾರಗಳ ಅಗತ್ಯವಿದೆ ಎಂದರು. ಅಲ್ಲಿಯವರೆಗೆ ಕೌನ್ಸೆಲಿಂಗ್‌ ಪ್ರಕ್ರಿಯೆ ಮುಂದುವರೆಯಬೇಕು. ಮಾನದಂಡಗಳನ್ನು ಮರುಪರಿಶೀಲಿಸಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸುತ್ತದೆ ಎಂದು ಮಾಹಿತಿ ನೀಡಿದರು.

Also Read
[ನೀಟ್‌ ಪರೀಕ್ಷೆ] ಹೆಚ್ಚುವರಿ ಕಾಲಾವಕಾಶ ದೊರೆಯದ ವಿಕಲ ಚೇತನ ಅಭ್ಯರ್ಥಿಗೆ ಪರಿಹಾರ ನೀಡಲು ಸೂಚಿಸಿದ ಸುಪ್ರೀಂ ಕೋರ್ಟ್

ಕೇಂದ್ರ ಸರ್ಕಾರ ಜುಲೈ 29, 2021ರಂದು 50% ಅಖಿಲ ಭಾರತ ಕೋಟಾ ಸೀಟುಗಳಲ್ಲಿ ಒಬಿಸಿಗೆ 27% ಮತ್ತು ಇಡಬ್ಲ್ಯೂಎಸ್‌ಗೆ 10% ಮೀಸಲಾತಿ ಒದಗಿಸುವ ಸೂಚನೆ ನೀಡಿತ್ತು. ಆದರೆ ಮೀಸಲಾತಿಯು 103ನೇ ಸಾಂವಿಧಾನಿಕ ತಿದ್ದುಪಡಿ ಕಾಯಿದೆ, 2018ರ ಉಲ್ಲಂಘನೆಯಾಗಿದೆ ಎಂದು ವಕೀಲ ಸುಬೋಧ ಎಸ್ ಪಾಟೀಲ್ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿತ್ತು.

ದಾಖಲಾತಿಗಳ ವಿಳಂಬ ಮತ್ತು ಇಡಬ್ಲ್ಯೂಎಸ್‌ ಅನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂಬುದಕ್ಕೆ ಪೀಠವು ಅತೃಪ್ತಿ ವ್ಯಕ್ತಪಡಿಸಿದಾಗಲೂ, ಕೋಟಾವನ್ನು ಪಡೆಯಲು ಅಗತ್ಯವಾದ ಆದಾಯದ ಮಿತಿಗಳ ಕುರಿತು ಕೇಂದ್ರ ನಿರ್ಧರಿಸಲಿದೆ ಎಂದು ಮೆಹ್ತಾ ಹೇಳಿದರು. ನ್ಯಾಯಾಲಯ ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 6, 2022ಕ್ಕೆ ಪಟ್ಟಿ ಮಾಡಿದೆ.

Kannada Bar & Bench
kannada.barandbench.com