ನೀಟ್ ಪಿಜಿ 21-22: ಮಾಪ್ ಅಪ್ ಸುತ್ತಿನ ಕೌನ್ಸೆಲಿಂಗ್ ರದ್ದುಪಡಿಸಿದ ಸುಪ್ರೀಂ; ಹೊಸದಾಗಿ ಮಾಪ್ ಅಪ್‌ಗೆ ಸೂಚನೆ
ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸ್‌ಗಳಿಗಾಗಿ 2021-22ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ಅಖಿಲ ಭಾರತ ಕೋಟಾದ ಸೀಟುಗಳಿಗೆ (ಎಐಕ್ಯು) ನಡೆಸಲಾಗಿದ್ದ ಮಾಪ್ ಅಪ್ ಸುತ್ತಿನ ಕೌನ್ಸೆಲಿಂಗ್‌ಅನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಪಡಿಸಿದ್ದು ಹೊಸದಾಗಿ ಮಾಪ್ ಅಪ್ ಸುತ್ತಿನ ಕೌನ್ಸೆಲಿಂಗ್ ನಡೆಸಲು ಸೂಚಿಸಿದೆ.
ಅಲ್ಲದೆ, ಇದಾಗಲೇ ಎರಡನೇ ಸುತ್ತಿನಲ್ಲಿ ರಾಜ್ಯ ಕೋಟಾದಡಿ ಅಥವಾ ಅಖಿಲ ಭಾರತ ಕೋಟಾದಡಿ ಸೇರ್ಪಡೆಯಾಗಿರುವ ಅಭ್ಯರ್ಥಿಗಳು ಸಹ ವಿಶೇಷ ಕೌನ್ಸೆಲಿಂಗ್ ಸುತ್ತಿನಲ್ಲಿ ಭಾಗವಹಿಸಲು ಅರ್ಹರಾಗಿದ್ದು ಇದಕ್ಕಾಗಿ ಭದ್ರತಾ ಠೇವಣಿಯನ್ನು ಮುಟ್ಟುಗೋಲಿಗೆ ಒಳಪಡಿಸುವ ಅಗತ್ಯವಿಲ್ಲ ಎಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಸೂರ್ಯಕಾಂತ್ ಹಾಗೂ ಬೇಲಾ ಎಂ ತ್ರಿವೇದಿ ಅವರಿದ್ದ ತ್ರಿಸದಸ್ಯ ಪೀಠ ಹೇಳಿದೆ. ಕೌನ್ಸೆಲಿಂಗ್‌ಗೆ ಹೆಚ್ಚುವರಿಯಾಗಿ ಸೇರ್ಪಡೆಯಾಗಿರು 146 ಸೀಟುಗಳ ಲಾಭವನ್ನು ಪಡೆಯುವಂತೆ ಪೀಠವು ಅಭ್ಯರ್ಥಿಗಳಿಗೆ ತಿಳಿಸಿದೆ.
ನ್ಯಾಯಾಲಯವು ಈ ಕೆಳಗಿನ ನಿರ್ದೇಶನಗಳನ್ನು ನೀಡಿದೆ:
- ಎಐಕ್ಯು ಮಾಪ್‌ಅಪ್ ಕೌನ್ಸೆಲಿಂಗ್ಅನ್ನು ರದ್ದುಪಡಿಸಬೇಕು
- ಎಐಕ್ಯು ಎರಡನೇ ಸುತ್ತಿನ ನಂತರ ಲಭ್ಯವಾದ 146 ಸೀಟುಗಳನ್ನು ಪಡೆಯಲು ವಿಶೇಷ ಕೌನ್ಸೆಲಿಂಗ್ ಸುತ್ತನ್ನು ಆಯೋಜಿಸಬೇಕು.
- ಎಐಕ್ಯು ಅಥವಾ ರಾಜ್ಯ ಕೋಟಾದಡಿ ಸೇರ್ಪಡೆಯಾಗಿರುವ ವಿದ್ಯಾರ್ಥಿಗಳು ಸಹ ಈ ವಿಶೇಷ ಸುತ್ತಿನ ಲಾಭವನ್ನು ಪಡೆಯಲು ಅರ್ಹರಾಗಿದ್ದು ಅವರು ಈ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಪಾಲ್ಗೊಳ್ಳಬಹುದು. ಇದಕ್ಕಾಗಿ ಅವರು ಭದ್ರತಾ ಠೇವಣಿಯ ಮುಟ್ಟುಗೋಲು ಅಥವಾ ದಂಡ ಪಾವತಿಗೆ ಒಳಪಡುವಂತಿಲ್ಲ.
ಹೆಚ್ಚಿನ ವಿವರಗಳಿಗೆ ಬಾರ್ ಅಂಡ್ ಬೆಂಚ್ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.


