ಪ್ರಸಕ್ತ ಸಾಲಿನ ನೀಟ್ ಪಿಜಿ: ಇಡಬ್ಲ್ಯೂಎಸ್‌ ಬಗ್ಗೆ ಈಗಿನ ಮಾನದಂಡಕ್ಕೆ ಬದ್ಧ ಎಂದು ಸುಪ್ರೀಂಗೆ ತಿಳಿಸಿದ ಕೇಂದ್ರ

ತಜ್ಞರ ಸಮಿತಿ ಸೂಚಿಸಿದ ಪರಿಷ್ಕೃತ ಮಾನದಂಡಗಳನ್ನು ಮುಂದಿನ ಪ್ರವೇಶಾತಿ ವೇಳೆ ಅಳವಡಿಸಿಕೊಳ್ಳಲಾಗುವುದು ಎಂದು ವಿವರಿಸಿದ ಸರ್ಕಾರ.
ಪ್ರಸಕ್ತ ಸಾಲಿನ ನೀಟ್ ಪಿಜಿ: ಇಡಬ್ಲ್ಯೂಎಸ್‌ 
ಬಗ್ಗೆ ಈಗಿನ ಮಾನದಂಡಕ್ಕೆ ಬದ್ಧ ಎಂದು  ಸುಪ್ರೀಂಗೆ ತಿಳಿಸಿದ ಕೇಂದ್ರ

ನೀಟ್‌ ಸ್ನಾತಕೋತ್ತರ ಕೋರ್ಸ್‌ಗಳಿಗೆ ನಡೆಯುತ್ತಿರುವ ಪ್ರವಶಾತಿಗೆ ಸಂಬಂಧಿಸಿದಂತೆ ಆರ್ಥಿಕವಾಗಿ ದುರ್ಬಲ ವರ್ಗಗಳನ್ನು(ಇಡಬ್ಲ್ಯೂಎಸ್‌) ನಿಷ್ಕರ್ಷಿಸಲು ಈಗ ಇರುವ ₹ 8 ಲಕ್ಷ ವಾರ್ಷಿಕ ಆದಾಯ ಮಿತಿಯ ಮಾನದಂಡಕ್ಕೆ ಬದ್ಧವಾಗಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. [ನೀಲ್ ಆರೆಲಿಯೊ ನ್ಯೂನ್ಸ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ].

ಸರ್ಕಾರ ರಚಿಸಿರುವ ತಜ್ಞರ ಸಮಿತಿ ಸೂಚಿಸಿದ ಪರಿಷ್ಕೃತ ಮಾನದಂಡಗಳನ್ನು ಮುಂದಿನ ಪ್ರವೇಶಾತಿಗೆ ಅಳವಡಿಸಿಕೊಳ್ಳಬಹುದಾಗಿದ್ದು ಪ್ರಸಕ್ತ ಸಾಲಿನ ಪ್ರವೇಶಕ್ಕೆ ಈಗಿನ ಮಾನದಂಡಗಳನ್ನು ಮುಂದುವರೆಸಬಹುದು ಎಂದು ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಹೊಸ ಮಾನದಂಡಗಳು ಸೇರಿದಂತೆ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಲು ತಾನು ನಿರ್ಧರಿಸಿರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಇಡಬ್ಲ್ಯೂಎಸ್‌ ವರ್ಗವನ್ನು ನಿಷ್ಕರ್ಷಿಸಲು ₹ 8 ಲಕ್ಷ ವಾರ್ಷಿಕ ಆದಾಯ ಮಿತಿ ನಿಗದಿಪಡಿಸುವ ಸಂಬಂಧ ಈ ಮೊದಲು ಯಾವುದೇ ಅಧ್ಯಯನ ನಡೆದಿತ್ತೇ ಎಂದು ಈ ಹಿಂದೆ ಸುಪ್ರೀಂಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತ್ರಿಸದಸ್ಯರ ಸಮಿತಿ ರಚಿಸಿತ್ತು.

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಖಿಲ ಭಾರತ ಕೋಟಾ ಸೀಟುಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ 27 ಮೀಸಲಾತಿ ಮತ್ತು ಇಡಬ್ಲ್ಯೂಎಸ್‌ಗೆ ಶೇ 10 ಮೀಸಲಾತಿ ನಿಗದಿಪಡಿಸಿರುವುದನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಅವಲೋಕನ ವ್ಯಕ್ತವಾಗಿತ್ತು.

Also Read
[ಸ್ನಾತಕೋತ್ತರ ವೈದ್ಯಕೀಯ ಸೀಟು] ಇಡಬ್ಲ್ಯೂಎಸ್ ಆದಾಯ ಮಿತಿ ಬಗ್ಗೆ ವಿವರಿಸುವಂತೆ ಕೇಂದ್ರಕ್ಕೆ ಸುಪ್ರೀಂ ತಾಕೀತು

ಸಮಿತಿ ತನ್ನ ವರದಿಯಲ್ಲಿ ಮಾನದಂಡಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಸಲಹೆಗಳನ್ನು ನೀಡಿತ್ತು:

  • ಈಗಿನ ₹8 ಲಕ್ಷ ಅಥವಾ ಅದಕ್ಕಿಂತಲೂ ಕಡಿಮೆ ಇರುವ ವಾರ್ಷಿಕ ಆದಾಯ ಮಿತಿಯನ್ನು ಉಳಿಸಿಕೊಳ್ಳಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ₹8 ಲಕ್ಷದವರೆಗಿನ ವಾರ್ಷಿಕ ಆದಾಯ ಗಳಿಸುವ ಕುಟುಂಬಗಳು ಮಾತ್ರ ಇಡಬ್ಲ್ಯೂಎಸ್ ಮೀಸಲಾತಿ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ. 'ಕುಟುಂಬ' ಮತ್ತು ಆದಾಯದ ವ್ಯಾಖ್ಯಾನವು 17 ನೇ ಜನವರಿ 2019ರಂದು ಹೊರಡಿಸಲಾದ ಆದೇಶದಂತೆಯೇ ಇರಲಿದೆ.

  • ವ್ಯಕ್ತಿಯೊಬ್ಬನ ಕುಟುಂಬ 5 ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿದ್ದರೆ ಆಗ ಆದಾಯ ಲೆಕ್ಕಿಸದೇ ಇಡಬ್ಲ್ಯೂಎಸ್‌ ಹೊರಗಿಡಬಹುದು.

  • ವಸತಿ ಆಸ್ತಿ ಮಾನದಂಡಗಳನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು.

ಆದರೆ ಈ ವರ್ಷವೇ ಇಂತಹ ಬದಲಾವಣೆ ಮಾಡುವುದು ಅನಿವಾರ್ಯ ವಿಳಂಬ ಮತ್ತು ತಪ್ಪಿಸಬಹುದಾದ ತೊಡಕುಗಳಿಗೆ ಕಾರಣವಾಗಬಹುದು ಎಂದು ಸಮಿತಿ ತೀರ್ಮಾನಿಸಿತು. ಹೀಗಾಗಿ ಪ್ರಕರಣದ ಸಾಧಕ ಬಾಧಕಗಳನ್ನು ವಿಶ್ಲೇಷಿಸಿದ ಸಮಿತಿ, ವರದಿಯಲ್ಲಿ ಶಿಫಾರಸು ಮಾಡಿದ ಮಾನದಂಡಗಳು ಮುಂದಿನ ಪ್ರವೇಶಾತಿ ಆವೃತ್ತಿಯಿಂದ ಅನ್ವಯವಾಗುತ್ತವೆ ಎಂದು ತಿಳಿಸಿತ್ತು.

ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದ್ದುದರಿಂದ ನೀಟ್‌ ಪಿಜಿ ಕೋರ್ಸ್‌ಗಳಿಗೆ ನಡೆಯುತ್ತಿರುವ ಕೌನ್ಸೆಲಿಂಗ್ ಪ್ರಕ್ರಿಯೆ ತಡೆಹಿಡಿಯಲಾಗಿತ್ತು. ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸಬೇಕು. ಜೊತೆಗೆ ಕೌನ್ಸೆಲಿಂಗ್ ಮತ್ತು ಪ್ರವೇಶ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ವೈದ್ಯರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು.

Related Stories

No stories found.
Kannada Bar & Bench
kannada.barandbench.com