ನೀಟ್‌ ಪಿಜಿ ಕೌನ್ಸೆಲಿಂಗ್‌ ಅರ್ಹತಾ ಅಂಕ ಶೂನ್ಯಕ್ಕೆ ಇಳಿಕೆ: ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕೇಂದ್ರದ ಮೆಡಿಕಲ್ ಕೌನ್ಸೆಲಿಂಗ್ ಸಮಿತಿ (ಎಂಸಿಸಿ) ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದ ನ್ಯಾಯಾಲಯ.
Chief Justice P B Varale and Justice Krishna S. Dixit
Chief Justice P B Varale and Justice Krishna S. Dixit
Published on

ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ಸ್ನಾತಕೋತ್ತರ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹತಾ ಅಂಕವನ್ನು ಶೂನ್ಯಕ್ಕೆ ಇಳಿಸಿರುವುದನ್ನು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಕರ್ನಾಟಕ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಹುಬ್ಬಳ್ಳಿಯ ಮನೋವಿಜ್ಞಾನದ ವೈದ್ಯ ಹಾಗೂ ವಕೀಲ ಡಾ. ವಿನೋದ್ ಕುಲಕರ್ಣಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ವಾದ ಆಲಿಸಿದ ಪೀಠವು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕೇಂದ್ರದ ಮೆಡಿಕಲ್ ಕೌನ್ಸೆಲಿಂಗ್ ಸಮಿತಿ (ಎಂಸಿಸಿ) ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಕಳೆದ ಹತ್ತು ವರ್ಷಗಳಿಂದ ನೀಟ್-ಪಿಜಿ ಕಟ್ ಆಫ್ ಅಂಕಗಳು ಶೇ.50ರಷ್ಟಿತ್ತು. ಆದರೆ, 2023ನೇ ಸಾಲಿನ ನೀಟ್-ಪಿಜಿ ಕೌನ್ಸೆಲಿಂಗ್ ಹಾಜರಾಗಲು ಕಟ್ ಆಫ್ ಅಂಕಗಳನ್ನು ಶೂನ್ಯಕ್ಕೆ ಇಳಿಸಿ ಎಂಸಿಸಿ 2023ರ ಸೆಪ್ಟೆಂಬರ್‌ 20ರಂದು ಅಧಿಸೂಚನೆ ಹೊರಡಿಸಿದೆ. ಇದರಿಂದ ನೀಟ್ ಪಿಜಿಗೆ ಹಾಜರಾದ ಪ್ರತಿಯೊಬ್ಬ ಅಭ್ಯರ್ಥಿ ತನ್ನಿಷ್ಟದ ಪಿಜಿ ಸೀಟ್ ಪಡೆದುಕೊಳ್ಳಬಹುದು. ಹೀಗಾದರೆ ದೇಶವು ಮುಂದೆ ವೈದ್ಯರನ್ನು ಉತ್ಪಾದಿಸುವ ದಾಸ್ತಾನು ಮಳಿಗೆ ಅಥವಾ ಉಗ್ರಾಣ ಆಗಲಿದೆ. ಪಿಜಿ ಪ್ರವೇಶಕ್ಕೆ ಮೆರಿಟ್ ಮಾತ್ರ ಮಾನದಂಡವಾಗಬೇಕು ಎಂದು ಸುಪ್ರೀಂ ಕೋರ್ಟ್ ಹಲವು ಬಾರಿ ಹೇಳಿದೆ. ಕೌನ್ಸೆಲಿಂಗ್ ಕಟ್ ಆಫ್ ಶೂನ್ಯಕ್ಕೆ ಇಳಿಸುವುದರಿಂದ ಖಾಸಗಿ ಮೆಡಿಕಲ್ ಕಾಲೇಜುಗಳ ಲಾಬಿ ಇನ್ನಷ್ಟು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ನೀಟ್ ಪಿಜಿ ಕೌನ್ಸೆಲಿಂಗ್ ಕಟ್ ಆಫ್ ಅಂಕಗಳನ್ನು ಶೂನ್ಯಕ್ಕೆ ಇಳಿಸಿ 2023ರ ಸೆಪ್ಟೆಂಬರ್‌ 20ರಂದು ಎಂಸಿಸಿ ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯುವಂತೆ ನಿರ್ದೇಶನ ನೀಡಬೇಕು ಹಾಗೂ ಹಿಂದಿನ ಶೇ.50ರಷ್ಟು ಕಟ್ ಆಫ್ ಅಂಕಗಳ ಪದ್ದತಿಯಂತೆಯೇ ಕೌನ್ಸೆಲಿಂಗ್ ನಡೆಸುವಂತೆ ಆದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Kannada Bar & Bench
kannada.barandbench.com