ಅಖಿಲ ಭಾರತ ಕೋಟಾ ವೈದ್ಯಕೀಯ ಸೀಟುಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಮೀಸಲಾತಿ ನೀಡುವ ಪ್ರಕರಣವನ್ನು ಸುಪ್ರೀಂ ಕೋರ್ಟ್ ಇತ್ಯರ್ಥಗೊಳಿಸುವವರೆಗೂ 2021ನೇ ಸಾಲಿನ ನೀಟ್ ಸ್ನಾತಕೋತ್ತರ ಕೌನ್ಸೆಲಿಂಗ್ ಆರಂಭಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.
ಕೌನ್ಸೆಲಿಂಗ್‌ಗೆ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದೆದುರು ಹಿರಿಯ ವಕೀಲ ಅರವಿಂದ ದಾತಾರ್ ಪ್ರಸ್ತಾಪಿಸಿದ ನಂತರ ಕೇಂದ್ರ ಸರ್ಕಾರದ ಕಾನೂನು ಅಧಿಕಾರಿ, ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಕೆ ಎಂ ನಟರಾಜ್ ಈ ಭರವಸೆ ನೀಡಿದರು.
" ಇದೇ ಅಕ್ಟೋಬರ್ 24ರಿಂದ ಆರಂಭಗೊಂಡು ಅಕ್ಟೋಬರ್ 29ರಂದು ಕೊನೆಗೊಳ್ಳುವಂತೆ ವೇಳಾಪಟ್ಟಿ ಹೊರಡಿಸಲಾಗಿದೆ. ಇದರರ್ಥ ಎಲ್ಲವೂ ಮುಗಿದಿದೆ" ಎಂದು ದಾತಾರ್ ಆತಂಕ ವ್ಯಕ್ತಪಡಿಸಿದರು. “ನೀವು ಹಿಡಿದಿರುವ ನೋಟಿಸ್ ಕೇವಲ ಸೀಟುಗಳ ಪರಿಶೀಲನೆ ಉದ್ದೇಶಕ್ಕಾಗಿ ಕಾಲೇಜುಗಳಿಗೆ ನೀಡಿರುವಂತಹುದು” ಎಂದು ನಟರಾಜ್ ಹೇಳಿದರು.
"ನಾನು ಆರೋಗ್ಯ ಸೇವೆಗಳ ನಿರ್ದೇಶನಾಲಯದಿಂದ ಮಾಹಿತಿ ಪಡೆದುಕೊಂಡಿದ್ದೇನೆ" ಎಂದು ದಾತಾರ್ ಹೇಳಿದರು. ಬಳಿಕ ಮಧ್ಯಪ್ರವೇಶಿಸಿದ ಪೀಠ ಕೌನ್ಸೆಲಿಂಗ್ ಆರಂಭವಾಗುವುದಿಲ್ಲ ಎಂದು ಭರವಸೆ ನೀಡಲು ಸಾಧ್ಯವೇ ಎಂದು ಎಎಸ್‌ಜಿ ಅವರನ್ನು ಪ್ರಶ್ನಿಸಿತು. ಜೊತೆಗೆ “ನಾವು ಪ್ರಕರಣ ನಿರ್ಧರಿಸುವವರೆಗೆ ಕೌನ್ಸೆಲಿಂಗ್ ಆರಂಭವಾಗುವುದಿಲ್ಲ ಎನ್ನುವುದಕ್ಕೆ ನಿಮ್ಮ ಮಾತಿನ ಭರವಸೆಯನ್ನು ನಾವು ತೆಗೆದುಕೊಳ್ಳುತ್ತೇವೆ” ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು. "ಖಂಡಿತವಾಗಿಯೂ ಹಾಗೆ ಮಾಡಬಹುದು. ಯಾವುದೇ ತೊಂದರೆ ಎದುರಾದಲ್ಲಿ ದಾತಾರ್ ಅವರು ನನ್ನನ್ನು ನೇರವಾಗಿ ಸಂಪರ್ಕಿಸಬಹುದು" ಎಂದು ನಟರಾಜ್ ಪ್ರತಿಕ್ರಿಯಿಸಿದರು.
ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಖಿಲ ಭಾರತ ಕೋಟಾ ಸೀಟುಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ 27 ಮೀಸಲಾತಿ ಮತ್ತು ಇಡಬ್ಲ್ಯೂಎಸ್‌ಗೆ ಶೇ 10 ಮೀಸಲಾತಿ ನಿಗದಿಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.