ನೀಟ್ ಅಕ್ರಮ ನಡೆದಿರುವುದರಲ್ಲಿ ಸಂದೇಹವೇ ಇಲ್ಲ ಎಂದ ಸುಪ್ರೀಂ: ಮರುಪರೀಕ್ಷೆ ಕುರಿತು ಶೀಘ್ರ ನಿರ್ಧಾರ

ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಮಾಣವನ್ನು ಅರಿಯುವುದಕ್ಕಾಗಿ ಸೋರಿಕೆಯಾಗಿದ್ದು ಯಾವಾಗ? ಸೋರಿಕೆಯಾದ ವಿಧಾನ, ಜೊತೆಗೆ ಪರೀಕ್ಷೆ ಮತ್ತು ಸೋರಿಕೆ ನಡುವಿನ ಅವಧಿ ಬಗ್ಗೆ ವಿವರಗಳನ್ನು ತಿಳಿಸುವಂತೆ ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.
Supreme Court and NEET-UG 2024
Supreme Court and NEET-UG 2024

ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪದವಿ ಪರೀಕ್ಷೆಯಲ್ಲಿ (ನೀಟ್‌ - ಯುಜಿ) ಅಕ್ರಮ ನಡೆದಿದೆ ಎಂಬುದರಲ್ಲಿ ಸಂದೇಹವೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಆದರೆ ಮರುಪರೀಕ್ಷೆ ನಡೆಸುವ ಅಗತ್ಯವಿದೆಯೇ ಎಂಬುದನ್ನು ನಿರ್ಧರಿಸುವುದಕ್ಕಾಗಿ ಪ್ರಶ್ನೆ ಪತ್ರಿಕೆಯ ಸೋರಿಕೆಯ ಪ್ರಮಾಣ ಎಷ್ಟಿದೆ ಎಂಬುದನ್ನು ತೀರ್ಮಾನಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಹೇಳಿದೆ.

Also Read
[ನೀಟ್‌] ನಕಲಿ ದಾಖಲೆ ನೀಡಿ ಮರುಮೌಲ್ಯಮಾಪನ ಕೋರಿಕೆ: ಕಾನೂನು ಕ್ರಮ ನಿರ್ಬಂಧಿಸುವುದಿಲ್ಲ ಎಂದ ಅಲಾಹಾಬಾದ್ ಹೈಕೋರ್ಟ್

ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆ ಒದಗಿದೆ ಎಂಬುದರಲ್ಲಿ ಸಂದೇಹ ಇಲ್ಲ. ಪ್ರಶ್ನೆಪತ್ರಿಕೆ ಸೋರಿಕೆಯ ಪರಿಣಾಮ ಏನೆಂಬುದನ್ನು ಸೋರಿಕೆಯ ಸ್ವರೂಪ ಅವಲಂಬಿಸಿರುತ್ತದೆ. ಸೋರಿಕೆ ವ್ಯಾಪಕವಾಗಿ ಆಗಿರದಿದ್ದರೆ ಆಗ ಪರೀಕ್ಷೆ ರದ್ದತಿ ಅಗತ್ಯ ಇರುವುದಿಲ್ಲ. 23 ಲಕ್ಷ ವಿದ್ಯಾರ್ಥಿಗಳ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ನಾವು ವಿಚಾರಣೆ ನಡೆಸುತ್ತಿದ್ದೇವೆ ಎನ್ನುತ್ತಾ ಪ್ರಕರಣದ ಗಂಭೀರತೆಯನ್ನು ಪೀಠ ಪ್ರಸ್ತಾಪಿಸಿತು.

ಏನೇ ಆಗಲಿ, ಈ ವರ್ಷ ಪರೀಕ್ಷೆಯ ವೇಳೆ ನಡೆದಿರುವ ಅಕ್ರಮಗಳನ್ನು ಒಪ್ಪಿಕೊಳ್ಳುವುದು ಮುಖ್ಯ. ನಾವು ಸ್ವಯಂ ನಿರಾಕರಣೆಯಲ್ಲಿರಬಾರದು. ಸ್ವಯಂ ನಿರಾಕರಣೆ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ ಎಂದು ನ್ಯಾಯಾಲಯ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರಕ್ಕೆ (ಎನ್ಟಿಎ) ಕಿವಿಮಾತು ಹೇಳಿತು.

ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆ ಆಗಿದ್ದರೆ ಅದರ ಪರಿಣಾಮ ತುಂಬಾ ವ್ಯಾಪಕವಾಗಿ ಇರುತ್ತಿತ್ತು ಎಂದ ಪೀಠ ಮರುಪರೀಕ್ಷೆ ಅಗತ್ಯವಿದೆಯೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಕುರಿತಂತೆ ಕೆಲ ಪ್ರಶ್ನೆಗಳನ್ನು ಎತ್ತಿದೆ.

ವ್ಯವಸ್ಥಿತ ಮಟ್ಟದಲ್ಲಿ ಅಕ್ರಮ ನಡೆದಿದೆಯೇ; ಉಲ್ಲಂಘನೆಯು ಸಂಪೂರ್ಣ ಪರೀಕ್ಞಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಲಿದೆಯೇ? ವಂಚನೆಯ ಲಾಭ ಪಡೆದಿರುವವರನ್ನು ಕಳಂಕರಹಿತ ವಿದ್ಯಾರ್ಥಿಗಳಿಂದ ಪ್ರತ್ಯೇಕಿಸಲು ಸಾಧ್ಯವೇ? ಎಂಬ ಕುರಿತು ಉತ್ತರಿಸುವಂತೆ ಅದು ಸೂಚಿಸಿದೆ.

ಪರೀಕ್ಷೆಯ ಪವಿತ್ರತೆಯ ಉಲ್ಲಂಘನೆ ವ್ಯಾಪಕವಾಗಿದ್ದರೆ ಹಾಗೂ ಕಳಂಕಿತ ಮತ್ತು ಕಳಂಕವಿಲ್ಲದ ಅಭ್ಯರ್ಥಿಗಳನ್ನು ಪ್ರತ್ಯೇಕಿಸಲು ಸಾಧ್ಯವಾಗದಿದ್ದರೆ, ಮರುಪರೀಕ್ಷೆಗೆ ಆದೇಶಿಸಬಹುದು. ಆದರೆ ವಂಚನೆಯ ಲಾಭ ಪಡೆದಿರುವವರನ್ನು ಗುರುತಿಸಿ ಸೀಮಿತಗೊಳಿಸಿದರೆ, ಮರುಪರೀಕ್ಷೆ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಹೀಗಾಗಿ ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಮಾಣವನ್ನು ಅರಿಯುವುದಕ್ಕಾಗಿ ಸೋರಿಕೆಯಾಗಿದ್ದು ಯಾವಾಗ? ಸೋರಿಕೆಯಾದ ವಿಧಾನ, ಜೊತೆಗೆ ಪರೀಕ್ಷೆ ಮತ್ತು ಸೋರಿಕೆ ನಡುವಿನ ಅವಧಿ ಬಗ್ಗೆ ಮಾಹಿತಿ ನೀಡುವಂತೆ ಎನ್‌ಟಿಎಗೆ ಅದು ಸೂಚಿಸಿದೆ.

Also Read
ನೀಟ್‌ ವಿವಾದ: ಕೃಪಾಂಕ ರದ್ದು, ಕಡಿಮೆ ಸಮಯಾವಕಾಶ ಸಿಕ್ಕವರಿಗೆ ಮರುಪರೀಕ್ಷೆ ಎಂದು ಸುಪ್ರೀಂಗೆ ಕೇಂದ್ರದ ವಿವರಣೆ

ಸೋರಿಕೆಯ ಲಾಭ ಪಡೆದವರನ್ನು ಪತ್ತೆಹಚ್ಚಲು ಕೈಗೊಂಡ ಕ್ರಮಗಳು, ಸೋರಿಕೆಯಾದ ಕೇಂದ್ರಗಳು/ ನಗರಗಳನ್ನು ಗುರುತಿಸಲು ತೆಗೆದುಕೊಂಡ ಕ್ರಮಗಳು ಮತ್ತು ಸೋರಿಕೆಯ ಫಲಾನುಭವಿಗಳನ್ನು ಗುರುತಿಸಲು ಅನುಸರಿಸಿದ ವಿಧಾನಗಳ ಬಗ್ಗೆ ತಿಳಿಸುವಂತೆ ನ್ಯಾಯಾಲಯ ಎನ್‌ಟಿಎಗೆ ನಿರ್ದೇಶಿಸಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮದ ಕುರಿತು (ತನಿಖೆ ನಡೆಸುತ್ತಿರುವ) ಸಿಬಿಐ ಸ್ಥಿತಿಗತಿ ವರದಿ ಸಲ್ಲಿಸಬೇಕು ಎಂದು ಅದು ಸೂಚಿಸಿದೆ.

ಅನುಮಾನಾಸ್ಪದ ಪ್ರಕರಣಗಳನ್ನುಪತ್ತೆ ಹಚ್ಚುವುದಕ್ಕಾಗಿ, ಕಳಂಕಿತ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸುವುದಕ್ಕಾಗಿ ದತ್ತಾಂಶ ವಿಶ್ಲೇಷಣೆ ಬಳಸಲು ಸರ್ಕಾರದ ಸೈಬರ್ ವಿಧಿ ವಿಜ್ಞಾನಕ್ಕೆ ಸಾಧ್ಯ ಇದೆಯೇ ಎಂಬ ಕುರಿತು ಕೇಂದ್ರ ಸರ್ಕಾರ ಮತ್ತು ಎನ್ಟಿಎ ತನಗೆ ತಿಳಿಸಬೇಕು ಎಂದು ನ್ಯಾಯಾಲಯ ಹೇಳಿದೆ.

Also Read
ನೀಟ್‌ ಪದವಿ 2024: ಕೌನ್ಸೆಲಿಂಗ್‌ಗೆ ತಡೆ ನೀಡಲು ಮತ್ತೆ ಸುಪ್ರೀಂ ಕೋರ್ಟ್ ನಕಾರ

ಈ ಎಲ್ಲಾ ವಿವರಗಳನ್ನು ಜುಲೈ 10 ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕಿದ್ದು ಪ್ರಕರಣದ ಮುಂದಿನ ವಿಚಾರಣೆ ಜುಲೈ 11ರ ಗುರುವಾರ ನಡೆಯಲಿದೆ.

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸಾಮೂಹಿಕವಾಗಿ ಸೋರಿಕೆಯಾಗಿದೆ ಎಂಬ ಆರೋಪ ಸೇರಿದಂತೆ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ವಿವಿಧ ಅಕ್ರಮಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

Kannada Bar & Bench
kannada.barandbench.com