ನೀಟ್ ಪದವಿ ಪರೀಕ್ಷೆ ರದ್ದತಿ ಕೋರಿದ್ದ ಅರ್ಜಿಗಳ ವಿಚಾರಣೆ ಜುಲೈ 18ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್

ದೊಡ್ಡ ಪ್ರಮಾಣದ ಗೌಪ್ಯತೆ ಉಲ್ಲಂಘನೆಯಾದ ಬಗ್ಗೆ ಪುರಾವೆಗಳಿಲ್ಲದ ಕಾರಣ ಮೇ 5ರಂದು ನಡೆದಿದ್ದ ಪರೀಕ್ಷೆ ರದ್ದುಗೊಳಿಸಬಾರದು ಕೇಂದ್ರ ಸರ್ಕಾರ ಮತ್ತು ಎನ್‌ಟಿಎ ಈ ಹಿಂದೆ ಕೋರಿದ್ದವು.
Supreme Court and NEET-UG 2024
Supreme Court and NEET-UG 2024
Published on

ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ವೈದ್ಯಕೀಯ ಪದವಿ ಕೋರ್ಸ್‌ಗಳಿಗೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ರದ್ದತಿ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಮುಂದೂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಎನ್‌ಟಿಎ ಸಲ್ಲಿಸಿರುವ ಪ್ರತಿಕ್ರಿಯೆಗಳನ್ನು ಇನ್ನೂ ಪರಿಶೀಲಿಸದ ಕಾರಣ ಪ್ರಕರಣವನ್ನು ಜುಲೈ 18ರ ಗುರುವಾರ (ಮುಂದಿನ ವಾರ) ವಿಚಾರಣೆ ನಡೆಸುವುದಾಗಿ ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿತು.

Also Read
ನೀಟ್‌ ಪದವಿ 2024: ಕೌನ್ಸೆಲಿಂಗ್‌ಗೆ ತಡೆ ನೀಡಲು ಮತ್ತೆ ಸುಪ್ರೀಂ ಕೋರ್ಟ್ ನಕಾರ

ಎನ್‌ಟಿಎ ಮತ್ತು ಕೇಂದ್ರ ಸರ್ಕಾರ ನೀಡಿರುವ ಪ್ರತಿಕ್ರಿಯೆಯ ಪ್ರತಿಗಳು ಕೆಲ ವಕೀಲರಿಗೆ ದೊರೆತಿಲ್ಲ. ಪ್ರತಿಕ್ರಿಯೆಯ ಪರಿಶೀಲನೆಗಾಗಿ ಜುಲೈ 18, ಗುರುವಾರಕ್ಕೆ ಪ್ರಕರಣ ಮುಂದೂಡಲಾಗುತ್ತಿದೆ ಎಂದು ನ್ಯಾಯಾಲಯ ವಿವರಿಸಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ನೀಟ್ ಯುಜಿ ಪ್ರವೇಶಾತಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ಕೆಲ ಅರ್ಜಿದಾರರು ಮರು ಪರೀಕ್ಷೆಗೆ ಒತ್ತಾಯಿಸಿದ್ದರೆ ಮತ್ತೆ ಕೆಲವರು ವ್ಯಾಪಕವಾಗಿ ಅಕ್ರಮಗಳು ನಡೆದಿಲ್ಲದೇ ಇರುವುದರಿಂದ ಮರುಪರೀಕ್ಷೆ ಅಗತ್ಯವಿಲ್ಲ ಎಂದಿದ್ದರು.

ಜೂನ್ 11 ರಂದು ನಡೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕೆಲವು ಅರ್ಜಿಗಳಿಗೆ ಪ್ರತಿಕ್ರಿಯಿಸಲು ಎನ್‌ಟಿಎಗೆ ಆದೇಶ ನೀಡಿತ್ತು. ಆದರೆ ಕೌನ್ಸೆಲಿಂಗ್ ನಿಲ್ಲಿಸಲು ನಿರಾಕರಿಸಿತ್ತು.

ಜುಲೈ 8 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ಮರುಪರೀಕ್ಷೆ ಅಗತ್ಯವಿದೆಯೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಪರೀಕ್ಷೆಯು ಎಷ್ಟು ಪ್ರಮಾಣದಲ್ಲಿ ರಾಜಿಯಾಗಿದೆ ಎಂಬುದನ್ನು ನಿರ್ಧರಿಸಬೇಕು ಎಂದು ನ್ಯಾಯಾಲಯ ಹೇಳಿತ್ತು.

Also Read
[ನೀಟ್‌] ನಕಲಿ ದಾಖಲೆ ನೀಡಿ ಮರುಮೌಲ್ಯಮಾಪನ ಕೋರಿಕೆ: ಕಾನೂನು ಕ್ರಮ ನಿರ್ಬಂಧಿಸುವುದಿಲ್ಲ ಎಂದ ಅಲಾಹಾಬಾದ್ ಹೈಕೋರ್ಟ್

ದೊಡ್ಡ ಪ್ರಮಾಣದ ಗೌಪ್ಯತೆಯ ಉಲ್ಲಂಘನೆಯ ಪುರಾವೆಗಳಿಲ್ಲದ ಕಾರಣ ಪರೀಕ್ಷೆಯನ್ನು ರದ್ದುಗೊಳಿಸುವ ಅಥವಾ ಮರುಪರೀಕ್ಷೆ ನಡೆಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ಎನ್‌ಟಿಎ ಪ್ರತಿಪಾದಿಸಿದ್ದವು.

ಈ ವಾದಕ್ಕೆ ದನಿಗೂಡಿಸಿದ್ದ ಎನ್‌ಟಿಎ ನಿನ್ನೆ (ಬುಧವಾರ) ನಡೆದ ವಿಚಾರಣೆ ವೇಳೆ ʼಪರೀಕ್ಷೆಗೂ  ಒಂದು ದಿನ ಮೊದಲು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಪ್ರಧಾನ ಸಾಕ್ಷ್ಯ ತಿರುಚಿದ್ದಾಗಿದ್ದು ಪರೀಕ್ಷೆಯ ದಿನಕ್ಕೂ ಮೊದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಅನಿಸಿಕೆ ಮೂಡಿಸಲು ಸೃಷ್ಟಿಸಲಾಗಿದೆʼ ಎಂದಿತ್ತು.

Kannada Bar & Bench
kannada.barandbench.com