ನೀಟ್‌ ವಿವಾದ: ಕೌನ್ಸೆಲಿಂಗ್ ತಡೆಗೆ ಸುಪ್ರೀಂ ನಕಾರ; ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಎನ್‌ಟಿಎಗೆ ನೋಟಿಸ್‌

ನೀಟ್ ಪರೀಕ್ಷೆ ಅಕ್ರಮ ಆರೋಪ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ವೈದ್ಯಕೀಯ ಪ್ರವೇಶಾತಿ ಪರೀಕ್ಷೆ ರದ್ದತಿ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
Supreme Court and NEET-UG 2024
Supreme Court and NEET-UG 2024

ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶಾತಿ ಪದವಿ ಪರೀಕ್ಷೆಯಲ್ಲಿ (ನೀಟ್‌ ಯುಜಿ 2024) ನಡೆದಿದೆ ಎನ್ನಲಾದ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳನ್ನು ಪ್ರಶ್ನಿಸಿದ್ದ ವಿವಿಧ ಅರ್ಜಿಗಳನ್ನು ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ವೈದ್ಯಕೀಯ ಪ್ರವೇಶಾತಿ ಕೌನ್ಸೆಲಿಂಗ್‌ಗೆ ತಡೆ ನೀಡಲು ನಿರಾಕರಿಸಿದೆ [ಶಿವಾಂಗಿ ಮಿಶ್ರಾ ಮತ್ತು ರಾಷ್ಟ್ರೀಯ ಪರೀಕ್ಷಾ  ಸಂಸ್ಥೆ ಇನ್ನಿತರರ ನಡುವಣ ಪ್ರಕರಣ].

ಮೇ ತಿಂಗಳಲ್ಲಿ ನಡೆದ ಪರೀಕ್ಷೆ ರದ್ದುಗೊಳಿಸುವಂತೆ ಮತ್ತು ಪತ್ರಿಕೆ ಸೋರಿಕೆ ಕುರಿತು ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಲ್ಲಿಸಲಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಪ್ರತಿಕ್ರಿಯೆ ಕೇಳಿ ನೋಟಿಸ್‌ ಜಾರಿ ಮಾಡಿದೆ. ಜುಲೈ 8ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

 "ನಾವು ಕೌನ್ಸೆಲಿಂಗ್‌ಗೆ ತಡೆ ನೀಡುವುದಿಲ್ಲ. ನೀವು ಮತ್ತಷ್ಟು ವಾದ ಮುಂದುವರಿಸಿದರೆ, ಅರ್ಜಿ ವಜಾ ಮಾಡಬೇಕಾಗುತ್ತದೆ " ಎಂದು ನ್ಯಾಯಾಲಯ ಅರ್ಜಿದಾರರಿಗೆ ಎಚ್ಚರಿಕೆ ನೀಡಿತು.

ಅಕ್ರಮದ ಹಿನ್ನೆಲೆಯಲ್ಲಿ ನೀಟ್‌- ಯುಜಿ 2024 ಪರೀಕ್ಷೆ ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ದೆಹಲಿ, ಕಲ್ಕತ್ತಾ ಸೇರಿದಂತೆ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಕೂಡ ಇದೇ ಬಗೆಯ ಅರ್ಜಿಗಳನ್ನು ಸಲ್ಲಿಸಲಾಗಿದೆ.  

ಇದೇ ವೇಳೆ ಪಾಟ್ನಾದಲ್ಲಿ ಪತ್ರಿಕೆ ಸೋರಿಕೆಯಾಗಿದ್ದು ರಾಜಸ್ಥಾನದಲ್ಲಿ ಅಭ್ಯರ್ಥಿಗಳಿಗೆ ತಪ್ಪು ಪ್ರಶ್ನೆ ಪತ್ರಿಕೆ ನೀಡಲಾಗಿದೆ ಎಂಬ ಆರೋಪಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯೊಂದು ನಿರ್ದಿಷ್ಟವಾಗಿ ಉಲ್ಲೇಖಿಸಿದೆ.

ಜೂನ್ 4 ರಂದು ಪ್ರಕಟವಾದ ನೀಟ್‌ ಯುಜಿ ಪರೀಕ್ಷೆ ಫಲಿತಾಂಶ ವಿವಾದಕ್ಕೆ ಕಾರಣವಾಗಿದ್ದು 67 ವಿದ್ಯಾರ್ಥಿಗಳು 720ಕ್ಕೆ 720ರಷ್ಟು ಸಂಪೂರ್ಣ ಅಂಕಗಳಿಸಿ ಮೊದಲ ರ‍್ಯಾಂಕ್ ಪಡೆದಿರುವುದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

ಮತ್ತೊಂದೆಡೆ ಸಮಯ ಪೋಲಾಗಿರುವುದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡುವಲ್ಲಿ ಅಕ್ರಮಗಳು ನಡೆದಿವೆ ಎಂದು ಕೂಡ ಅಭ್ಯರ್ಥಿಗಳು ಆರೋಪಿಸಿದ್ದರು.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ , ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠ ನೀಟ್‌ ಯುಜಿ 2024ರ ಫಲಿತಾಂಶಗಳ ಪ್ರಕಟಣೆಗೆ ತಡೆ ನೀಡಲು ಮೇ 17ರಂದು ನಿರಾಕರಿಸಿತ್ತು.  ಆದರೆ ಮನವಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಿಗೆ ನೋಟಿಸ್‌ ನೀಡಿತ್ತು.

Kannada Bar & Bench
kannada.barandbench.com