ನೀಟ್‌ ಯುಜಿ: ಎನ್‌ಟಿಎ, ಕೇಂದ್ರ ಪದೇ ಪದೇ ನಿಲುವು ಬದಲಿಸುವುದನ್ನು ನಿಲ್ಲಿಸಬೇಕು; ದೋಷ ಸರಿಪಡಿಸಬೇಕು: ಸುಪ್ರೀಂ

ನೀಟ್‌ ಯುಜಿ 2024 ಪರೀಕ್ಷೆಯಲ್ಲಿ ಹಜಾರಿಭಾಗ್‌ ಮತ್ತು ಪಟ್ನಾ ಹೊರತುಪಡಿಸಿ ಬೇರೆಲ್ಲೂ ಲೋಪ ಸಂಭವಿಸಿಲ್ಲ, ವ್ಯವಸ್ಥೆಯ ಉಲ್ಲಂಘನೆಯಾಗಿಲ್ಲ. ಹೀಗಾಗಿ, ಮರು ಪರೀಕ್ಷೆ ಅಗತ್ಯವಿಲ್ಲ ಎಂದು ನ್ಯಾಯಾಲಯವು ತೀರ್ಪಿನಲ್ಲಿ ಪುನರುಚ್ಚರಿಸಿದೆ.
Supreme Court and NEET-UG 2024
Supreme Court and NEET-UG 2024
Published on

ಪ್ರಸಕ್ತ ವರ್ಷದಲ್ಲಿ ನಡೆದಿರುವ ಪದವಿ ಕೋರ್ಸ್‌ಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗೆ (ನೀಟ್‌) ಕುರಿತಾದ ಸಮಸ್ಯೆಗಳು ಮುಂದೆ ಮರುಕಳಿಸದಂತೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ಖಾತರಿವಹಿಸಬೇಕು ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ ತಾಕೀತು ಮಾಡಿದೆ.

ಪ್ರಶ್ನೆ ಪತ್ರಿಕೆ ಇರಿಸುವ ಸ್ಟ್ರಾಂಗ್‌ರೂಮ್‌ಗಳು, ಕೃಪಾಂಕ ನೀಡುವುದು ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಪದೇ ಪದೇ ನಿಲುವು ಬದಲಿಸುವುದನ್ನು ಎನ್‌ಟಿಎ ನಿಲ್ಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.

Also Read
ನೀಟ್‌ ಪ್ರಕರಣ: ಬ್ಯಾಕಪ್ ಪ್ರಶ್ನೆ ಪತ್ರಿಕೆಗಳ ಬಳಕೆ; ವಿವರ ನೀಡುವಂತೆ ಕೇಂದ್ರ, ಎನ್‌ಟಿಎಗೆ ಸುಪ್ರೀಂ ತಾಕೀತು

“ಈಗ ಮಾಡಿರುವಂತೆ ಎನ್‌ಟಿಎ ಪದೇಪದೇ ನಿಲುವು ಬದಲಿಸುವುದನ್ನು ನಿಲ್ಲಿಸಬೇಕು ಎಂದು ನಾವು ಹೇಳಿದ್ದೇವೆ. ಇದು ಒಳ್ಳೆಯ ಸಂದೇಶ ರವಾನಿಸುವುದಿಲ್ಲ. ಸ್ಟ್ರಾಂಗ್‌ ರೂಮ್‌ನಲ್ಲಿನ ಹಿಂದಿನ ಬಾಗಿಲನ್ನು ತೆರೆಯಲಾಗಿತ್ತು ಇತ್ಯಾದಿ, ಕೃಪಾಂಕ ನೀಡಿಕೆ, ಈ ಕೃಪಾಂಕ ನೀಡಿದ್ದರಿಂದ 44 ಮಂದಿ 720/720 ಪಡೆದಿರುವುದು ಸರಿ ಕಾಣದು. ಈ ಎಲ್ಲವೂ ಎನ್‌ಟಿಎಗಳ ದೋಷಗಳನ್ನು ಎತ್ತಿ ತೋರಿಸಿದ್ದು, ಈ ವಿಚಾರಗಳನ್ನು ಸಮಿತಿಯು ಗುರುತಿಸಿ, ಪರಿಹರಿಸಿಕೊಳ್ಳಬೇಕು. ಈ ವಿಚಾರಗಳನ್ನು ಕೇಂದ್ರ ಸರ್ಕಾರ ಪ್ರಸಕ್ತ ವರ್ಷವೇ ಸರಿಪಡಿಸಿದರೆ ಅವುಗಳು ಮರುಕಳಿಸುವುದಿಲ್ಲ” ಎಂದು ಪೀಠವು ತೀರ್ಪಿನ ವೇಳೆ ತಿಳಿಸಿದೆ.

ಪ್ರಸಕ್ತ ವರ್ಷದ ನೀಟ್‌ ಯುಜಿ ಪರೀಕ್ಷೆಯಲ್ಲಿ ಹಜಾರಿಭಾಗ್‌ ಮತ್ತು ಪಾಟ್ನಾ ಹೊರತುಪಡಿಸಿ ಬೇರೆಲ್ಲೂ ಲೋಪ ಸಂಭವಿಸಿಲ್ಲ, ವ್ಯವಸ್ಥೆಯ ಉಲ್ಲಂಘನೆ ನಡೆಯದೇ ಇರುವುದರಿಂದ ಪ್ರಸಕ್ತ ವರ್ಷದಲ್ಲಿ ನೀಟ್‌ ಮರು ಪರೀಕ್ಷೆ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. 

Kannada Bar & Bench
kannada.barandbench.com