ಲಂಚ ಸ್ವೀಕರಿಸುವಾಗ ಉಸ್ತುವಾರಿ ಸಬ್ ರಿಜಿಸ್ಟ್ರಾರ್ ಸಿಕ್ಕಿಬಿದ್ದಿಲ್ಲ ಎಂದಿರುವ ಕರ್ನಾಟಕ ಹೈಕೋರ್ಟ್ ಈಚೆಗೆ ಅವರ ವಿರುದ್ಧ ಭ್ರಷ್ಟಾಚಾರ ನಿರ್ಮೂಲನೆ ಕಾಯಿದೆ ಅಡಿ ದಾಖಲಾಗಿದ್ದ ಪ್ರಕರಣವನ್ನು ವಜಾ ಮಾಡಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಪಿ ಮಂಜುನಾಥ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.
ಬಿ ಜಯರಾಜ್ ವರ್ಸಸ್ ಆಂಧ್ರಪ್ರದೇಶ ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ “ಲಂಚ ಬೇಡಿಕೆ ಇದ್ದರೆ, ಅದನ್ನು ಪಡೆದಿರಬೇಕು. ಕೇವಲ ಲಂಚ ಬೇಡಿಕೆ ಮಾತ್ರವೇ ಆಗಲಿ ಅಥವಾ ನಗದು ಹಣದ ಜಪ್ತಿಯಾಗಲಿ ಮಾತ್ರವೇ ಭ್ರಷ್ಟಾಚಾರ ನಿರ್ಮೂಲನೆ ಕಾಯಿದೆ ಸೆಕ್ಷನ್ 7ರ ಅಡಿ ಅಪರಾಧವಾಗುವುದಿಲ್ಲ ಎಂದಿದೆ. ಸೆಕ್ಷನ್ 7ರ ಅಡಿ ಅಪರಾಧ ನಿರೂಪಿಸಲು ಬೇಡಿಕೆ ಅಥವಾ ಸ್ವೀಕಾರ ಅನಿವಾರ್ಯವಲ್ಲ (ಸೈನ್ ಕ್ವಾ ನಾನ್)” ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ಹೈಕೋರ್ಟ್ ಉಲ್ಲೇಖಿಸಿದೆ. ಕೇವಲ ಬೇಡಿಕೆ ಮಾತ್ರವೇ ಆಗಲಿ ಅಥವಾ ಕೇವಲ ಸ್ವೀಕಾರ ಮಾತ್ರವೇ ಆಗಲಿ ಕಾಯಿದೆಯ ಸೆಕ್ಷನ್ 7ರ ಅಡಿ ಅಪರಾಧವಾಗುವುದಿಲ್ಲ ಎಂದು ಈ ಹಿನ್ನೆಲೆಯಲ್ಲಿ ಹೇಳಿದೆ.
ಮುಂದುವರಿದು ಪೀಠವು “ಲಂಚ ಸ್ವೀಕರಿಸದೇ ಕೇವಲ ಬೇಡಿಕೆ ಅಥವಾ ಬೇಡಿಕೆ ಇಡದೇ ಕೇವಲ ಸ್ವೀಕಾರವು ಸೆಕ್ಷನ್ 7ರ ಅಡಿ ಆರೋಪಿಗಳ ವಿರುದ್ಧದ ಅಪರಾಧ ನಿರೂಪಿಸಲು ಸಾಕಾಗದು” ಎಂದಿದೆ.
ಹಾಲಿ ಪ್ರಕರಣದಲ್ಲಿ ಅರ್ಜಿದಾರರು ಲಂಚದ ಬೇಡಿಕೆ ಇಟ್ಟೂ ಇಲ್ಲ, ಅದನ್ನೂ ಸ್ವೀಕರಿಸಿಯೂ ಇಲ್ಲ ಎಂದು ತಿಳಿದು ಬಂದಿದೆ. ನಿರ್ದಿಷ್ಟ ಕೆಲಸ ಮಾಡಲು ಲಂಚದ ಬೇಡಿಕೆ ಇಡಬೇಕು, ಅದೇ ರೀತಿ ಲಂಚವನ್ನು ಆ ಕೆಲಸಕ್ಕಾಗಿ ಸ್ವೀಕರಿಸಬೇಕು. ಪ್ರಕರಣದಲ್ಲಿ ಲಂಚವೆನ್ನಲಾದ ಹಣವನ್ನು ಅರ್ಜಿದಾರರ ಮೇಜಿನ ಮೇಲೆ ದೊರೆತಿದೆ. ಅರ್ಜಿದಾರರ ಮುಂದೆ 2022ರ ಫೆಬ್ರವರಿ 24ರಂದು ಕೆಲಸ ಮಾಡಲು ದಾಖಲೆ ಸಲ್ಲಿಸಲಾಗಿದ್ದು, ಅಂದೇ ಕೆಲಸವನ್ನು ಮುಗಿಸಲಾಗಿದೆ. ದಾಖಲೆ ನೀಡಲು ಅರ್ಜಿದಾರರು ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದರೆ ಅದು ಬೇರೆಯದೇ ಪ್ರಕರಣವಾಗುತ್ತಿತ್ತು. ಹಾಲಿ ಪ್ರಕರಣದಲ್ಲಿ ದಾಖಲೆ ನೀಡಿ ಏಳು ದಿನಗಳಾದ ಬಳಿಕ, ಅರ್ಜಿದಾರರ ಮುಂದೆ ಯಾವುದೇ ಕೆಲಸ ಬಾಕಿ ಇಲ್ಲದಿರುವಾಗ, ದಾಖಲೆ ನೋಂದಾಯಿಸಿ, ಎರಡು ತಿಂಗಳಾದ ಬಳಿಕ ಅಂತಿಮ ಟ್ರ್ಯಾಪ್ ನಡೆಸಲಾಗಿದೆ ಎನ್ನುವ ಅಂಶಗಳನ್ನು ನ್ಯಾಯಾಲಯವು ಗಮನಿಸಿದೆ.
ಲಂಚ ಸ್ವೀಕರಿಸುತ್ತಿರುವಾಗ ಅರ್ಜಿದಾರರನ್ನು ಬಂಧಿಸಲಾಗಿಲ್ಲ. ಕೆಲಸ ಮಾಡುವುದಕ್ಕೂ ಮುಂಚಿತವಾಗಿ ಲಂಚಕ್ಕೆ ಬೇಡಿಕೆ ಇಟ್ಟು ಸ್ವೀಕರಿಸಿದರೆ ಸೆಕ್ಷನ್ 7 ಅನ್ವಯಿಸುತ್ತದೆ. ಲಂಚ ಬೇಡಿಕೆ ಇಟ್ಟ ಎರಡು ತಿಂಗಳ ಬಳಿಕ ಟ್ರ್ಯಾಪ್ ನಡೆಸಲಾಗಿದೆ. ಮೊದಲ ಮತ್ತು ಎರಡನೇ ಟ್ರ್ಯಾಪ್ ವಿಫಲವಾಗಿವೆ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.
ಭ್ರಷ್ಟಾಚಾರ ನಿರ್ಮೂಲನಾ ಕಾಯಿದೆಯ ಸೆಕ್ಷನ್ 7 ಕೆಲಸ ಮಾಡುವುದಕ್ಕೂ ಮುಂಚಿತವಾಗಿ (ಪ್ರಿ-ಪೇಯ್ಡ್) ಬೇಡಿಕೆ ಇರಿಸುವುದು ಹಾಗೂ ನಂತರ ಸ್ವೀಕರಿಸುವುದನ್ನು ಸೂಚಿಸುತ್ತದೆ. ಆದರೆ ಈ ಸೆಕ್ಷನ್ ಅಡಿ ಕೆಲಸದ ನಂತರದ ಬೇಡಿಕೆಯ (ಪೋಸ್ಟ್-ಪೇಯ್ಡ್), ಅದರಲ್ಲಿಯೂ, ಆರೋಪಿಸಲಾದ ಬೇಡಿಕೆಯ ಎರಡು ತಿಂಗಳ ನಂತರ ಬಲೆಗೆ ಕೆಡವುವಂತಹ ಪರಿಕಲ್ಪನೆಯಿಲ್ಲ ಎಂದು ನ್ಯಾಯಾಲಯ ವಿವರಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಮಂಜುನಾಥ್ ಅವರು ಕಂದಾಯ ಇಲಾಖೆಯ ಮುದ್ರಾಂಕ ಮತ್ತು ನೋಂದಣಿ ವಿಭಾಗದ ಸಿಬ್ಬಂದಿಯಾಗಿದ್ದು, ಹೊಸದುರ್ಗದ ಸಬ್ ರಿಜಿಸ್ಟ್ರಾರ್ ಹುದ್ದೆ ಖಾಲಿಯಾಗಿದ್ದ ಹಿನ್ನೆಲೆಯಲ್ಲಿ ಪ್ರಥಮ ದರ್ಜೆ ಸಹಾಯಕರಾದ ಮಂಜುನಾಥ್‌ಗೆ ಉಸ್ತುವಾರಿ ವಹಿಸಲಾಗಿತ್ತು. ದೂರುದಾರರ ಕೋರಿಕೆಯಂತೆ ಮಂಜುನಾಥ್ ಅವರು 18 ಲಕ್ಷ ರೂಪಾಯಿ ಮೌಲ್ಯಕ್ಕೆ ಅಡಮಾನ ಪತ್ರ ನೋಂದಣಿ ಮಾಡಿದ್ದರು. ಅಡಮಾನ ಪತ್ರ ನೋಂದಣಿಯಾದ ಏಳು ದಿನಗಳ ಬಳಿಕ ಅದನ್ನು ನೋಂದಣಿ ಮಾಡಲು ಮಂಜುನಾಥ್ ಅವರು ಐದು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಅಂದಿನ ಭ್ರಷ್ಟಚಾರ ನಿಯಂತ್ರಣ ದಳಕ್ಕೆ (ಎಸಿಬಿ) ದೂರು ನೀಡಲಾಗಿತ್ತು. ಇದರ ಆಧಾರದಲ್ಲಿ ಪ್ರಕರಣ ದಾಖಲಿಸಿ ಎಸಿಬಿ ನಡೆಸಿದ್ದ ಎರಡು ಟ್ರ್ಯಾಪ್‌ಗಳಿಗೆ ಮಂಜುನಾಥ್ ಬಿದ್ದಿರಲಿಲ್ಲ. ಅದಾಗ್ಯೂ, ಅರ್ಜಿದಾರ ಮಂಜುನಾಥ್ ವಿರುದ್ಧ ಕಾಯಿದೆ ಸೆಕ್ಷನ್ 7(ಎ) ಅಡಿ ಪ್ರಕ್ರಿಯೆ ಮುಂದುವರಿಸಲಾಗಿತ್ತು. ಇದನ್ನು ವಜಾ ಮಾಡುವಂತೆ ಮಂಜುನಾಥ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.