ಭಾರತ ವಿರೋಧಿ ನಿರೂಪಣೆಗಳ ಸದ್ದಡಗಿಸಿ: ಜೋಧಪುರ ಕಾನೂನು ವಿದ್ಯಾರ್ಥಿಗಳಿಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಆಗ್ರಹ

ಸಂಸತ್ತಿನಲ್ಲಿ ಈಚೆಗೆ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಿದ ಬಗ್ಗೆಯೂ ಉಪರಾಷ್ಟ್ರಪತಿ ಮೆಚ್ಚುಗೆ ವ್ಯಕ್ತಪಡಿಸಿದರು.
Vice President of India, Senior Advocate Jagdeep Dhankhar
Vice President of India, Senior Advocate Jagdeep Dhankhar
Published on

ರಾಷ್ಟ್ರದ ಪ್ರಗತಿಗೆ ಅಡ್ಡಿಯಾಗುವಂತಹ ಭಾರತ ವಿರೋಧಿ ನಿರೂಪಣೆಗಳನ್ನು ಹತ್ತಿಕ್ಕಲು ಕೆಲಸ ಮಾಡುವಂತೆ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ಈಚೆಗೆ ಜೋಧ್‌ಪುರದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ವಿದೇಶದಲ್ಲಿದ್ದಾಗ ದೇಶದ ವಿರುದ್ಧ ಮಾತನಾಡುವವರ ಬಗ್ಗೆ ಮೂಕರಾಗಿರಬೇಡಿ ಎಂದು ವೃತ್ತಿಯಿಂದ ಹಿರಿಯ ನ್ಯಾಯವಾದಿಗಳೂ ಆದ ಧನಕರ್‌ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

"ನೀವು ಭಾರತ ವಿರೋಧಿ ನಿರೂಪಗಳನ್ನು ತಟಸ್ಥಗೊಳಿಸಬೇಕು. ಯಾವುದೇ ಕಾರಣಕ್ಕೂ ಜನ ನಮ್ಮನ್ನು ಅವಮಾನಿಸಲು ನಾವು ಅನುಮತಿಸಬಾರದು. ನೀವು ಮಾತನಾಡದಿದ್ದರೆ, ಅತ್ಯಂತ ಮಹತ್ವದ ಬುದ್ಧಿಜೀವಿ ವರ್ಗ ಮಾತನಾಡದಿದ್ದರೆ, ರಾಷ್ಟ್ರದ ಪ್ರಗತಿಗೆ ಅಡ್ಡಿಯಾಗುತ್ತದೆ. ಅದು ಎಂದಿಗೂ ಸಂಭವಿಸಬಾರದು, ಅದು ಘಟಿಸುವುದಿಲ್ಲ ಎಂದು ನನಗೆ ಖಾತ್ರಿಯಿದೆ" ಎಂದು ಅವರು ಹೇಳಿದರು.

ವಿರೋಧ ಪಕ್ಷದ ನಾಯಕರನ್ನು ಪರೋಕ್ಷವಾಗಿ ಪ್ರಸ್ತಾಪಿಸುತ್ತಾ "ಅವರು ವಿದೇಶಕ್ಕೆ ಹೋಗುತ್ತಾರೆ ಮತ್ತು ನಮ್ಮ ಸಂಸ್ಥೆಗಳನ್ನು ಹಾಳುಮಾಡುತ್ತಾರೆ, ಅವರು ನಮ್ಮ ಸಂಸ್ಥೆಗಳಿಗೆ ಕಳಂಕ ತರುತ್ತಾರೆ ಮತ್ತು ಕೀಳಾಗಿ ಕಾಣುತ್ತಾರೆ. ನೀವು ಮೂಕ ಪ್ರೇಕ್ಷಕರಾಗಿರಬಾರದು, ವ್ಯಕ್ತಿ ಸರಿ ಎಂದು ನೀವು ಭಾವಿಸಿದರೆ, ಬೆಂಬಲಿಸಿ, ಆತ ತಪ್ಪು ಎಂದು ನಿಮಗನ್ನಿಸಿದರೆ, ನೀವು ಆತಂಕ ವ್ಯಕ್ತಪಡಿಸಬೇಕು. ನಿಮ್ಮ ಮೌನ ಮುಂದಿನ ವರ್ಷಗಳಲ್ಲಿ ನಿಮ್ಮೊಳಗೆ ಪ್ರತಿಧ್ವನಿಸುತ್ತದೆ. ಆಗ ನಾನೇಕೆ ಮೌನವಾಗಿದ್ದೆ ಎಂದು ನೀವೇ ಪ್ರಶ್ನೆ ಕೇಳುತ್ತೀರಿ” ಎಂದು ಅವರು ಹೇಳಿದರು.

ಸೆಪ್ಟೆಂಬರ್ 27ರಂದು ಎನ್‌ಎಲ್‌ಯು ಜೋಧ್‌ಪುರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವ ಆಡಳಿತ ಮತ್ತು ಕಾನೂನಿನ ಆಳ್ವಿಕೆಯಿಂದ ಆಡಳಿತ ನಡೆಸುವ ಸಮಾಜದಲ್ಲಿ ಯಾರೂ ಕಾನೂನಿಗಿಂತ ಮೇಲಿರಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು. ಕೇಂದ್ರ ಕಾನೂನು ಜಾರಿ ಸಂಸ್ಥೆಗಳು ಸ್ವೀಕರಿಸಿದ ನೋಟಿಸ್‌ಗಳ ವಿರುದ್ಧ ವ್ಯಕ್ತಿಗಳು ಪ್ರತಿಭಟನೆ ನಡೆಸುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಭಾರತದ ಸ್ವತಂತ್ರ ನ್ಯಾಯಾಂಗವನ್ನು ಕಂಡು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಸೂಯೆಪಡುತ್ತವೆ. ಆದ್ದರಿಂದ ಕಾನೂನಿಗಿಂತ ಮೇಲಿರುವಂತೆ ತಾವು ನಟಿಸುತ್ತ ಬಂಡಾಯ ಏಳುವುದನ್ನು ತಪ್ಪಿಸಬೇಕು ಎಂದು ಅವರು ಹೇಳಿದರು.

ಸಂಸತ್ತಿನಲ್ಲಿ ಈಚೆಗೆ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಿದ ಬಗ್ಗೆಯೂ ಉಪರಾಷ್ಟ್ರಪತಿ ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸದಾಗಿ ಸಂಸತ್ತಿನಲ್ಲಿ ಪ್ರಸ್ತಾಪಿಸಲಾದ ಭಾರತೀಯ ನ್ಯಾಯ ಸಂಹಿತೆಯನ್ನು ಅಧ್ಯಯನ ಮಾಡುವಂತೆ ಅವರು ಈ ಸಂದರ್ಭದಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Kannada Bar & Bench
kannada.barandbench.com