ವೃತ್ತಿಪರ ಕೋರ್ಸ್‌ಗಳಿಗೆ ಹೊಸದಾಗಿ ರ‍್ಯಾಂಕ್ ಪಟ್ಟಿ: ಪರಿಹಾರ ಸೂಚಿಸಲಾಗುವುದು ಎಂದು ಕಾಲಾವಕಾಶ ಪಡೆದ ಸರ್ಕಾರ

ವೃತ್ತಿಪರ ಕೋರ್ಸ್‌ ಪ್ರವೇಶಕ್ಕಾಗಿ ರ‍್ಯಾಂಕ್ ಪಟ್ಟಿ ತಯಾರಿಸಲು ವಿದ್ಯಾರ್ಥಿಗಳು ಪಿಯುಸಿಯಲ್ಲಿ ಪಡೆದಿರುವ ಶೇ.50 ಅಂಕ ಹಾಗೂ ಸಿಇಟಿಯಲ್ಲಿ ಪಡೆದಿರುವ ಶೇ.50 ಅಂಕ ಪರಿಗಣಿಸಿ ಹೊಸದಾಗಿ ರ‍್ಯಾಂಕ್ ಪಟ್ಟಿ ಪ್ರಕಟಿಸಬೇಕು ಎಂದು ಆದೇಶಿಸಿದ್ದ ಪೀಠ.
Karnataka HC and Karnataka Examinations Authority
Karnataka HC and Karnataka Examinations Authority

ಕಳೆದ 2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸುವುದಕ್ಕೆ ಸಂಬಂಧಿಸಿದಂತೆ ಪುನರಾವರ್ತಿತ ವಿದ್ಯಾರ್ಥಿಗಳನ್ನು ದೃಷ್ಟಿಯಿಲ್ಲಿಟ್ಟುಕೊಂಡು ಯೋಜನೆಯೊಂದನ್ನು (ಪರಿಹಾರ) ರೂಪಿಸಲಾಗುವುದು. ಇದನ್ನು ಪ್ರತಿವಾದಿ ವಿದ್ಯಾರ್ಥಿಗಳು ಒಪ್ಪಿದರೆ ಸಮಸ್ಯೆ ಬಗೆಹರಿಸಬಹುದು ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ತಿಳಿಸಿದ್ದು, ಈ ಸಂಬಂಧ ಕಾಲಾವಕಾಶ ಪಡೆದುಕೊಂಡಿದೆ.

ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ರ‍್ಯಾಂಕ್ ಪಟ್ಟಿ ತಯಾರಿಸಲು ವಿದ್ಯಾರ್ಥಿಗಳು ಪಿಯುಸಿಯಲ್ಲಿ ಪಡೆದಿರುವ ಶೇ.50 ಅಂಕ ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಪಡೆದಿರುವ ಶೇ.50 ಅಂಕಗಳನ್ನು ಪರಿಗಣಿಸಿ ಹೊಸದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ರ‍್ಯಾಂಕ್ ಪಟ್ಟಿ ಪ್ರಕಟಿಸಬೇಕು ಎಂದು ಆದೇಶಿಸಿರುವ ಏಕಸದಸ್ಯ ಪೀಠದ ಆದೇಶವನ್ನು ಬದಿಗೆ ಸರಿಸಬೇಕು ಎಂದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ಪೀಠವು ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರು “ಪುನರಾವರ್ತಿತ ವಿದ್ಯಾರ್ಥಿಗಳನ್ನು ದೃಷ್ಟಿಯಿಲ್ಲಿಟ್ಟುಕೊಂಡು ಯೋಜನೆಯೊಂದನ್ನು ರೂಪಿಸಲಾಗುವುದು. ಅದು ಅವರಿಗೆ ಒಪ್ಪಿತವಾದರೆ ಸಮಸ್ಯೆ ಇತ್ಯರ್ಥಪಡಿಸಬಹುದು. ಇದಕ್ಕಾಗಿ ಕಾಲಾವಕಾಶ ನೀಡಬೇಕು” ಎಂದು ಕೋರಿದರು.

Also Read
ವೃತ್ತಿಪರ ಕೋರ್ಸ್‌ಗಳಿಗೆ ಹೊಸದಾಗಿ ರ‍್ಯಾಂಕ್ ಪಟ್ಟಿ: ಏಕಸದಸ್ಯ ಪೀಠದ ಆದೇಶದ ವಿರುದ್ಧ ಸರ್ಕಾರದ ಮೇಲ್ಮನವಿ

ಪ್ರತಿವಾದಿ ವಿದ್ಯಾರ್ಥಿಗಳನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎ ಎಸ್‌ ಪೊನ್ನಣ್ಣ ಅವರು “ಸರ್ಕಾರದ ಯೋಜನೆಯು ಪರಿಶೀಲಿಸಲಾಗುವುದು. ಇಲ್ಲವಾದರೆ ಅರ್ಹತೆಯ ಮೇಲೆ ವಾದ ಮಂಡಿಸಲಾಗುವುದು” ಎಂದರು.

ಉಭಯ ವಾದ ಆಲಿಸಿದ ಪೀಠವು ವಿಚಾರಣೆಯನ್ನು ಸೆಪ್ಟೆಂಬರ್‌ 22ಕ್ಕೆ ಮುಂದೂಡಿತು.

Kannada Bar & Bench
kannada.barandbench.com