[ರಿಪಬ್ಲಿಕ್‌ ಆಫ್‌ ಸಬ್‌ ರಿಜಿಸ್ಟ್ರಾರ್‌] ವ್ಯವಸ್ಥೆ ಸರಿಪಡಿಸಲು ಪ್ರಯತ್ನ: ಹೈಕೋರ್ಟ್‌ಗೆ ಸರ್ಕಾರದ ಭರವಸೆ

ಹುದ್ದೆ ಇಲ್ಲದ ಸ್ಥಳಕ್ಕೆ ವರ್ಗಾವಣೆಯಾಗಿರುವ ವಿಚಾರ ಗೊತ್ತಿದ್ದೂ, ವ್ಯವಸ್ಥೆಯಲ್ಲಿ ಕೈಚಳಕ ತೋರಿದ್ದಾರೆ. ಇವರು ತಮ್ಮದೇ ವ್ಯವಸ್ಥೆ ಸೃಷ್ಟಿಸಿಕೊಂಡಂತೆ ಭಾಸವಾಗುತ್ತಿದ್ದು, ಇದನ್ನು ʼರಿಪಬ್ಲಿಕ್‌ ಆಫ್‌ ಸಬ್‌ ರಿಜಿಸ್ಟ್ರಾರ್‌ʼ ಎಂದಿರುವ ಪೀಠ.
Justices G Narendar and C M Poonacha
Justices G Narendar and C M Poonacha

ಸಬ್‌ ರಿಜಿಸ್ಟ್ರಾರ್‌ ಹುದ್ದೆಗಳೇ ಇಲ್ಲದ ಕಡೆ ಕೆಲವು ಅಧಿಕಾರಿಗಳನ್ನು ನಿಯೋಜಿಸಿ, ಅವರು ವರ್ಷಗಟ್ಟಲೇ ವೇತನ ಪಡೆದಿರುವ ಪ್ರಕರಣ ಹಾಗೂ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿನ ಅವ್ಯವಸ್ಥೆ ಸರಿಪಡಿಸುವುದಕ್ಕೆ ಸಂಬಂಧಿಸಿದಂತೆ ವ್ಯವಸ್ಥೆಗೆ ಅಂಟಿರುವ ರೋಗವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಸಂಬಂಧಿತ ಸಚಿವರ ಜೊತೆ ಕಂದಾಯ ಇಲಾಖೆಯ ಕಾರ್ಯದರ್ಶಿ ಚರ್ಚಿಸಿ, ವ್ಯವಸ್ಥೆ ಸರಿಪಡಿಸಲು ಸರ್ವ ಪ್ರಯತ್ನ ಮಾಡಲಿದ್ದಾರೆ ಎಂದು ರಾಜ್ಯ ಸರ್ಕಾರವು ಈಚೆಗೆ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಮೂವರು ಆರೋಪಿತ ಸಬ್‌ ರಿಜಿಸ್ಟ್ರಾರ್‌ಗಳ ವಿರುದ್ಧ ಕಂದಾಯ ಇಲಾಖೆ ದಾಖಲಿಸಿರುವ ಮೂರು ಅರ್ಜಿಗಳು ಹಾಗೂ ಬೆಂಗಳೂರಿನ ವಿಜಯನಗರದ ನಿವಾಸಿ ಎಂ ಶ್ರೀಹರಿ ಮತ್ತು ಸಬ್‌ರಿಜಿಸ್ಟ್ರಾರ್‌ ವೈ ಎಚ್‌ ಸರೋಜ ಅವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್‌ ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಸರ್ಕಾರ ಬದಲಾಗಿದ್ದು, ನೂತನ ಕಾರ್ಯದರ್ಶಿ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ವ್ಯವಸ್ಥೆಯನ್ನು ಬಾಧಿಸುತ್ತಿರುವ ಸಮಸ್ಯೆಗಳನ್ನು ತೊಡೆದು ಹಾಕುವ ಸಂಬಂಧ ಸೂಕ್ತ ವಿಧಾನವನ್ನು ರೂಪಿಸಿ ನ್ಯಾಯಾಲಯದ ಮುಂದೆ ಇಡಲು ಎರಡು ವಾರಗಳು ಅಗತ್ಯ ಎಂದು ಅಡ್ವೊಕೇಟ್‌ ಜನರಲ್‌ ಕೋರಿದ್ದಾರೆ. ನ್ಯಾಯಾಲಯದ ಆದೇಶವನ್ನು ಸೂಕ್ತ ರೀತಿಯಲ್ಲಿ ಕಂದಾಯ ಇಲಾಖೆಯ ಕಾರ್ಯದರ್ಶಿ ಸ್ವೀಕರಿಸಿದ್ದು, ಯೋಜನೆಯ ಜಾರಿಗೆ ಸಂಬಂಧಿತ ಸಚಿವರ ಮುಂದೆ ಎಲ್ಲಾ ವಿಚಾರಗಳನ್ನು ಇಡಲಾಗುವುದು ಎಂದು ಅಡ್ವೊಕೇಟ್‌ ಜನರಲ್ಲಿ ತಿಳಿಸಿದ್ದಾರೆ” ಎಂದು‌ ನ್ಯಾಯಾಲಯವು ಜೂನ್‌ 21ರ ಆದೇಶದಲ್ಲಿ ದಾಖಲಿಸಿದೆ. ಈ ಹಿಂದೆ ಸಲ್ಲಿಸಲಾಗಿರುವ ವರದಿಯನ್ನು ನ್ಯಾಯಿಕ ರಿಜಿಸ್ಟ್ರಾರ್‌ ಅವರು ಪೀಠಕ್ಕೆ ಸಲ್ಲಿಸಬೇಕು ಎಂದೂ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಹುದ್ದೆಯೇ ಇಲ್ಲದ ಕಡೆಯಲ್ಲಿ ಕೆಲಸ ಮಾಡಿ, ಸಂಬಳ ಪಡೆದಿರುವ ಆರೋಪದ ಮೇಲೆ ಬೆಂಗಳೂರಿನ ಬಿಟಿಎಂ ಲೇಔಟ್‌ನ ಎಲ್‌ ಸುಮಲತಾ, ಕೆಂಗೇರಿ ಸಬ್‌ ರಿಜಿಸ್ಟ್ರಾರ್‌ ಕೆ ಪಿ ನಂಜೇಶ್‌, ವರ್ತೂರು ಸಬ್‌ ರಿಜಿಸ್ಟ್ರಾರ್‌ ಎ ಸುರೇಶ್‌ ವಿರುದ್ಧ ಕಂದಾಯ ಇಲಾಖೆ (ಮುದ್ರಾಂಕ ಮತ್ತು ನೋಂದಣಿ) ಮೂರು ಪ್ರತ್ಯೇಕ ದಾವೆ ಹೂಡಿದೆ. ಬೆಂಗಳೂರಿನ ವಿಜಯನಗರದ ನಿವಾಸಿ ಎಂ ಶ್ರೀಹರಿ ಹಾಗೂ ಸಬ್‌ರಿಜಿಸ್ಟ್ರಾರ್‌ ವೈ ಎಚ್‌ ಸರೋಜ ಪ್ರತ್ಯೇಕವಾಗಿ ಅರ್ಜಿ ದಾಖಲಿಸಿದ್ದಾರೆ.

ಸುಮಲತಾ, ನಂಜೇಶ್‌ ಮತ್ತು ಸುರೇಶ್‌ ಅವರು ತಮ್ಮನ್ನು ಸಬ್‌ ರಿಜಿಸ್ಟ್ರಾರ್‌ ಹುದ್ದೆಯಿಂದ ವರ್ಗಾವಣೆ ಮಾಡಿರುವ ಸರ್ಕಾರದ ಆದೇಶವನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯಲ್ಲಿ ಪ್ರಶ್ನಿಸಿ ತಡೆ ಪಡೆದುಕೊಂಡಿದ್ದಾರೆ. ತಮಗೆ ವರ್ಗಾವಣೆ ಮಾಡಿದರೂ ಹುದ್ದೆ ತೋರಿಸಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಹಿರಿಯ ಸಬ್‌ರಿಜಿಸ್ಟ್ರಾರ್‌ಗೆ ಮೀಸಲಾಗಿರುವ ಹುದ್ದೆಗಳಿಗೆ ಸಬ್‌ ರಿಜಿಸ್ಟ್ರಾರ್‌ ನೇಮಕವಾಗಿದ್ದಾರೆ. ಹಿರಿಯ ಅಧಿಕಾರ ಸ್ಥಾನಕ್ಕೆ ಕಿರಿಯ ಅಧಿಕಾರಿ ನೇಮಕವಾದರೆ ಅವರು ಸಹಿ ಮಾಡುವ ದಾಖಲೆಗೆ ಮಾನ್ಯತೆ ಇರುವುದಿಲ್ಲ ಎಂಬ ಬಗ್ಗೆಯೂ ಅರ್ಜಿದಾರರು ಆಕ್ಷೇಪಿಸಿದ್ದಾರೆ. ಸರ್ಕಾರಿ ಅಧಿಕಾರಿಯು ಉದ್ಯೋಗಕ್ಕೆ ಕಾಯುವಂತಿಲ್ಲ ಎಂದು ಸರ್ಕಾರದ ಸುತ್ತೋಲೆ ಇದೆ. ಇಲ್ಲವಾದಲ್ಲಿ ಯಾವ ಕಾರಣಕ್ಕಾಗಿ ಅವರಿಗೆ ಹುದ್ದೆ ನೀಡಿಲ್ಲ ಎಂಬುದನ್ನು ವಿವರಿಸಬೇಕು. ಒಂದೇ ಕಚೇರಿಯಲ್ಲಿ ಎರಡೆರಡು ಹುದ್ದೆ ಸೃಷ್ಟಿಸಲಾಗಿದೆ. ಇದಕ್ಕೆ ಅನುಮತಿ ಇಲ್ಲದಿದ್ದರೂ ಇದನ್ನು ಮಾಡಲಾಗಿದೆ ಎಂಬುದು ಅರ್ಜಿದಾರರ ಆಕ್ಷೇಪವಾಗಿದೆ.

ನ್ಯಾಯಾಲಯದ ಹಿಂದಿನ ಆದೇಶ ಪ್ರಮುಖ ಅಂಶಗಳು

  • ಸೃಷ್ಟಿಸದ ಹುದ್ದೆಗೆ ವರ್ಗಾವಣೆಯಾಗಿರುವುದಲ್ಲದೇ ಅಲ್ಲಿಂದ ವರ್ಗಾವಣೆ ಮಾಡಿರುವ ಸರ್ಕಾರದ ಆದೇಶವನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಮೆಟ್ಟಿಲೇರಿ 2022ರ ಜುಲೈ ಆದೇಶವನ್ನು ಕೆಲವು ಅಧಿಕಾರಿಗಳು ವಜಾ ಮಾಡಿಸಿದ್ದಾರೆ. ಈ ಸಂಬಂಧ ಮೂವರು ಸಬ್‌ ರಿಜಿಸ್ಟ್ರಾರ್‌ ವಿರುದ್ಧ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರ (ಐಜಿಆರ್‌) ಕಾನೂನು ಪ್ರಕ್ರಿಯೆ ಬಾಕಿ ಇರುವ ಕುರಿತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ತಿಳಿಸಲಾಗಿತ್ತಲ್ಲದೆ, ಸೂಕ್ತ ಕ್ರಮಕೈಗೊಂಡು ಆ ಸಂಬಂಧ ಅಫಿಡವಿಟ್‌ ಸಲ್ಲಿಸಲು ನ್ಯಾಯಾಲಯ ಆದೇಶಿಸಿತ್ತು.

  • ಆನಂತರದ ಆದೇಶದಲ್ಲಿ ಸರ್ಕಾರದ ಇಲಾಖೆಯಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯುವುದಕ್ಕೆ ನ್ಯಾಯಾಲಯ ಕಣ್ಮುಚ್ಚಿ ಕೂರಲಾಗದು. ಕಾನೂನುಬಾಹಿರ ನಡೆ ಅಥವಾ ಆದೇಶ ಅಧಿಕಾರದ ವಂಚನೆಯಲ್ಲದೇ ಅದು ದುಷ್ಕೃತ್ಯ. ಇದನ್ನು ನ್ಯಾಯಾಲಯದ ಗಮನಕ್ಕೆ ತಂದಾಗ ಕಾನೂನನ್ನು ಮರುಸ್ಥಾಪಿಸುವುದಲ್ಲದೇ ಅಧಿಕಾರದ ದುರುಪಯೋಗವನ್ನು ನೇರವಾಗಿ ದಾಖಲಿಸಬೇಕು ಎಂದು ನ್ಯಾಯಾಲಯ ಹೇಳಿತ್ತು.

  • 2023ರ ಫೆಬ್ರವರಿ 9ರ ಆದೇಶದಲ್ಲಿ ನ್ಯಾಯಾಲಯವು “ಪ್ರತಿವಾದಿಗಳ ಪರ ವಕೀಲರನ್ನು ನಿಮ್ಮ ಕಕ್ಷಿದಾರರು ಅಸ್ತಿತ್ವದಲ್ಲಿಲ್ಲದ ಹುದ್ದೆಗೆ ಹೇಗೆ ವರದಿ ಮಾಡಿಕೊಂಡರು ಎಂದು ಪ್ರಶ್ನಿಸಿದ್ದೆವು. ಇದಕ್ಕೆ ಅವರು ವರ್ಗಾವಣೆ ಅಧಿಸೂಚನೆ ಆಧರಿಸಿ ಅಲ್ಲಿಗೆ ವರದಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಮುಂದುವರಿದು, ವೇತನಕ್ಕೆ ಸಂಬಂಧಿಸಿದಂತೆಯೂ ಅದೇ ವಕೀಲರನ್ನು ಪ್ರಶ್ನಿಸಿದ್ದು, ಅದಕ್ಕೆ ಅವರಿಂದ ಯಾವುದೇ ಉತ್ತರ ಪಡೆಯಲು ಸಾಧ್ಯವಾಗಿಲ್ಲ. ಹುದ್ದೆ ಇಲ್ಲದ ಸ್ಥಳಗೆ ವರ್ಗಾವಣೆಯಾಗಿರುವ ವಿಚಾರ ಗೊತ್ತಿದ್ದೂ, ಆ ಸಬ್‌ ರಿಜಿಸ್ಟ್ರಾರ್‌ಗಳು ವ್ಯವಸ್ಥೆಯಲ್ಲಿ ಕೈಚಳಕ ತೋರಿದ್ದಾರೆ. ಈ ಸಬ್‌ರಿಜಿಸ್ಟ್ರಾರ್‌ಗಳು ತಮ್ಮದೇ ವ್ಯವಸ್ಥೆಯನ್ನು ಸೃಷ್ಟಿಸಿಕೊಂಡಿರುವಂತೆ ಭಾಸವಾಗುತ್ತಿದ್ದು, ಇದನ್ನು ʼರಿಪಬ್ಲಿಕ್‌ ಆಫ್‌ ಸಬ್‌ ರಿಜಿಸ್ಟ್ರಾರ್‌ʼ ಎನ್ನಬಹುದು ಎಂದು ಆದೇಶದಲ್ಲಿ ದಾಖಲಿಸಿದೆ.

  • 2023ರ ಜನವರಿ 16ರ ಆದೇಶದಲ್ಲಿ 18 ಮಂದಿ ಸಬ್‌ ರಿಜಿಸ್ಟ್ರಾರ್‌ಗಳು ಹಿರಿಯ ಸಬ್‌ ರಿಜಿಸ್ಟ್ರಾರ್‌ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ನ್ಯಾಯಾಲಯವು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಮನಕ್ಕೆ ತಂದಿತ್ತು. ಈ ಸಂಬಂಧ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿರುವ ನ್ಯಾಯಾಲಯ.

Related Stories

No stories found.
Kannada Bar & Bench
kannada.barandbench.com