ಸುಪ್ರೀಂ ಕೋರ್ಟ್‌ನಿಂದ ನೂತನ ಸಾಂವಿಧಾನಿಕ ಪೀಠದ ರಚನೆ; ನಾಲ್ಕು ಪ್ರಕರಣಗಳನ್ನು ಆಲಿಸಲಿರುವ ಸಿಜೆಐ ನೇತೃತ್ವದ ಪೀಠ

ಮಧ್ಯಸ್ಥಿಕೆದಾರರ ನೇಮಕಾತಿ, ಆಯ್ಕೆ ಪ್ರಕ್ರಿಯೆ ಪ್ರಾರಂಭವಾದ ನಂತರ ಅರ್ಹತಾ ನಿಯಮಗಳ ಬದಲಾವಣೆ ಹಾಗೂ ಸಾರಿಗೆ ವಾಹನ ಓಡಿಸಲು ಇರುವ ಅರ್ಹತೆ ಕುರಿತಾದ ಅರ್ಜಿಗಳನ್ನು ನ್ಯಾಯಾಲಯ ಆಲಿಸಲಿದೆ.
Justices Pankaj Mithal, Hrishikesh Roy, CJI Chandrachud, PS Narasimha, Manoj Misra
Justices Pankaj Mithal, Hrishikesh Roy, CJI Chandrachud, PS Narasimha, Manoj Misra
Published on

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರ ನೇತೃತ್ವದಲ್ಲಿ ನೂತನ ಸಾಂವಿಧಾನಿಕ ಪೀಠ ರಚಿಸಲಾಗಿದ್ದು, ಪೀಠವು ಜುಲೈ 12ರಿಂದ ನಾಲ್ಕು ಪ್ರಕರಣಗಳ ವಿಚಾರಣೆ ನಡೆಸಲಿದೆ.

ನೂತನ ಸಾಂವಿಧಾನಿಕ ಪೀಠದಲ್ಲಿ ಸಿಜೆಐ ಅಲ್ಲದೆ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಪಿ ಎಸ್ ನರಸಿಂಹ, ಪಂಕಜ್ ಮಿತ್ತಲ್‌ ಹಾಗೂ ಮನೋಜ್ ಮಿಶ್ರಾ ಅವರನ್ನು ಪೀಠ ಒಳಗೊಂಡಿರಲಿದೆ. ಪೀಠ ಈ ಕೆಳಗಿನ ಪ್ರಕರಣಗಳನ್ನು ಆಲಿಸಲಿದೆ:

1. ತೇಜ್ ಪ್ರಕಾಶ್ ಪಾಠಕ್ ಮತ್ತಿತರರು ಹಾಗೂ ರಾಜಸ್ಥಾನ ಹೈಕೋರ್ಟ್ ಇನ್ನಿತರರ ನಡುವಣ ಪ್ರಕರಣ

ನೇಮಕಾತಿ ಆಯ್ಕೆ ಪ್ರಕ್ರಿಯೆಯು ಪ್ರಾರಂಭವಾದ ನಂತರ ಸರ್ಕಾರದ ಅಂಗಗಳು ಅರ್ಹತಾ ನಿಯಮ ಬದಲಿಸಬಹುದೇ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ವಿಚಾರಣೆ ನಡೆಸಲಿದೆ.

ಪ್ರಕರಣವನ್ನು ಈ ಹಿಂದೆ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ನೇತೃತ್ವದ ಸಾಂವಿಧಾನಿಕ ಪೀಠದ ಮುಂದೆ ಪಟ್ಟಿ ಮಾಡಲಾಗಿತ್ತು, ಆದರೆ ಕಳೆದ ವರ್ಷ ಸೆಪ್ಟೆಂಬರ್ 23ರಂದು ನ್ಯಾ. ಬ್ಯಾನರ್ಜಿ ಅವರು ನಿವೃತ್ತರಾದ ನಂತರ ಪೀಠವನ್ನು ವಿಸರ್ಜಿಸಲಾಯಿತು. ನಂತರ ಅದನ್ನು ಸಿಜೆಐ ನೇತೃತ್ವದ ಪೀಠದ ಮುಂದೆ ಪಟ್ಟಿ ಮಾಡಲಾಗಿತ್ತಾದರೂ ವಿಚಾರಣೆ ನಡೆದಿರಲಿಲ್ಲ. ಹೊಸದಾಗಿ ರಚನೆಯಾದ ಪೀಠದಲ್ಲಿ ಈಗ ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರ ಸ್ಥಾನದಲ್ಲಿ ನ್ಯಾಯಮೂರ್ತಿ ಮಿತ್ತಲ್‌ ಇದ್ದಾರೆ.

2. ಸೆಂಟ್ರಲ್ ಆರ್ಗನೈಸೇಶನ್ ಫಾರ್ ರೈಲ್ವೇ ಎಲೆಕ್ಟ್ರಿಫಿಕೇಶನ್ ವಿರುದ್ಧ ಇಸಿಐ ಎಸ್‌ಪಿಐಸಿ ಎಸ್‌ಎಂ ಎಂಸಿಎಂಎಲ್‌ (ಜೆವಿ) ಜಂಟಿ ಕಂಪೆನಿ ನಡುವಣ ಪ್ರಕರಣ

ಪ್ರಕರಣದಲ್ಲಿ ವಿಚಾರಣೆ ನಡೆಯಲಿರುವ ಕಾನೂನು ಪ್ರಶ್ನೆಗಳು ಇಂತಿವೆ:  ಮಧ್ಯಸ್ಥಿಕೆ ಕಾಯಿದೆಯ ಸೆಕ್ಷನ್ 11ರ ಅಡಿಯ ಅರ್ಜಿಯಲ್ಲಿ ನ್ಯಾಯಾಲಯಗಳು ಮಧ್ಯಸ್ಥಗಾರರನ್ನು ನೇಮಿಸುವ ಒಪ್ಪಿತ ಕಾರ್ಯವಿಧಾನದಿಂದ ವಿಮುಖಗೊಳ್ಳಬಹುದೇ?

ನಿವೃತ್ತ ನೌಕರರು ತಮ್ಮ ಹಿಂದಿನ ಉದ್ಯೋಗದಾತರನ್ನು ಒಳಗೊಂಡ ಪ್ರಕರಣಗಳಲ್ಲಿ ಮಧ್ಯಸ್ಥಗಾರರಾಗಿ ಕಾರ್ಯನಿರ್ವಹಿಸಲು ಅನರ್ಹರಾಗಿದ್ದಾರೆಯೇ?

Also Read
ಭಾರೀ ಸರಕು ಸಾಗಣೆ ವಾಹನ ಚಾಲನಾ ಪರವಾನಗಿ ಹೊಂದಿರುವವರು ಪ್ರಯಾಣಿಕ ವಾಹನ ಓಡಿಸಲು ಅರ್ಹರು: ಕಾಶ್ಮೀರ ಹೈಕೋರ್ಟ್

3.   ಬಜಾಜ್ ಅಲಯನ್ಸ್ ಜನರಲ್ ಇನ್ಶುರೆನ್ಸ್ ಕಂಪೆನಿ ಲಿಮಿಟೆಡ್ ಮತ್ತು ರಂಭಾ ದೇವಿ ಇನ್ನಿತರರ ನಡುವಣ ಪ್ರಕರಣ

ಇಲ್ಲಿ ಸಾಂವಿಧಾನಿಕ ಪೀಠ ಆಲಿಸಲಿರುವ ಪ್ರಶ್ನೆ ಈ ರೀತಿ ಇದೆ: ʼಲಘು ಮೋಟಾರು ವಾಹನʼ ಕ್ಕೆ ಸಂಬಂಧಿಸಿದಂತೆ ಚಾಲನಾ ಪರವಾನಗಿ ಪಡೆದಿರುವ ವ್ಯಕ್ತಿಯು, ಆ ಪರವಾನಗಿಯ ಬಲದ ಮೇಲೆ, 7500 ಕೆಜಿ ಮೀರದ ಭಾರವುಳ್ಳ 'ಲಘು ಮೋಟಾರು ವಾಹನ ವರ್ಗದ ಸಾರಿಗೆ ವಾಹನ' ಚಲಾಯಿಸಲು ಅರ್ಹರಾಗಬಹುದೇ?".

ಮೋಟಾರು ವಾಹನ ಕಾಯಿದೆಯ ವಿವಿಧ ನಿಯಮಾವಳಿಗಳ ಪ್ರಕಾರ ಎರಡು ವರ್ಗಗಳ ಅಡಿಯಲ್ಲಿ ಪರವಾನಗಿ ಪಡೆಯಲು ಚಾಲಕರ ಅರ್ಹತೆಯ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ವ್ಯತ್ಯಾಸಗಳಿರುವುದರಿಂದ ಪ್ರಕರಣ ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠದ ಕದ ತಟ್ಟಿದೆ.  

4. ಜೆಎಸ್ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಮತ್ತು ದಕ್ಷಿಣ ರೈಲ್ವೆ ಇನ್ನಿತರರ ನಡುವಣ ಪ್ರಕರಣ

ಪ್ರಕರಣದಲ್ಲಿ ಉದ್ಭವಿಸಿರುವ ಸವಾಲು ಇಂತಿದೆ: ಒಬ್ಬ ವ್ಯಕ್ತಿಯು ಖುದ್ದು ಮಧ್ಯಸ್ಥಗಾರನಾಗಲು ಅನರ್ಹನಾಗಿರುವಾಗ ತಾನೇ ಮತ್ತೊಬ್ಬ ಮಧ್ಯಸ್ಥಗಾರನನ್ನು ನೇಮಿಸಬಹುದೇ?

[ನೋಟಿಸ್‌ ಪ್ರತಿಯನ್ನು ಇಲ್ಲಿ ಓದಿ]

Attachment
PDF
New_Constitution_Bench_notice_June_26.pdf
Preview
Kannada Bar & Bench
kannada.barandbench.com