ಎಐ ಮಾದರಿಗಳ ಮೂಲಕ ವಸ್ತುವಿಷಯ ನಕಲು: ಮೈಕ್ರೋಸಾಫ್ಟ್, ಓಪನ್ ಎಐ ವಿರುದ್ಧ ಮೊಕದ್ದಮೆ ಹೂಡಿದ ನ್ಯೂಯಾರ್ಕ್ ಟೈಮ್ಸ್

ಮೈಕ್ರೋಸಾಫ್ಟ್‌ ಬಿಂಗ್ ಸರ್ಚ್‌ ಬಳಸಿದಾಗ ನ್ಯೂಯಾರ್ಕ್ ಟೈಮ್ಸ್ ಲೇಖನಗಳ ಪದಶಃ ಆಯ್ದ ಭಾಗಗಳು ಮತ್ತು ವಿವರವಾದ ಸಾರಾಂಶಗಳನ್ನು ಒಳಗೊಂಡಿರುವ ಪ್ರತಿಕ್ರಿಯೆಗಳನ್ನು ಸೃಜಿಸುತ್ತದೆ ಎಂದು ಮೊಕದ್ದಮೆ ಆರೋಪಿಸಿದೆ.
ದಿ ನ್ಯೂಯಾರ್ಕ್ ಟೈಮ್ಸ್, ಮೈಕ್ರೋಸಾಫ್ಟ್, ಓಪನ್ ಎಐ
ದಿ ನ್ಯೂಯಾರ್ಕ್ ಟೈಮ್ಸ್, ಮೈಕ್ರೋಸಾಫ್ಟ್, ಓಪನ್ ಎಐ
Published on

ಮೈಕ್ರೋಸಾಫ್ಟ್ ಮತ್ತು ಓಪನ್ಎಐ ಕಂಪನಿಗಳು ತಮ್ಮ ಜೆನೆರೆಟೀವ್‌ ಕೃತಕ ಬುದ್ಧಿಮತ್ತೆ (ಜೆಎನ್ಎಐ) ಸಾಧನಗಳನ್ನು ಅಭಿವೃದ್ಧಿಪಡಿಸಲು ಮತ್ತು ತರಬೇತಿ ನೀಡಲು ಕೃತಿಸ್ವಾಮ್ಯ ಹೊಂದಿರುವ ತನ್ನ ವಸ್ತುವಿಷಯವನ್ನು (ಕಂಟೆಂಟ್‌) ಕಾನೂನುಬಾಹಿರವಾಗಿ ಬಳಸುತ್ತಿವೆ ಎಂದು ಆರೋಪಿಸಿ ನ್ಯೂಯಾರ್ಕ್ ಟೈಮ್ಸ್ ಮೊಕದ್ದಮೆ ಹೂಡಿದೆ.

ಈಗ ಕೋಪೈಲಟ್ ಎಂದು ಮರುನಾಮಕರಣ ಮಾಡಲಾಗಿರುವ ಮೈಕ್ರೋಸಾಫ್ಟ್‌ನ ಬಿಂಗ್ ಚಾಟ್ ಮತ್ತು ಓಪನ್‌ ಎಐನ ಚಾಟ್‌ ಜಿಪಿಟಿಯು ನ್ಯೂಯಾರ್ಕ್‌ ಟೈಮ್ಸ್‌ನ ಲಕ್ಷಾಂತರ ಕೃತಿಸ್ವಾಮ್ಯ ಹೊಂದಿರುವ ಸುದ್ದಿ ಲೇಖನ, ಅಂಕಣಗಳು, ತನಿಖಾವರದಿ, ವಿಮರ್ಶೆ ಹಾಗೂ ಇತರೆ ಬರಹಗಳನ್ನು ಬಳಸಿಕೊಂಡಿವೆ ಎಂದು ನ್ಯೂಯಾರ್ಕ್‌ ಜಿಲ್ಲಾ ನ್ಯಾಯಾಲಯದಲ್ಲಿ ಕಾನೂನು ಸಂಸ್ಥೆಗಳಾದ ಸುಸ್ಮಾನ್ ಗಾಡ್ಫ್ರೇ ಎಲ್‌ಎಲ್‌ಪಿ ಮತ್ತು ರೋಥ್ವೆಲ್, ಫಿಗ್, ಅರ್ನ್ಸ್ಟ್‌ & ಮ್ಯಾನ್ಬೆಕ್, ಪಿಸಿ ಮೂಲಕ ಮೊಕದ್ದಮೆ ಹೂಡಲಾಗಿದೆ.

ಎನ್‌ವೈಟಿಯ ಪ್ರಮುಖ ಆಕ್ಷೇಪಗಳು

  • ಪ್ರತಿವಾದಿಗಳ ಜೆಎನ್ಎಐ ಸಾಧನಗಳು ತನ್ನ (ನ್ಯೂಯಾರ್ಕ್‌ ಟೈಮ್ಸ್‌) ವಸ್ತುವಿಷಯವನ್ನು ನಿಕಟವಾಗಿ ನಕಲು ಮಾಡಿರುವುದಲ್ಲದೆ, ಸುಳ್ಳು ಮಾಹಿತಿಯನ್ನು ತನ್ನ ಹೆಸರಿನಲ್ಲಿ ನೀಡಿವೆ.

  • ಇದಲ್ಲದೆ, ಮೈಕ್ರೋಸಾಫ್ಟ್‌ನ ಬಿಂಗ್ ಸರ್ಚ್‌ ಸೂಚ್ಯಂಕದ ಬಳಕೆಯು ನ್ಯೂಯಾರ್ಕ್ ಟೈಮ್ಸ್ ಲೇಖನಗಳ ಪದಶಃ ಆಯ್ದ ಭಾಗಗಳು ಮತ್ತು ವಿವರವಾದ ಸಾರಾಂಶಗಳನ್ನು ಒಳಗೊಂಡಿರುವ ಪ್ರತಿಕ್ರಿಯೆಗಳನ್ನು ಸೃಷ್ಟಿಸಿ, ಓದುಗರೊಂದಿಗಿನ ತನ್ನ ಸಂಬಂಧವನ್ನು ದುರ್ಬಲಗೊಳಿಸಿದೆ.

  • ಈ ಕ್ರಮ ಚಂದಾದಾರಿಕೆ, ಪರವಾನಗಿ, ಜಾಹೀರಾತು ಹಾಗೂ ಅಂಗಸಂಸ್ಥೆಯ ಆದಾಯದ ಮೇಲೆ ಪರಿಣಾಮ ಬೀರುತ್ತದೆ.

  • ಕಳೆದ ವರ್ಷ ಮೈಕ್ರೋಸಾಫ್ಟ್‌ನ ಮಾರುಕಟ್ಟೆ ಬಂಡವಾಳ ಒಂದು ಟ್ರಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ. ಭಾಷಾ ಕಲಿಕೆ ಮಾದರಿಗಳ (ಎಲ್ಎಲ್ಎಂ) ನಿಯೋಜನೆ ಇದಕ್ಕೆ ಭಾಗಶಃ ಕಾರಣವಾಗಿದ್ದು ಓಪನ್ಎಐನ ಚಾಟ್‌ಜಿಪಿಟಿ 90 ಬಿಲಿಯನ್ ಡಾಲರ್‌ ತಲುಪಲು ಕಾರಣವಾಗಿದೆ.

  • ಸಮ್ಮತ ಒಪ್ಪಂದಕ್ಕೆ ಬರಲು ತಿಂಗಳುಗಟ್ಟಲೆ ನಡೆಸಿದ ಮಾತುಕತೆ ವಿಫಲವಾಗಿದೆ.

  • ಇಷ್ಟಾದರೂ ಪ್ರತಿವಾದಿಗಳು ತಮ್ಮ ನಡೆಯನ್ನು ʼನ್ಯಾಯಯುತ ಬಳಕೆʼ ಎಂದು ತಿಳಿದು ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸುತ್ತಾರೆ. ಇದು ಸರಿಯಲ್ಲ.

  • ತನಗೆ ಪರ್ಯಾಯವಾಗಿ ಉತ್ಪನ್ನಗಳನ್ನು ಸೃಜಿಸುವುದಕ್ಕಾಗಿ ಹಣ ಪಾವತಿಸದೆ ತನ್ನ ವಸ್ತು ವಿಷಯವನ್ನು ಬಳಸುವ ಮತ್ತು ತನ್ನ ಓದುಗರನ್ನು ಕಸಿದುಕೊಳ್ಳುವ ಬಗ್ಗೆ ಪರಿವರ್ತಕವಾಗುವಂತಹದ್ದೇನೂ ಇಲ್ಲ.

  • ಪ್ರತಿವಾದಿಗಳ ಜೆನ್‌ಎಐ ಮಾದರಿಗಳ ಫಲಿತಾಂಶಗಳು ತಮಗೆ ತರಬೇತಿ ನೀಡಲು ಬಳಸುವ ಮಾಹಿತಿಯೊಂದಿಗೆ ಸ್ಪರ್ಧಿಸಿ ನಿಕಟವಾಗಿ ಅನುಕರಿಸುತ್ತೆ. ಆ ಉದ್ದೇಶಕ್ಕಾಗಿ ಟೈಮ್ಸ್ ಕೃತಿಗಳನ್ನು ನಕಲು ಮಾಡುವುದು ನ್ಯಾಯೋಚಿತ ಬಳಕೆಯಲ್ಲ.

ನ್ಯೂಯಾರ್ಕ್ ಟೈಮ್ಸ್‌ನ ಅಮೂಲ್ಯ ಕೃತಿಗಳನ್ನು ಕಾನೂನುಬಾಹಿರವಾಗಿ ನಕಲು ಮಾಡಿ ಬಳಸಿದ್ದಕ್ಕಾಗಿ ಪ್ರತಿವಾದಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಮತ್ತು ಗಣನೀಯ ನಷ್ಟ ಭರಿಸಿಕೊಡಬೇಕು ಎಂದು ಪರಿಹಾರದ ಪ್ರಮಾಣವನ್ನು ನಿರ್ದಿಷ್ಟಪಡಿಸದೆ ಕೋರಿದೆ.

Kannada Bar & Bench
kannada.barandbench.com