ಕರ್ನಾಟಕ ಹಿಜಾಬ್ ವಿವಾದದ ಕುರಿತು ಕೋಮುವಾದಿ ಕಾರ್ಯಕ್ರಮ: ನ್ಯೂಸ್ 18 ವಾಹಿನಿಗೆ ₹50 ಸಾವಿರ ದಂಡ

ಕರ್ನಾಟಕ ಹೈಕೋರ್ಟ್ ತೀರ್ಪಿನ ನಂತರ ವಿವಾದದ ಬಗ್ಗೆ ಚರ್ಚೆ ನಡೆಸಲು ವಾಹಿನಿ ಅರ್ಹವಾಗಿದ್ದರೂ ಸಮಸ್ಯೆ ಇರುವುದು ಕಾರ್ಯಕ್ರಮ ನಿರೂಪಣೆ ಮತ್ತು ಅದು ಉಂಟುಮಾಡಿದ ಪಕ್ಷಪಾತದಲ್ಲಿ ಎಂದ ಪೀಠ.
Aman Chopra, News18
Aman Chopra, News18
Published on

ಕರ್ನಾಟಕ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ ಸಂವಾದ ಕಾರ್ಯಕ್ರಮ ನಡೆಸುವಾಗ ನಿಷ್ಪಕ್ಷಪಾತ, ತಟಸ್ಥ , ನ್ಯಾಯಸಮ್ಮತ ಮತ್ತು ಉತ್ತಮ ಅಭಿರುಚಿಗೆ ಸಂಬಂಧಿಸಿದ ತತ್ವಗಳನ್ನು ಪಾಲಿಸದೇ ಇದ್ದುದಕ್ಕಾಗಿ ಸುದ್ದಿ ವಾಹಿನಿ ನ್ಯೂಸ್‌ 18ಗೆ ಭಾರತೀಯ ಸುದ್ದಿ ಪ್ರಸರಣ ಮತ್ತು ಡಿಜಿಟಲ್‌ ಮಾನದಂಡ ಪ್ರಾಧಿಕಾರ (ಎನ್‌ಬಿಡಿಎಸ್‌ಎ) ₹ 50,000 ದಂಡ ವಿಧಿಸಿದೆ.  

ಕರ್ನಾಟಕ ಹೈಕೋರ್ಟ್ ತೀರ್ಪಿನ ನಂತರ ವಿವಾದದ ಬಗ್ಗೆ ಚರ್ಚೆ ನಡೆಸಲು ಸುದ್ದಿವಾಹಿನಿಗೆ ಅರ್ಹತೆ ಇದ್ದರೂ ಸಮಸ್ಯೆ ಇರುವುದು ಕಾರ್ಯಕ್ರಮ ನಿರೂಪಣೆ ಮತ್ತು ಅದು ಉಂಟುಮಾಡಿದ ಪಕ್ಷಪಾತದಲ್ಲಿ ಎಂದು ನ್ಯಾ. ಎ ಕೆ ಸಿಕ್ರಿ ಅವರು ಇತ್ತೀಚೆಗೆ ತೀರ್ಪು ನೀಡಿದ್ದಾರೆ.

"ಶಾಲೆಗಳಲ್ಲಿ ಹಿಜಾಬ್ ಧರಿಸುವುದನ್ನು ಅನುಮತಿಸಬೇಕೇ ಅಥವಾ ಬೇಡವೇ ಎಂಬ ಚರ್ಚೆಯ ಸಂದರ್ಭದಲ್ಲಿ, ಅದನ್ನು ಕೋಮು ವಿಷಯವಾಗಿ ಮಾಡಿ ಕೆರಳಿಸುವ ಅಗತ್ಯ ಇರಲಿಲ್ಲ ಎಂಬುದನ್ನು ಎನ್‌ಬಿಡಿಎಸ್‌ಎ ಗಮನಿಸಿದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಏಪ್ರಿಲ್ 6ರಂದು ನ್ಯೂಸ್ 18 ಹಿಂದಿ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತ ಟೆಕ್ ಎಥಿಕ್ಸ್ ಮತ್ತು ಸೇಫ್ಟಿ ಸಂಸ್ಥೆಯ ಇಂದ್ರಜೀತ್ ಘೋರ್ಪಡೆ ಅವರು ಸಲ್ಲಿಸಿದ್ದ ದೂರಿನ ಮೇರೆಗೆ ಈ ಆದೇಶ ನೀಡಲಾಗಿದೆ. ನಿರೂಪಕ ಅಮನ್ ಚೋಪ್ರಾ ಅವರು ಮುಸ್ಲಿಂ ವಿದ್ಯಾರ್ಥಿನಿಯರನ್ನು "ಹಿಜಾಬಿ ಗ್ಯಾಂಗ್", "ಹಿಜಾಬ್ವಾಲಿ ಗಜ್ವಾ" ಎಂದು ಉಲ್ಲೇಖಿಸಿ ಅವರು ಗಲಭೆಗೆ ಕಾರಣರು ಎಂಬಂತೆ ಬಿಂಬಿಸಿದ್ದರು ಎಂದು ಅರ್ಜಿಯಲ್ಲಿ ದೂರಲಾಗಿತ್ತು.

ʼಅಲ್ ಖೈದಾ ಮುಖ್ಯಸ್ಥ ಜವಾಹಿರಿ ಮುಖವಾದರೆ ವಿದ್ಯಾರ್ಥಿನಿಯರು ಆತನ ಮುಖವಾಡ ಎಂದು ಚೋಪ್ರಾ ಸಂವಾದ ಕಾರ್ಯಕ್ರಮದಲ್ಲಿ ತಿಳಿಸಿದ್ದರು. ಬ್ರಾಡ್‌ಕಾಸ್ಟರ್ ವರದಿ  ಒಳಗೊಂಡಿರುವ ನಿರ್ದಿಷ್ಟ ಮಾರ್ಗಸೂಚಿಗಳನ್ನು, ಅದರಲ್ಲಿಯೂ ಮೂಲಭೂತ ಮಾನದಂಡಗಳನ್ನು ಕಾರ್ಯಕ್ರಮ ನಿರೂಪಣೆಯಲ್ಲಿ ಉಲ್ಲಂಘಿಸಲಾಗಿದೆʼ ಎಂದು ಅರ್ಜಿದಾರರ ಪರ ವಾದಿಸಲಾಗಿತ್ತು. ಆದರೆ ತಾನು ನಡೆಸಿದ ಕಾರ್ಯಕ್ರಮದಲ್ಲಿ  ಹಿಜಾಬ್ ಪ್ರಕರಣದ ಬಗ್ಗೆ ವ್ಯಾಪಕವಾಗಿ ಲಭ್ಯವಿರುವ ಮತ್ತು ವರದಿ ಮಾಡಿದ ಸಂಗತಿಗಳನ್ನೇ ಪ್ರಸಾರ ಮಾಡಿದ್ದಾಗಿ ನ್ಯೂಸ್ 18 ಹೇಳಿಕೊಂಡಿತ್ತು.

ಆದೇಶದ ಪ್ರಮುಖಾಂಶಗಳು

  • “ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದರ ಪರವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡವರನ್ನು ‘ಜವಾಹಿರಿ ಗ್ಯಾಂಗ್ ಸದಸ್ಯ’, ‘ಜವಾಹಿರಿಯ ರಾಯಭಾರಿ’, ‘ಜವಾಹಿರಿ ನಿಮ್ಮ ದೇವರಾಗಿದ್ದು, ನೀವು ಅವರ ಅಭಿಮಾನಿ’ ಎಂದು ಜವಾಹಿರಿ ಜೊತೆ ನಂಟು ಕಲ್ಪಿಸಿದ ನಿರೂಪಕನ ನಡೆಯನ್ನು ಎನ್‌ಬಿಡಿಎಸ್‌ಎ ಬಲವಾಗಿ ಖಂಡಿಸುತ್ತದೆ.

  • ಚೋಪ್ರಾ ಅವರು ಮಾರ್ಗಸೂಚಿಗಳು ಮತ್ತು ನೈತಿಕ ಮಾನದಂಡಗಳನ್ನು ಉಲ್ಲಂಘಿಸಿದ್ದಲ್ಲದೆ, ಹದ್ದುಮೀರಿ ಕಾರ್ಯಕ್ರಮ ಏರ್ಪಡಿಸುವುದನ್ನು ತಡೆಯುವತ್ತ ನಿರೂಪಕರು ಚಿಂತಿಸಬೇಕು ಎಂದು ನಿಲೇಶ್ ನವಲಖಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ ನೀಡಿದ್ದ  ತೀರ್ಪನ್ನುಪಾಲಿಸಲು ಸುದ್ದಿವಾಹಿನಿ ವಿಫಲವಾಗಿದೆ.

  • ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂವಾದಕರು ಮೇರೆ ಮೀರುವುದನ್ನು ತಡೆಯಲು ನಿರೂಪಕರು ವಿಫಲವಾಗಿದ್ದು ದೇಶದಲ್ಲಿ ಕೋಮುಸೌಹಾರ್ದದ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ ಅಭಿಪ್ರಾಯ ವ್ಯಕ್ತಪಡಿಸಲು ಅದು ವೇದಿಕೆ ಒದಗಿಸಿದೆ.

  • ಎನ್‌ಬಿಡಿಎಸ್‌ಎ ಅಂತಹ ಕಾರ್ಯಕ್ರಮಗಳನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಸಾಕಷ್ಟು ಮಾರ್ಗದರ್ಶನ ನೀಡಿದ್ದು ಭವಿಷ್ಯದಲ್ಲಿ ಉಲ್ಲಂಘನೆಗಳು ಪುನರಾವರ್ತನೆಯಾದರೆ, ಪ್ರಾಧಿಕಾರದ ಮುಂದೆ ಚೋಪ್ರಾ ಹಾಜರಿರುವಂತೆ ನ್ಯೂಸ್ 18ಗೆ ನಿರ್ದೇಶಿಸಬೇಕಾಗಬಹುದು.

  • ಕಾರ್ಯಕ್ರಮದ ವೀಡಿಯೊವನ್ನು ಏಳು ದಿನಗಳೊಳಗೆ ತನ್ನೆಲ್ಲಾ ವೇದಿಕೆಗಳಿಂದ ವಾಹಿನಿ ತೆಗೆದುಹಾಕಬೇಕು.

ಈ ಅವಲೋಕನಗಳೊಂದಿಗೆ ಮತ್ತೆ ಮತ್ತೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಸುದ್ದಿ ವಾಹಿನಿಗೆ ದಂಡ ವಿಧಿಸಿದ ಎನ್‌ಬಿಡಿಎಸ್‌ಎ ಅಂತಹ ಕಾರ್ಯಕ್ರಮ ಏರ್ಪಡಿಸದಂತೆ ಎಚ್ಚರಿಕೆ ನೀಡಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Order.pdf
Preview
Kannada Bar & Bench
kannada.barandbench.com