ಚೀನಾ ಪರ ಪ್ರಚಾರಾಂದೋಲನ ನಡೆಸುವುದಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿ ಬಂಧಿತರಾಗಿರುವ ನ್ಯೂಸ್‌ಕ್ಲಿಕ್ ಸುದ್ದಿತಾಣದ ಸಂಸ್ಥಾಪಕ ಹಾಗೂ ಮುಖ್ಯ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರು ವಕೀಲರನ್ನು ಭೇಟಿ ಮಾಡಲು ದೆಹಲಿ ನ್ಯಾಯಾಲಯ ಅನುಮತಿ ನೀಡಿದೆ.
ಆದರೆ ಪುರ್ಕಾಯಸ್ಥ ಸೇರಿದಂತೆ ಇಬ್ಬರು ಆರೋಪಿಗಳಿಗೆ ಎಫ್‌ಐಆರ್ ಪ್ರತಿ ಪೂರೈಸುವ ಕುರಿತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ದೀಪ್ ಕೌರ್ ಅವರು ಇನ್ನೂ ಯಾವುದೇ ಆದೇಶ ಹೊರಡಿಸಿಲ್ಲ.
ಚೀನಾ ಪರ ಪ್ರಚಾರಕ್ಕಾಗಿ ನ್ಯೂಸ್ ಕ್ಲಿಕ್ ಹಣ ಪಡೆಯುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದ ಪೊಲೀಸರು ಪುರ್ಕಾಯಸ್ಥ ಮತ್ತು ನ್ಯೂಸ್‌ಕ್ಲಿಕ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ನಿನ್ನೆ (ಮಂಗಳವಾರ) ಬಂಧಿಸಿದ್ದರು. ಇಂದು ಬೆಳಿಗ್ಗೆ ದೆಹಲಿ ನ್ಯಾಯಾಲಯ ಇಬ್ಬರೂ ಆರೋಪಿಗಳನ್ನು ಏಳು ದಿನಗಳ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿತ್ತು.
ನಂತರ ಎಫ್‌ಐಆರ್ ಪ್ರತಿ ನೀಡುವಂತೆ ಕೋರಿ ಅವರಿಬ್ಬರೂ ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಪುರ್ಕಾಯಸ್ಥ ಪರ ವಾದ ಮಂಡಿಸಿದ ವಕೀಲ ಅರ್ಷದೀಪ್ ಸಿಂಗ್ ಅವರು ಎಫ್‌ಐಆರ್ ಪ್ರತಿಯನ್ನು ಪಡೆಯುವ ಹಕ್ಕಿದೆ ಎಂದು ವಾದಿಸಿದರು.
ಆಗ ನ್ಯಾಯಾಲಯ ಈ ಕುರಿತು ನಾಳೆ ನಿರ್ಧರಿಸುವುದಾಗಿ ತಿಳಿಸಿತು. ಈ ಸಂದರ್ಭದಲ್ಲಿ ವಕೀಲರ ಭೇಟಿಗೆ ಅನುಮತಿ ನೀಡಿದ ನ್ಯಾಯಾಲಯ ಇಬ್ಬರಿಗೂ ರಿಮಾಂಡ್ ಆದೇಶದ ಪ್ರತಿ ಒದಗಿಸುವಂತೆ ಆದೇಶಿಸಿತು.