ಚೀನಾದ ಹಣ ಪಡೆದ ಆರೋಪ: ಎಫ್‌ಐಆರ್‌, ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಕದತಟ್ಟಿದ ಪುರ್ಕಾಯಸ್ಥ, ಚಕ್ರವರ್ತಿ

ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಅವರ ನೇತೃತ್ವದ ಪೀಠದ ಮುಂದೆ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಪಟ್ಟಿ ಮಾಡುವಂತೆ ಕೋರಿದರು.
newsclick, prabir purkayastha
newsclick, prabir purkayastha

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ದಾಖಲಿಸಲಾಗಿರುವ ಎಫ್‌ಐಆರ್‌ ರದ್ದುಕೋರಿ ಆನ್‌ಲೈನ್ ಮಾಧ್ಯಮವಾದ ನ್ಯೂಸ್‌ಕ್ಲಿಕ್‌ನ ಸಂಸ್ಥಾಪಕ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಚೀನಾ ಪರ ಪ್ರಚಾರಕ್ಕಾಗಿ ನ್ಯೂಸ್‌ ಕ್ಲಿಕ್‌ ಹಣ ಪಡೆಯುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ ಹಿನ್ನೆಲೆಯಲ್ಲಿ ದಾಖಲಿಸಲಾಗಿರುವ ಎಫ್‌ಐಆರ್‌ ರದ್ದು ಕೋರಿರುವ ಪ್ರಕರಣವನ್ನು ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಅವರ ನೇತೃತ್ವದ ಪೀಠದ ಮುಂದೆ ತುರ್ತಾಗಿ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಕೋರಿದರು.

“ನಾವು ನ್ಯೂಸ್‌ಕ್ಲಿಕ್‌ ಪ್ರಕರಣವನ್ನು ಉಲ್ಲೇಖಿಸುತ್ತಿದ್ದೇವೆ. ಅರ್ಜಿದಾರರನ್ನು ಅಕ್ರಮವಾಗಿ ಬಂಧಿಸಲಾಗಿದೆ” ಎಂದು ಸಿಬಲ್‌ ಹೇಳಿದರು. ಅರ್ಜಿಯನ್ನು ಇಂದು ವಿಚಾರಣೆಗೆ ನಿಗದಿಪಡಿಸಲಾಗಿದೆ ಎಂದು ಪೀಠ ಹೇಳಿತು.

Also Read
ಚೀನಾದ ಹಣ ಪಡೆದ ಆರೋಪ: ನ್ಯೂಸ್ ಕ್ಲಿಕ್ ಸಂಪಾದಕ ಮತ್ತು ಅಧಿಕಾರಿಯನ್ನು 7 ದಿನ ಪೊಲೀಸ್ ವಶಕ್ಕೆ ನೀಡಿದ ದೆಹಲಿ ನ್ಯಾಯಾಲಯ

ಚೀನಾ ಸರ್ಕಾರ ನಡೆಸುವ ಮಾಧ್ಯಮ ಸಂಸ್ಥೆಗಳ ಜೊತೆ ಗುರುತಿಸಿಕೊಂಡಿರುವ ಅಮೆರಿಕದ ಉದ್ಯಮಿ ನೆವಿಲ್ಲೆ ರಾಯ್‌ ಸಿಂಘಮ್‌ ಅವರು ನ್ಯೂಸ್‌ ಕ್ಲಿಕ್‌ ಜಾಲತಾಣ ವೇದಿಕೆಗೆ ಹಣ ಹೂಡುತ್ತಿದ್ದಾರೆ ಎಂದು ಕಳೆದ ಆಗಸ್ಟ್‌ನಲ್ಲಿ ನ್ಯೂಯಾರ್ಕ್‌ ಟೈಮ್ಸ್‌ ತನಿಖಾ ವರದಿ ಪ್ರಕಟಿಸಿತ್ತು. ಇದನ್ನು ಆಧರಿಸಿ ಪ್ರಬೀರ್ ಪುರ್ಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಅವರನ್ನು ಅಕ್ಟೋಬರ್‌ 3ರಂದು ಬಂಧಿಸಲಾಗಿದೆ. ಅವರನ್ನು ಬುಧವಾರ ಏಳು ದಿನಗಳವರೆಗೆ ವಿಚಾರಣೆಗಾಗಿ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

Kannada Bar & Bench
kannada.barandbench.com