ನ್ಯೂಸ್‌ಕ್ಲಿಕ್‌ ಪ್ರಕರಣ: ಪ್ರಬೀರ್, ಅಮಿತ್ ಅವರನ್ನು 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದ ದೆಹಲಿ ನ್ಯಾಯಾಲಯ

ಪೊಲೀಸ್ ಕಸ್ಟಡಿ ಅಗತ್ಯವಿಲ್ಲ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಬಹುದು ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ ಹಿನ್ನೆಲೆಯಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ದೀಪ್ ಕೌರ್ ಈ ಆದೇಶ ನೀಡಿದರು.
Newsclick, Prabir Purkayastha
Newsclick, Prabir Purkayastha

ಸುದ್ದಿತಾಣ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಮತ್ತು ಅದರ ಮಾನವ ಸಂಪನ್ಮೂಲ (ಎಚ್‌ಆರ್) ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ (ಯುಎಪಿಎ) ದೆಹಲಿ ಪೊಲೀಸರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಆ ಇಬ್ಬರನ್ನೂ ಹತ್ತು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಮಂಗಳವಾರ ಆದೇಶಿಸಿದೆ.

ಇಬ್ಬರೂ ಆರೋಪಿಗಳನ್ನು ಮತ್ತೆ ಪೊಲೀಸರ ವಶಕ್ಕೆ ಪಡೆಯುವ ಅಗತ್ಯವಿಲ್ಲ. ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಬಹುದು ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ ಹಿನ್ನೆಲೆಯಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ದೀಪ್ ಕೌರ್ ಈ ಆದೇಶ ನೀಡಿದರು.

ಎಫ್‌ಐಆರ್‌ನಲ್ಲಿರುವ ಆರೋಪಗಳು ಯುಎಪಿಎ ಅಡಿಯಲ್ಲಿ ಅಪರಾಧವಲ್ಲ ಎಂದು ಆರೋಪಿಸಿ ಇಬ್ಬರು ಆರೋಪಿಗಳ ಪರ ವಕೀಲರು ತೀವ್ರ ತೀವ್ರ ವಿರೋಧ ವ್ಯಕ್ತಪಡಿಸಿದರೂ ಈ ಆದೇಶ ಜಾರಿಗೆ ತರಲಾಗಿದೆ.

ಪುರ್ಕಾಯಸ್ಥ ಅವರ ವಿರುದ್ಧ ಬಾಂಬ್‌, ಡೈನಾಮೈಟ್‌ ಅಥವಾ ಇನ್ನಾವುದೇ ಸ್ಫೋಟಕ ವಸ್ತು ಬಳಸಿದ ಆರೋಪ ಇಲ್ಲ. ಕ್ರಿಮಿನಲ್‌ ಬಲ ಪ್ರಯೋಗ ಬಳಸಿದ ಅಥವಾ ಜನರ ಸಾವಿಗೆ ಕಾರಣರಾದ ಆರೋಪವಿಲ್ಲ. ಯಾವುದೇ ಅಪಹರಣ ಕೃತ್ಯ ಎಸಗಿಲ್ಲ. ಪತ್ರಿಕೋದ್ಯಮವನ್ನು ವೃತ್ತಿಯಾಗಿ ಸ್ವೀಕರಿಸಿ ವರದಿ ಮಾಡುವುದು ಹೇಗೆ ಅಪರಾಧವಾಗುತ್ತದೆ. ಕಾಯಿದೆಯಡಿ ಆರೋಪಿಸಲು ಸೆಕ್ಷನ್‌ 16, 17 ಮತ್ತು 18 ಕ್ಕೆ ಸಂಬಂಧಿಸಿದಂತೆ ಭಯತ್ಪಾದನಾ ಕೃತ್ಯ ನಡೆದಿರಬೇಕು. ಬರೀ ಎಫ್‌ಐಆರ್‌ ಓದಿದರೂ ಸಾಕು ಅವರ ವಿರುದ್ಧ ಆರೋಪಗಳಿಲ್ಲ ಎಂದು ತಿಳಿದುಬರುತ್ತದೆ ಎಂಬುದಾಗಿ ಎಂದು ಪುರ್ಕಾಯಸ್ಥ ಪರ ವಕೀಲ ಅರ್ಷದೀಪ್ ಖುರಾನಾ ಹೇಳಿದರು.

ಅಧಿಕಾರದಲ್ಲಿರುವ ಸರ್ಕಾರವನ್ನು ಪತ್ರಕರ್ತರು ಟೀಕಿಸಿದರೆ ಅಂತಹ ಪತ್ರಕರ್ತರನ್ನು ಶಿಕ್ಷಿಸುವಂತಿಲ್ಲ ಎಂದು ಅವರು ಒತ್ತಿ ಹೇಳಿದರು. ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ಅವರು ಈ ವಾದಕ್ಕೆ ವಿರೋಧ ವ್ಯಕ್ತಪಡಿಸಿದರು.

Kannada Bar & Bench
kannada.barandbench.com