ಖಾಸಗಿ ವಿದೇಶಿ ಪ್ರಯಾಣ ಕೈಗೊಳ್ಳುವ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳು ರಾಜಕೀಯ ಅನುಮತಿ ಪಡೆಯಬೇಕು ಎಂಬ ವಿದೇಶಾಂಗ ಸಚಿವಾಲಯದ ಆದೇಶವನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ. ವೀಸಾ ನೀಡಿಕೆಗೆ ಕೋರಿಕೆ ಸಲ್ಲಿಸಿದಾಗಲೇ ನ್ಯಾಯಾಧೀಶರ ಪ್ರಯಾಣದ ವಿವರಗಳು ತಿಳಿದಿರುವುದರಿಂದ ಆ ಬಗ್ಗೆ ವಿಶೇಷವಾಗಿ ತಿಳಿಸುವ ಅಗತ್ಯ ಈ ಉನ್ನತ ಹುದ್ದೆಯಲ್ಲಿರುವವರಿಗೆ ಬರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ರಾಜೀವ್ ಶಕ್ದೇರ್ ಹಾಗೂ ಜಸ್ಮೀತ್ ಸಿಂಗ್ ಅವರಿದ್ದ ಪೀಠ ತಿಳಿಸಿತು. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಅಮನ್ ವಚರ್ ಎಂಬುವವರು ಅರ್ಜಿ ಸಲ್ಲಿಸಿದ್ದರು.
ಇಂತಹ ಆದೇಶವು ನ್ಯಾಯಮೂರ್ತಿಗಳ ಖಾಸಗಿತನವನ್ನು ಉಲ್ಲಂಘಿಸುವುದು ಮಾತ್ರವೇ ಅಲ್ಲದೆ, ಅವರು ಹುದ್ದೆಯಲ್ಲಿರುವ ಉನ್ನತ ಕಚೇರಿಯ ಘನತೆ, ಗೌರವಕ್ಕೆ ಕುಂದುಂಟು ಮಾಡುತ್ತದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.
ರಾಜಕೀಯ ಅನುಮತಿ ಎಂದರೇನು?
ಭೇಟಿಯ ಉದ್ದೇಶ ಮತ್ತಿತರ ಅಂಶಗಳನ್ನು ಪರಿಗಣಿಸಿ ಅಧಿಕಾರಿಯ ಭೇಟಿಗೆ ರಾಜಕೀಯ ಆಯಾಮದಿಂದ ಯಾವುದೇ ಆಕ್ಷೇಪಣೆ ಇಲ್ಲ ಎಂಬುದನ್ನು ತಿಳಿಸುವುದೇ ರಾಜಕೀಯ ಅನುಮತಿ. ಇದಲ್ಲದೇ ಹೀಗೆ ಪ್ರಯಾಣ ಕೈಗೊಳ್ಳುವವರು ಬೇರೆ ಅನುಮತಿಗಳನ್ನು ಕೂಡ ಪಡೆಯಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.