ನಾವು ವಾಕ್ಯ ಪೂರ್ಣಗೊಳಿಸುವ ಮೊದಲೇ ಬ್ರೇಕಿಂಗ್ ನ್ಯೂಸ್ ಪ್ರಸಾರ: ಅಸ್ಪಷ್ಟ ವರದಿಗಾರಿಕೆ ಕುರಿತು ಸಿಜೆಐ ರಮಣ ಬೇಸರ

ಆದೇಶ, ವಿಚಾರಣಾ ಪ್ರಕ್ರಿಯೆ, ತೀರ್ಪು, ಮೌಖಿಕ ಅವಲೋಕನ ಏನು ಎಂಬುದು ವರದಿ ಮಾಡುವ ಬಹುತೇಕರಿಗೆ ತಿಳಿದಿರುವುದಿಲ್ಲ. ಇದು ಅತ್ಯಂತ ದುರದೃಷ್ಟಕರ ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು.
CJI NV Ramana
CJI NV Ramana

ತೀರ್ಪುಗಳು ಮತ್ತು ನ್ಯಾಯಾಲಯ ಪ್ರಕ್ರಿಯೆಗಳ ನಿಖರ ವರದಿಗಾರಿಕೆಯ ಅಗತ್ಯವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಇತ್ತೀಚೆಗೆ ಒತ್ತಿ ಹೇಳಿದರು.

ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಈಸ್ಟರ್ನ್ ಬುಕ್ ಕಂಪನಿಯ ಸುಪ್ರೀಂ ಕೋರ್ಟ್ ಕೇಸಸ್ (ಎಸ್‌ಸಿಸಿ) ಪ್ರಿ ’69 ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದ ಜನರು ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು ಮತ್ತು ಕಾನೂನು ಹೇಗೆ ನಿರ್ಧರಿಸಲ್ಪಡುತ್ತದೆ, ಹೇಗೆ ಅದನ್ನು ಅನ್ವಯಿಸಲಾಗುತ್ತದೆ ಎನ್ನುವುದನ್ನು ಅವರು ಅರಿಯಲು ಸಾಧ್ಯವಾಗಬೇಕು ಎಂದು ಸಿಜೆಐ ಒತ್ತಿ ಹೇಳಿದರು.

ಈಗ ನಮ್ಮಲ್ಲಿ 24x7 ಚಾನೆಲ್‌ಗಳಿವೆ. ವಾಕ್ಯವನ್ನು ಪೂರ್ಣಗೊಳಿಸುವ ಮುನ್ನವೇ ಬ್ರೇಕಿಂಗ್ ನ್ಯೂಸ್‌ಗಳನ್ನು ನೋಡುತ್ತಿದ್ದೇವೆ. ನಿಖರವಾದ ವರದಿ ಮಾಡುವ ಅಗತ್ಯವಿದೆ. ಇಲ್ಲದಿದ್ದರೆ ಜನರು ಗೊಂದಲಕ್ಕೊಳಗಾಗುತ್ತಾರೆ," ಎಂದು ಅವರು ಹೇಳಿದರು.

"ಬಹುತೇಕ ವರದಿಗಳಲ್ಲಿ ಆದೇಶ, ಪ್ರಕ್ರಿಯೆ, ತೀರ್ಪು, ಮೌಖಿಕ ಅವಲೋಕನಗಳ ನಡುವಿನ ವ್ಯತ್ಯಾಸ ಕಂಡುಬರುವುದಿಲ್ಲ. ಇದು ತುಂಬಾ ದುರದೃಷ್ಟಕರ. ನ್ಯಾಯಾಧೀಶರು ನಕಾರಾತ್ಮಕ ಪ್ರಶ್ನೆ ಕೇಳಿದರೆ, ತಕ್ಷಣವೇ ಅದನ್ನು ವರದಿ ಮಾಡಲಾಗುತ್ತದೆ" ಎಂದು ಅವರು ಬೇಸರಿಸಿದರು.

Also Read
ಮಾಧ್ಯಮ ವಿಚಾರಣೆಯಿಂದ ನ್ಯಾಯಾಧೀಶರ ಕೆಲಸ ಕಷ್ಟಕರವಾಗುತ್ತಿದೆ: ಸಿಜೆಐ ರಮಣ ಕಳವಳ

ಈ ನಿಟ್ಟಿನಲ್ಲಿ ವಾಸ್ತವಾಂಶಗಳು, ಇತ್ಯರ್ಥಗೊಂಡ ಕಾನೂನು ಮತ್ತು ಅದನ್ನು ಹೇಗೆ ಅನ್ವಯಿಸಲಾಗಿದೆ ಎಂಬುದನ್ನು ದೊಡ್ಡಮಟ್ಟದಲ್ಲಿ ಸಾರ್ವಜನಿಕರು ಅರಿಯಬೇಕು ಎಂದರು.

ಆದಾಯ ಕಡಿಮೆ ಇರುವ ಗ್ರಾಮೀಣ ಪ್ರದೇಶದ ತಳಮಟ್ಟದ ವಕೀಲರುಗಳಿಗೆ ಕಾನೂನು ಪತ್ರಿಕೆಗಳು ಸುಲಭವಾಗಿ ದೊರೆಯುವಂತಾಗಬೇಕು ಎಂದು ಅವರು ಹೇಳಿದರು. ಅಲ್ಲದೆ ಕಾನೂನು ಅರಿವು ಹೆಚ್ಚು ಮಂದಿಗೆ ತಲುಪುವಂತಾಗಲು, ಸಾಂವಿಧಾನಿಕ ಹಕ್ಕುಗಳ ಬಗ್ಗೆ ತಿಳಿಯುವಂತಾಗಲು ಪ್ರಾದೇಶಿಕ ಭಾಷೆಗಳಿಗೆ ಪ್ರಮುಖ ತೀರ್ಪುಗಳನ್ನು ಭಾಷಾಂತರಿಸಬೇಕು ಎಂದು ಕರೆ ನೀಡಿದರು. ಜೊತೆಗೆ ನ್ಯಾಯಾಧೀಶರು ತೀರ್ಪುಗಳು ಸರಳವಾಗಿ ಬರೆಯಬೇಕು. ಇದರಿಂದ ನ್ಯಾಯಾಕಾಂಕ್ಷಿಗಳಿಗೆ ಅಂತಿಮ ಫಲಿತಾಂಶ ಏನೆಂದು ತಿಳಿಯುತ್ತದೆ ಎಂದರು.

ಬಿಡುಗಡೆಯಾದ ಕೃತಿಯ ಕುರಿತು ಮಾತನಾಡಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ ವಿ ನಾಗರತ್ನ ಸ್ವಾತಂತ್ರ್ಯದ ನಂತರದ ದಶಕದಿಂದ ಸುಪ್ರೀಂ ಕೋರ್ಟ್‌ನ ಆದೇಶವನ್ನು ವಿವರಿಸುವ ಕೃತಿ ಐತಿಹಾಸಿಕ ಮತ್ತು ಶೈಕ್ಷಣಿಕ ದೃಷ್ಟಿಕೋನದಿಂದ ಹೆಚ್ಚು ಪ್ರಸ್ತುತವಾಗಿದೆ ಎಂದರು.

Related Stories

No stories found.
Kannada Bar & Bench
kannada.barandbench.com