
ದತ್ತಿ ಸಂಸ್ಥೆಗಳು ವಿದೇಶಿ ದೇಣಿಗೆ ಪಡೆಯುತ್ತವೆ ಎಂಬ ಕಾರಣಕ್ಕಾಗಿ ಸದಾ ಅವುಗಳನ್ನು ಅನುಮಾನದಿಂದ ನೋಡಬಾರದು ಎಂದು ಮದ್ರಾಸ್ ಹೈಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರದ ಕಿವಿ ಹಿಂಡಿದೆ [ ಎಲೆನ್ ಶರ್ಮಾ ಮೆಮೋರಿಯಲ್ ಟ್ರಸ್ಟ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ ].
ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆಯಡಿ (ಎಫ್‌ಸಿಆರ್‌ಎ) ಎಲೆನ್ ಶರ್ಮಾ ಸ್ಮಾರಕ ಟ್ರಸ್ಟ್‌ಗೆ ಅಧಿಕಾರಿಗಳು ನೋಂದಣಿ ನವೀಕರಣ ಮಾಡಿಕೊಡುವಂತೆ ಆದೇಶಿಸಿದ ನ್ಯಾಯಾಲಯ ಈ ವಿಚಾರ ತಿಳಿಸಿತು.
ನೋಂದಣಿ ನವೀಕರಣ ಕೋರಿದ್ದ ಅರ್ಜಿಯನ್ನು ಅಧಿಕಾರಿಗಳು ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರೇತರ ಸಂಸ್ಥೆಯಾದ ಎಲೆನ್ ಶರ್ಮಾ ಸ್ಮಾರಕ ಟ್ರಸ್ಟ್‌ಗೆ ಪರಿಹಾರ ನೀಡುವ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ನೀಡಿದೆ.
ಎಲೆನ್ ಶರ್ಮಾ ಸ್ಮಾರಕ ಟ್ರಸ್ಟ್ ಅಥವಾ ಅದರ ಸಹೋದರ ಸಂಸ್ಥೆಗಳಿಂದ ನಿಧಿ ದುರುಪಯೋಗದ ಯಾವುದೇ ಗಂಭೀರ ಆರೋಪಗಳಿಲ್ಲ ಎಂದ ನ್ಯಾಯಾಲಯ ಪ್ರಕರಣದಲ್ಲಿ, ವಿದೇಶಿ ದೇಣಿಗೆಗಳನ್ನು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ಅಥವಾ ವೈಯಕ್ತಿಕ ಲಾಭಕ್ಕಾಗಿ ಅಥವಾ ಅನಪೇಕ್ಷಿತ ಉದ್ದೇಶಗಳಿಗಾಗಿ ಇಲ್ಲವೇ ಬೇರೆ ಯಾವುದೇ ಉದ್ದೇಶಕ್ಕಾಗಿ ದುರುಪಯೋಗಪಡಿಸಿಕೊಂಡಿಲ್ಲ ಎಂದು ಹೇಳಿತು.
ವಿದೇಶಿ ಕೊಡುಗೆಯ ಗಂಭೀರ ದುರುಪಯೋಗ ಇಲ್ಲದ ಪ್ರಕರಣಗಳನ್ನು ಸರ್ಕಾರ ಮುಕ್ತ ಮನಸ್ಸಿನಿಂದ ನಿಭಾಯಿಸಬೇಕು ಎಂದು ಅದು ಇದೇ ವೇಳೆ ಬುದ್ಧಿವಾದ ಹೇಳಿತು. ಅಂತೆಯೇ ಆದೇಶದ ಪ್ರತಿ ಸ್ವೀಕರಿಸಿದ ನಾಲ್ಕು ವಾರಗಳಲ್ಲಿ ಕಾಯಿದೆಯಡಿ ನೋಂದಣಿ ನವೀಕರಿಸಲು ಅರ್ಜಿದಾರ ಟ್ರಸ್ಟ್‌ಗೆ ಅನುಮತಿ ನೀಡುವಂತೆ ಪ್ರತಿವಾದಿ ಅಧಿಕಾರಿಗಳಿಗೆ ಆದೇಶಿಸಿತು.