ಅಸಮರ್ಪಕ ತ್ಯಾಜ್ಯ ನಿರ್ವಹಣೆ: ಉತ್ತರ ಪ್ರದೇಶ ಸರ್ಕಾರಕ್ಕೆ ₹120 ಕೋಟಿ ಪರಿಹಾರ ಪಾವತಿಸಲು ಎನ್‌ಜಿಟಿ ಸೂಚನೆ

ಗೋರಖ್‌ಪುರದಲ್ಲಿ ಅಂದಾಜು 100 ಎಂಎಲ್‌ಡಿಯಷ್ಟು ಕೊಳಚೆ ನೀರು ಉತ್ಪಾದನೆಯಾಗುತ್ತದೆ, ಇದರಲ್ಲಿ ಶುದ್ಧೀಕರಿಸಲ್ಪಡುವ ನೀರಿನ ಪ್ರಮಾಣ 45 ಎಂಎಲ್‌ಡಿ ಮೀರುವುದಿಲ್ಲ ಎಂದು ಆದೇಶದಲ್ಲಿ ದಾಖಲಿಸಿದ ಪೀಠ.
NGT and Uttar Pradesh
NGT and Uttar Pradesh

ಗೋರಖ್‌ಪುರ್‌ ಜಿಲ್ಲಾ ವ್ಯಾಪ್ತಿಯಲ್ಲಿ ಕೊಳಚೆ ನೀರನ್ನು ಶುದ್ಧೀಕರಿಸದೆ ನದಿಗಳಿಗೆ ಹರಿಸುತ್ತಿರುವ, ಘನತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವ ಕಾರಣಕ್ಕಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ ₹120 ಕೋಟಿ ಪರಿಸರ ಪರಿಹಾರ ಪಾವತಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಇತ್ತೀಚೆಗೆ ನಿರ್ದೇಶಿಸಿದೆ.

ಗೋರಖ್‌ಪುರ ಜಿಲ್ಲಾ ವ್ಯಾಪ್ತಿಯಲ್ಲಿನ ಜಲಮೂಲಗಳು ಮತ್ತು ನದಿಗಳಿಗೆ ನಿರಂತರವಾಗಿ ಕೊಳಚೆ ನೀರನ್ನು ಹರಿಸುತ್ತಿರುವ ಪ್ರಕರಣದ ವಿಚಾರಣೆಯನ್ನು ಮಂಗಳವಾರ ನಡೆಸಿದ  ನ್ಯಾ. ಆದರ್ಶ್ ಕುಮಾರ್ ಗೋಯೆಲ್ನ್ಯಾ. ಸುಧೀರ್ ಅಗರ್ವಾಲ್ ತಜ್ಞ ಸದಸ್ಯರಾದ ಪ್ರೊ. ಸೆಂಥಿಲ್‌ ವೇಲ್‌ ಮತ್ತು ಅಫ್ರೋಜ್‌ ಅಹಮದ್‌ ಅವರನ್ನೊಳಗೊಂಡ ಪೀಠವು ಪರಿಹಾರ ಹಣವನ್ನು ಪಾವತಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿತು.

ಗೋರಖ್‌ಪುರದಲ್ಲಿ ಅಂದಾಜು 100 ಎಂಎಲ್‌ಡಿಯಷ್ಟು (ಮಿಲಿಯನ್‌ ಲೀಟರ್‌ ಪ್ರತಿದಿನ) ಕೊಳಚೆ ನೀರು ಉತ್ಪಾದನೆಯಾಗುತ್ತದೆ, ಇದರಲ್ಲಿ ಶುದ್ಧೀಕರಿಸಲ್ಪಡುವ ನೀರಿನ ಪ್ರಮಾಣ 45 ಎಂಎಲ್‌ಡಿ ಮೀರುವುದಿಲ್ಲ ಎಂದು ಪೀಠವು ಆದೇಶದಲ್ಲಿ ದಾಖಲಿಸಿತು. ಹಾಗಾಗಿ, ರಾಜ್ಯ ಸರ್ಕಾರವನ್ನು ದಿನವೊಂದಕ್ಕೆ 55 ಲಕ್ಷ ಲೀಟರ್‌ ಅಶುದ್ಧ ನೀರಿನ ಅಸಮರ್ಪಕ ನಿರ್ವಹಣೆಗೆ ಹೊಣೆ ಮಾಡಬೇಕಾಗುತ್ತದೆ ಎಂದು ಹೇಳಿತು.

ಈ ಹಿನ್ನೆಲೆಯಲ್ಲಿ 'ಮಾಲಿನ್ಯ ಮಾಡುವವರೇ ದಂಡ ಕಟ್ಟುತ್ತಾರೆ' ಎನ್ನುವ ತತ್ವದ ಅಡಿ ದಿನವೊಂದಕ್ಕೆ ಒಂದು ಮಿಲಿಯನ್‌ ಲೀಟರ್‌ (ಎಂಎಲ್‌ಡಿ) ಕೊಳಚೆ ನೀರಿನ ಪ್ರಮಾಣಕ್ಕೆ ₹2 ಕೋಟಿ ಪರಿಹಾರದಂತೆ ದಂಡ ವಿಧಿಸಿತು. ಘನತ್ಯಾಜ್ಯ ನಿರ್ವಹಣೆಯ ಅಸಮರ್ಥತೆಗೆ ₹10 ಕೋಟಿ ಪರಿಹಾರವನ್ನು ನೀಡಲು ಸೂಚಿಸಿತು.

Kannada Bar & Bench
kannada.barandbench.com