ಕೊಳಚೆ ನೀರು ಸಂಸ್ಕರಣಾ ಘಟಕದ ನಿಯಮಾವಳಿ ಉಲ್ಲಂಘನೆಗಾಗಿ ₹ 6 ಲಕ್ಷ ಪರಿಹಾರ ನೀಡುವಂತೆ ಇ- ವಾಣಿಜ್ಯ ಕ್ಷೇತ್ರದ ದೈತ್ಯ ಕಂಪೆನಿ ಅಮೆಜಾನ್‌ಗೆ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶಿಸಿದೆ.
ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ತಜ್ಞ ಸದಸ್ಯ ಡಾ.ಎ.ಸೆಂಥಿಲ್ ವೇಲ್ ಅವರು ಉಲ್ಲಂಘನೆಯ ದಿನಗಳ ಸಂಖ್ಯೆಯನ್ನು ಮರುಪರಿಶೀಲಿಸಿದ ನಂತರ ಪರಿಹಾರದ ಮೊತ್ತವನ್ನು ಸುಮಾರು ₹13 ಲಕ್ಷದಿಂದ ₹6 ಲಕ್ಷಕ್ಕೆ ಇಳಿಸಿದರು.
ಎಸ್‌ಟಿಪಿ ಮಾನದಂಡಗಳ ಉಲ್ಲಂಘನೆಗಾಗಿ ₹13,12,500 ಪರಿಸರ ಪರಿಹಾರ ನೀಡುವಂತೆ ಫೆಬ್ರವರಿ 22, 2024ರಂದು, ಹರಿಯಾಣ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಮೆಜಾನ್‌ಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅಮೆಜಾನ್ ಎನ್‌ಜಿಟಿ ಮೊರೆ ಹೋಗಿತ್ತು.
ತಾನು ಸೂಕ್ತ ರೀತಿಯಲ್ಲಿ ನೀರು ಸಂಸ್ಕರಣಾ ಘಟಕವನ್ನು ನಿರ್ವಹಿಸುತ್ತಿದ್ದರೂ ನಿಯಮಾವಳಿ ಪ್ರಕಾರ ಮಾಲಿನ್ಯ ನಿಯಂತ್ರಣ ಮಂಡಳಿ ನೀರಿನ ಮಾದರಿ ಸಂಗ್ರಹಿಸಿಲ್ಲ. ಮೂರನೇ ವ್ಯಕ್ತಿಗಳಿಂದ ತಪಾಸಣೆ ನಡೆಸಿದಾಗ ಸಂಸ್ಕರಿಸಿದ ನೀರಿನಲ್ಲಿ ಮಾಲಿನ್ಯದ ಪ್ರಮಾಣ ಎಲ್ಲೆ ಮೀರಿಲ್ಲ ಎಂದು ಕಂಡುಬಂದಿದೆ. ಆರಂಭದಲ್ಲಿ 32 ದಿನಗಳ ಕಾಲ ನಿಯಮಾವಳಿ ಉಲ್ಲಂಘಿಸಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ನಂತರ ಅದನ್ನು ತಪ್ಪಾಗಿ 70 ದಿನಗಳಿಗೆ ಹೆಚ್ಚಿಸಲಾಗಿದೆ ಎಂಬುದಾಗಿ ಅಮೆಜಾನ್ ವಾದಿಸಿತ್ತು.
ಆದರೆ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ವಹಣೆ ಚಟುವಟಿಕೆಯ ಬಗ್ಗೆ ಅಮೆಜಾನ್ ಯಾವುದೇ ಮಾಹಿತಿ ನೀಡಿಲ್ಲ. ಅಮೆಜಾನ್‌ನ ಈ ವಾದ ನಂತರದ ಆಲೋಚನೆಯಾಗಿದೆ. ತಾನು ನಿಯಮ ಪಾಲಿಸದೇ ಇರುವುದನ್ನು ಆರಂಭದಲ್ಲಿ ಅಮೆಜಾನ್ ಒಪ್ಪಿಕೊಂಡಿದೆ. 70 ದಿನಗಳ ನಂತರ ಎರಡನೇ ಮಾದರಿಯನ್ನು ತೆಗೆದುಕೊಳ್ಳಲಾಗಿದೆ ಎಂಬ ಆಧಾರದ ಮೇಲೆ ಉಲ್ಲಂಘನೆಯ ದಿನಗಳ ಸಂಖ್ಯೆಯನ್ನು 70 ಎಂದು ಪರಿಗಣಿಸಲಾಗುತ್ತಿದೆ ಎಂದಿತು.
ಆದರೆ ಪರಿಸರ ನಿಯಂತ್ರಣ ಮಂಡಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಅಮೆಜಾನ್ ಪರೀಕ್ಷಾ ವರದಿಗಳನ್ನು ಪ್ರಶ್ನಿಸಲಿಲ್ಲ. ಮಾದರಿಯನ್ನು ತೆಗೆದುಕೊಳ್ಳುವಾಗ ಎಸ್‌ಟಿಪಿ ಘಟಕವನ್ನು ನಿರ್ವಹಿಸಲಾಗುತ್ತಿತ್ತು ಎಂಬ ಅಮೆಜಾನ್ ಹೇಳಿಕೆ ಬೆಂಬಲಿಸುವಂತಹ ಯಾವುದೇ ವಿಶ್ವಸನೀಯ ಪುರಾವೆಗಳಿಲ್ಲ. ಅಲ್ಲದೆ ಅಮೆಜಾನ್ ಸಲ್ಲಿಸಿದ ಪರೀಕ್ಷಾ ವರದಿಗಳು ಎಚ್‌ಎಸ್‌ಪಿಸಿಬಿ ನಡೆಸಿದ ವರದಿಗಳಿಗಿಂತ ಹಿಂದಿನ ದಿನಾಂಕದ್ದಾಗಿವೆ. ಅಂತೆಯೇ ಪರಿಸರ ನಿಯಂತ್ರಣ ಮಂಡಳಿಯ ವರದಿಗಳು ನಿರ್ಣಾಯಕವಾಗಿದ್ದು ಅದು ವಿಧಿಸಿರುವ ಪರಿಸರ ಪರಿಹಾರ ಸೂಕ್ತವಾಗಿಯೇ ಇದೆ ಎಂದು ಎನ್‌ಜಿಟಿ ಹೇಳಿತು.
ಆದರೂ ನಿಯಮ ಉಲ್ಲಂಘನೆಯ ದಿನಗಳನ್ನು ನಿಯಂತ್ರಣ ಮಂಡಳಿ ತಪ್ಪಾಗಿ ಲೆಕ್ಕ ಹಾಕಿದ್ದರಿಂದ, ಅಮೆಜಾನ್‌ನ ಮೇಲ್ಮನವಿಯನ್ನು ಭಾಗಶಃ ಅನುಮತಿಸಿದ ಎನ್‌ಜಿಟಿ ಪಾವತಿಸಬೇಕಾದ ಪರಿಸರ ಪರಿಹಾರ ಮೊತ್ತವನ್ನು ₹ 6 ಲಕ್ಷಕ್ಕೆ ಇಳಿಸಿತು.