ದೇಶದಲ್ಲಿ ಅಂತರ್ಜಲ ಮಟ್ಟ ಕುಸಿತ: ಪ್ರತಿಕ್ರಿಯಿಸುವಂತೆ ಕೇಂದ್ರ, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಎನ್‌ಜಿಟಿ ಸೂಚನೆ

ವರದಿಯ ಪ್ರಕಾರ, 2025 ರ ವೇಳೆಗೆ ಭಾರತದ ಇಡೀ ವಾಯವ್ಯ ಪ್ರದೇಶದಲ್ಲಿ ನಿರ್ಣಾಯಕವಾಗಿ ಅಂತರ್ಜಲ ಲಭ್ಯತೆ ಕುಸಿಯುವ ಸಾಧ್ಯತೆ ಇದೆ.
ದೇಶದಲ್ಲಿ ಅಂತರ್ಜಲ ಮಟ್ಟ ಕುಸಿತ: ಪ್ರತಿಕ್ರಿಯಿಸುವಂತೆ ಕೇಂದ್ರ, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಎನ್‌ಜಿಟಿ ಸೂಚನೆ
Published on

ಭಾರತದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ವರದಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಇತ್ತೀಚೆಗೆ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದೆ.

'2025ರ ವೇಳೆಗೆ ಭಾರತದಲ್ಲಿ ಅಂತರ್ಜಲ ಮಟ್ಟ 'ಕಡಿಮೆ' ಮಟ್ಟಕ್ಕೆ ಕುಸಿಯಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿರುವ' ಕುರಿತು ಹಿಂದೂಸ್ತಾನ್‌ ಟೈಮ್ಸ್‌ ಪ್ರಕಟಿಸಿದ್ದ ವರದಿ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸಮಸ್ಯೆಯ ಗಂಭೀರತೆ ಹಿನ್ನೆಲೆಯಲ್ಲಿ ಎನ್‌ಜಿಟಿ ಕೇಂದ್ರ ಅಂತರ್ಜಲ ಮಂಡಳಿ (ಸಿಜಿಡಬ್ಲ್ಯೂಬಿ), ಜಲಶಕ್ತಿ ಸಚಿವಾಲಯ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (ಎಂಒಇಎಫ್‌ಸಿಸಿ ಜೊತೆಗೆ 19 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ ಜಲಸಂಪನ್ಮೂಲ ಇಲಾಖೆಗಳ ಪ್ರತಿಕ್ರಿಯೆ ಕೇಳಿದೆ.

ವಿಶ್ವಸಂಸ್ಥೆಯ ಸಂಶೋಧನೆ ಪ್ರಕಾರ, ಭಾರತದ ಸಿಂಧೂ-ಗಂಗಾ ಜಲಾನಯನ ಪ್ರದೇಶದ ಕೆಲ ಪ್ರದೇಶಗಳಲ್ಲಿ ಈಗಾಗಲೇ ಅಂತರ್ಜಲ ಸವಕಳಿ ಮಿತಿ ಮೀರಿದ್ದು 2025 ರ ವೇಳೆಗೆ ಭಾರತದ ಇಡೀ ವಾಯವ್ಯ ಪ್ರದೇಶದಲ್ಲಿ ನಿರ್ಣಾಯಕವಾಗಿ ಅಂತರ್ಜಲ ಲಭ್ಯತೆ ಕುಸಿಯುವ ಸಾಧ್ಯತೆ ಇದೆ.

ಭಾರತವು ವಿಶ್ವದ ಅತಿದೊಡ್ಡ ಅಂತರ್ಜಲ ಬಳಕೆದಾರ ರಾಷ್ಟ್ರವಾಗಿದ್ದು, ಅಮೆರಿಕ ಮತ್ತು ಚೀನಾಗಿಂತಲೂ ಇಲ್ಲಿ ಹೆಚ್ಚು ಅಂತರ್ಜಲ ಬಳಸಲಾಗುತ್ತದೆೆ ಎಂದು ವರದಿ ಬಹಿರಂಗಪಡಿಸಿದೆ.

ರಾಷ್ಟ್ರದ1.4 ಶತಕೋಟಿ ಜನರ ಪಾಲಿಗೆ ʼರೊಟ್ಟಿಯ ಬಟ್ಟಲುʼ ಎನಿಸಿಕೊಂಡಿರುವ ಭಾರತದ ವಾಯುವ್ಯ ಪ್ರದೇಶದಲ್ಲಿರುವ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ದೇಶದ ಶೇ 50ರಷ್ಟು ಅಕ್ಕಿ ಮತ್ತು ಶೇ 85ರಷ್ಟು ಗೋಧಿ ಉತ್ಪಾದಿಸುತ್ತವೆ. ಪಂಜಾಬ್‌ನಲ್ಲಿ ಶೇ 78 ರಷ್ಟು ಬಾವಿಗಳ ಅತಿಯಾದ ಬಕೆಯಾಗುತ್ತಿದ್ದು ಒಟ್ಟಾರೆಯಾಗಿ ವಾಯುವ್ಯ ಪ್ರದೇಶವು 2025 ರ ವೇಳೆಗೆ ಕಡಿಮೆ ಅಂತರ್ಜಲ ಲಭಿಸುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ.

ಪತ್ರಿಕಾ ವರದಿ ಪರಿಸರಕ್ಕೆ ಸಂಬಂಧಿಸಿದ ಗಂಭೀರ ವಿಚಾರವನ್ನು ಎತ್ತಿದೆ ಎಂದು ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ತಜ್ಞ ಸದಸ್ಯ ಡಾ.ಎ.ಸೆಂಥಿಲ್ ವೇಲ್ ಅವರಿದ್ದ ಪೀಠ ತಿಳಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಅಂತರ್ಜಲ ಮಂಡಳಿ (ಸಿಜಿಡಬ್ಲ್ಯೂಬಿ) ದೇಶದ ಅಂತರ್ಜಲ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ವರದಿಯಲ್ಲಿ ವಿವರಿಸಲಾದ ಎಲ್ಲಾ ಶಿಫಾರಸುಗಳನ್ನು ಸರ್ಕಾರ ಜಾರಿಗೊಳಿಸಿದೆ ಎಂದು ಹೇಳಿತು.

ಆದರೆ ಸಿಜಿಡಬ್ಲ್ಯೂಬಿಯ 2022 ರ ವಾರ್ಷಿಕ ವರದಿಗೂ ಹಾಗೂ ನ್ಯಾಯಮಂಡಳಿಯ ಎದುರು ಇರುವ ವರದಿಗೂ ಅಜಗಜಾಂತರ ವ್ಯತ್ಯಾಸ ಇದೆ ಎಂದು ಎನ್‌ಜಿಟಿ ಆಕ್ಷೇಪ ವ್ಯಕ್ತಪಡಿಸಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 9, 2024ರಂದು ನಡೆಯಲಿದೆ.

[ಆದೇಶ ಪ್ರತಿಯನ್ನು ಇಲ್ಲಿ ಓದಿ]

Attachment
PDF
NGT on its own motion order dated 24.11.2023.pdf
Preview
Kannada Bar & Bench
kannada.barandbench.com