ಚಂದಾಪುರ ಕೆರೆ ರಕ್ಷಿಸಲು ವಿಫಲ: ₹500 ಕೋಟಿ ದಂಡ ಆದೇಶ ಮಾರ್ಪಾಡು ಕೋರಿದ್ದ ಕರ್ನಾಟಕದ ಮನವಿ ವಜಾಗೊಳಿಸಿದ ಎನ್‌ಜಿಟಿ

ರಾಜ್ಯದ ಅಧಿಕಾರಿಗಳ ಗಂಭೀರ ವೈಫಲ್ಯವು ಶಾಸನಬದ್ಧ ಆದೇಶವನ್ನು ಮಾತ್ರವಲ್ಲದೆ ಸುಪ್ರೀಂ ಕೋರ್ಟ್ ವಿಧಿಸಿರುವ ಸಮಯಾವಧಿಯನ್ನೂ ಉಲ್ಲಂಘಿಸಿದೆ ಎಂದು ನ್ಯಾಯಮಂಡಳಿ ಒತ್ತಿ ಹೇಳಿದೆ.
National Green Tribunal (NGT)
National Green Tribunal (NGT)
Published on

ಬೆಂಗಳೂರಿನ ಚಂದಾಪುರ ಕೆರೆ ಸಂರಕ್ಷಿಸಲು ವಿಫಲವಾದ ಕಾರಣಕ್ಕೆ ₹500 ಕೋಟಿ ದಂಡ ವಿಧಿಸಿರುವುದರಲ್ಲಿ ಮಾರ್ಪಾಡು ಮಾಡುವಂತೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಈಚೆಗೆ ದೆಹಲಿಯ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು (ಎನ್‌ಜಿಟಿ) ವಜಾ ಮಾಡಿದೆ.

ಕೆರೆ ಸಂರಕ್ಷಿಸುವ ವಿಚಾರದಲ್ಲಿ ರಾಜ್ಯ ಸರ್ಕಾರವು ದಯನೀಯವಾಗಿ ವಿಫಲವಾಗಿದೆ ಎಂದು ನ್ಯಾಯಮೂರ್ತಿಗಳಾದ ಆದರ್ಶ್‌ ಕುಮಾರ್‌ ಗೋಯಲ್‌ ಮತ್ತು ಸುಧೀರ್‌ ಅಗರ್ವಾಲ್‌ ಹಾಗೂ ತಜ್ಞ ಸದಸ್ಯರಾದ ಪ್ರೊ. ಎ ಸೆಂಥಿಲ್‌ ವೇಲ್‌ ಅವರನ್ನು ಒಳಗೊಂಡ ಪೀಠವು ಹೇಳಿದ್ದು, ರಾಜ್ಯದ ಅಧಿಕಾರಿಗಳ ಗಂಭೀರ ವೈಫಲ್ಯವು ಶಾಸನಬದ್ಧ ಆದೇಶವನ್ನು ಮಾತ್ರವಲ್ಲದೆ ಸುಪ್ರೀಂ ಕೋರ್ಟ್ ವಿಧಿಸಿರುವ ಸಮಯಾವಧಿಯನ್ನೂ ಉಲ್ಲಂಘಿಸಿದೆ ಎಂದಿದೆ.

ಕೆರೆ ಸಂರಕ್ಷಣೆಗೆ ಪರಿಹಾರ ಕ್ರಮಕೈಗೊಳ್ಳಲು 3-4 ವರ್ಷಗಳು ಬೇಕಾಗುವುದರಿಂದ ಕೂಡಲೇ ಮೊತ್ತವನ್ನು ಜಮಾ ಮಾಡುವಂತೆ ಸೂಚಿಸಿರುವುದು ಸಮರ್ಥನೀಯವಲ್ಲ ಎಂದು ರಾಜ್ಯ ಸರ್ಕಾರವು ಅರ್ಜಿಯಲ್ಲಿ ವಾದಿಸಿತ್ತು.

Also Read
ಬೆಂಗಳೂರಿನ ಚಂದಾಪುರ ಕೆರೆ ರಕ್ಷಣೆ ಮಾಡುವಲ್ಲಿ ವಿಫಲ: ರಾಜ್ಯ ಸರ್ಕಾರಕ್ಕೆ ₹500 ಕೋಟಿ ದಂಡ ವಿಧಿಸಿದ ಎನ್‌ಜಿಟಿ

ಜಲ ಮಾಲಿನ್ಯ ನಿಯಂತ್ರಣ ಮತ್ತು ಸೂಕ್ತವಾದ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡಬೇಕಾದ ಸಮಯ ಮೀರಿರುವುದರಿಂದ ಕಾಲಾವಕಾಶ ವಿಸ್ತರಿಸಲಾಗದು ಎಂದು ಎನ್‌ಜಿಟಿ ಹೇಳಿದೆ. ಅಲ್ಲದೇ, ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಸಮಯವನ್ನು ಉಲ್ಲಂಘಿಸಿ ರಾಜ್ಯವು ತನ್ನದೇ ಆದ ಸಮಯ ನಿಗದಿಪಡಿಸಿಕೊಳ್ಳುತ್ತಿದ್ದು, ನಿರ್ಭಯದಿಂದ ಸರ್ಕಾರವು ಕಾನೂನು ಉಲ್ಲಂಘಿಸುತ್ತಿದೆ. ಎನ್‌ಜಿಟಿ ನೀಡಿರುವ ನಿರ್ದೇಶನಗಳನ್ನು ಪಾಲಿಸಲು ರಾಜ್ಯ ಸರ್ಕಾರ ಸಿದ್ಧವಿಲ್ಲ. ಆದರೆ ಅಸಮರ್ಥನೀಯ ವಾದವನ್ನು ಅರ್ಜಿಯಲ್ಲಿ ಮಂಡಿಸಿದೆ” ಎಂದು ಎನ್‌ಜಿಟಿ ಹೇಳಿದೆ.

ಪರ್ಯಾವರಣ್ ಸುರಕ್ಷಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನಗಳನ್ನು ಪಾಲಿಸಲಾಗಿಲ್ಲ ಎಂಬುದು ಸೇರಿದಂತೆ ಈಗಾಗಲೇ ಆಗಿರುವ ಉಲ್ಲಂಘನೆಗೆ ದಂಡ ವಿಧಿಸಿಲಾಗಿದೆ. ದಂಡ ಪಾವತಿಸುವುದು ತಡವಾದರೆ ಪ್ರತ್ಯೇಕವಾಗಿ ಹೊಣೆಗಾರಿಕೆ ನಿಗದಿಪಡಿಸಲಾಗುವುದು ಎಂದು ಎನ್‌ಜಿಟಿ ಹೇಳಿದೆ.

Kannada Bar & Bench
kannada.barandbench.com