ಅಸಮರ್ಪಕ ತ್ಯಾಜ್ಯ ನಿರ್ವಹಣೆ: ಪಂಜಾಬ್ ಸರ್ಕಾರಕ್ಕೆ ₹ 2,080 ಕೋಟಿ ದಂಡ ವಿಧಿಸಿದ ಹಸಿರು ನ್ಯಾಯಮಂಡಳಿ

ಅಸಮರ್ಪಕ ತ್ಯಾಜ್ಯ ನಿರ್ವಹಣೆಗಾಗಿ ಕಳೆದ ಕೆಲವು ವಾರಗಳಲ್ಲಿ ಎನ್‌ಜಿಟಿ ದಂಡ ವಿಧಿಸಿದ ಐದನೇ ರಾಜ್ಯ ಪಂಜಾಬ್.
NGT with Punjab
NGT with Punjab
Published on

ಘನ ಮತ್ತು ದ್ರವ ತ್ಯಾಜ್ಯ ಸಂಸ್ಕರಿಸಲು ವಿಫಲವಾದ ಪಂಜಾಬ್‌ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪರಿಸರ ಪರಿಹಾರವಾಗಿ ₹ 2,180 ಕೋಟಿ ರೂಪಾಯಿ ಪಾವತಿಸಲು ಸೂಚಿಸಿದೆ [ಪುರಸಭೆಯ ಘನ ತ್ಯಾಜ್ಯ ನಿರ್ವಹಣಾ ನಿಯಮಗಳು, 2016 ಮತ್ತು ಇತರ ಪರಿಸರ ಸಮಸ್ಯೆಗಳ ಅನುಸರಣೆ ಕುರಿತ ಸ್ವಯಂಪ್ರೇರಿತ ಅರ್ಜಿ].

ಜಲ (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯಿದೆ ಜಾರಿಯಾಗಿ 48 ವರ್ಷಗಳ ನಂತರವೂ ಘನತ್ಯಾಜ್ಯ ನಿರ್ವಹಣಾ ನಿಯಮಗಳ ಅಡಿಯಲ್ಲಿರುವ ಶಾಸನಬದ್ಧ ಕಾಲಮಿತಿ ಮುಗಿದ ಮೇಲೂ ಸಹ ರಾಜ್ಯದಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿನ ದೋಷಗಳು ಮುಂದುವರೆದಿರುವುದು ಕಳವಳಕಾರಿ ಸಂಗತಿ ಎಂದು ನ್ಯಾಯಮಂಡಳಿಯ ಅಧ್ಯಕ್ಷ ನ್ಯಾ. ಆದರ್ಶ್ ಕುಮಾರ್ ಗೋಯೆಲ್ನ್ಯಾ. ಸುಧೀರ್ ಅಗರ್ವಾಲ್ ತಜ್ಞ ಸದಸ್ಯ ಪ್ರೊ. ಸೆಂಥಿಲ್‌ ವೇಲ್‌ ಅವರಿದ್ದ ಪೀಠ  ತಿಳಿಸಿದೆ. 

ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾದ ಅಧಿಕಾರಿಗಳ ಬಗ್ಗೆ ನ್ಯಾಯಮಂಡಳಿಯು, “ಸರ್ಕಾರದ ಅಧಿಕಾರಿಗಳಿಗೆ (ಕರ್ತವ್ಯ ನಿರ್ವಹಣೆ ಮಾಡುವಲ್ಲಿ) ಭಾರಿ ತೊಂದರೆಗಳು ಇವೆಯೇ ಅಥವಾ ಇಚ್ಛಾಶಕ್ತಿಯ ಕೊರತೆ ಇದಕ್ಕೆ ಕಾರಣವೇ? ಮೊದಲನೆಯದನ್ನು ನಂಬುವುದು ನಮಗೆ ಕಷ್ಟ. ನಮ್ಮ ದೃಷ್ಟಿಯಲ್ಲಿ, ಉತ್ತಮ ಆಡಳಿತ ಮತ್ತು ನಿರ್ಣಯದ ಕೊರತೆ ಸನ್ನಿವೇಶವನ್ನು ಕ್ಷಿಪ್ರವಾಗಿ ಸರಿಪಡಿಸಬೇಕಾದ ಪರಿಸ್ಥಿತಿಗೆ ತಂದೊಡ್ಡಿದೆ” ಎಂದು ಬೇಸರಿಸಿತು.

ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ನಿಯಮಗಳ ಜಾರಿಯನ್ನು ನ್ಯಾಯಮಂಡಳಿ ಮೇಲ್ವಿಚಾರಣೆ ಮಾಡುವ ಅಗತ್ಯವಿರುವ ಕುರಿತಂತೆ ಅಲ್ಮಿತ್ರ ಹೆಚ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ ಮತ್ತು ಪರ್ಯಾವರಣ್‌ ಸುರಕ್ಷಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ನಿರ್ದೇಶನಗಳ ಅನುಸಾರವಾಗಿ ಈ ಆದೇಶ ಜಾರಿಗೊಳಿಸಲಾಗಿದೆ.

ಅಸಮರ್ಪಕ ತ್ಯಾಜ್ಯ ನಿರ್ವಹಣೆ ಸಂಬಂಧ ಕೆಲ ವಾರಗಳಿಂದ ಎನ್‌ಜಿಟಿ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಉತ್ತರ ಪ್ರದೇಶಗಳಿಗೆ  ದಂಡ ವಿಧಿಸಿದ್ದು ನ್ಯಾಯಮಂಡಳಿ ಕೆಂಗಣ್ಣಿಗೆ ಗುರಿಯಾದ ಐದನೇ ರಾಜ್ಯ ಪಂಜಾಬ್‌ ಆಗಿದೆ.

Kannada Bar & Bench
kannada.barandbench.com