ನದಿಗಳ ಮಾಲಿನ್ಯ ನಿಯಂತ್ರಣಕ್ಕಾಗಿ 2021ರಲ್ಲಿ ತಾನು ನೀಡಿದ್ದ ಆದೇಶ ಪಾಲಿಸಲಾಗಿದೆಯೇ ಎಂದು ತಿಳಿಸುವ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸೂಚಿಸಿದೆ [ʼದಿ ಹಿಂದೂʼ ಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ಜೇಕಬ್ ಕೋಶಿ ಬರೆದಿರುವ ಸುದ್ದಿ "ಬಹುತೇಕ ನದಿಗಳು ಈಗ ಗಂಭೀರವಾಗಿ ಕಲುಷಿತಗೊಂಡಿವೆ: ಸಿಪಿಸಿಬಿ" ವರದಿ ಆಧರಿಸಿ ದಾಖಲಾದ ಪ್ರಕರಣ].
ದೇಶದ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಜಲಶಕ್ತಿ ಸಚಿವಾಲಯ ಈ ಸಂಬಂಧ ಅನುಪಾಲನಾ ವರದಿ ಸಲ್ಲಿಸಬೇಕೆಂದು ಅಕ್ಟೋಬರ್ 9ರಂದು ನೀಡಿದ ಆದೇಶದಲ್ಲಿ, ಎನ್‌ಜಿಟಿ ತಿಳಿಸಿದೆ.
ವಿವಿಧ ಪ್ರಾಧಿಕಾರಗಳ ಆದೇಶ ಜಾರಿಗೊಳಿಸಲು ಇರುವ ಅಡ್ಡಿಗಳು ಹಾಗೂ ಸಮಸ್ಯೆಯ ವ್ಯಾಪಕತೆಯನ್ನು ಮನಗಂಡು ನ್ಯಾಯಮಂಡಳಿ ಈ ಆದೇಶ ನೀಡಿದೆ.
ನದಿ ಮಾಲಿನ್ಯವನ್ನು ತಡೆಗಟ್ಟಲು ಎನ್‌ಜಿಟಿ ಈ ಹಿಂದೆ ನೀಡಿದ್ದ ವಿವಿಧ ನಿರ್ದೇಶನಗಳನ್ನು ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮಂಡಳಿಯ ಅಧ್ಯಕ್ಷ ನ್ಯಾ. ಪ್ರಕಾಶ್ ಶ್ರೀವಾಸ್ತವ, ತಜ್ಞ ಸದಸ್ಯ ಡಾ ಎ ಸೆಂಥಿಲ್ ವೇಲ್ ಅವರು ಈ ವಿಚಾರ ತಿಳಿಸಿದರು.
ನದಿ ಮಾಲಿನ್ಯ ನಿಯಂತ್ರಿಸಲು ಎನ್‌ಜಿಟಿ ಫೆಬ್ರವರಿ 2021ರಲ್ಲಿ ವಿವಿಧ ನಿರ್ದೇಶನಗಳನ್ನು ನೀಡಿತ್ತು. ಈ ಕ್ರಮಗಳ ಪೈಕಿ ರಾಷ್ಟ್ರೀಯ ನದಿ ಪುನರುಜ್ಜೀವನ ಕಾರ್ಯವಿಧಾನ ರೂಪಿಸುವಂತೆ ಜಲಶಕ್ತಿ ಸಚಿವಾಲಯಕ್ಕೆ ನ್ಯಾಯಮಂಡಳಿ ಸೂಚಿಸಿತ್ತು. ಅದೇ ಆದೇಶದಲ್ಲಿ, ಕೊಳಚೆನೀರಿನ ಉತ್ಪಾದನೆ ಮತ್ತು ಸಂಸ್ಕರಣೆ ನಡುವಿನ ಅಂತರ ಕಡಿಮೆಗೊಳಿಸಲು 2020ರಲ್ಲಿ ನೀಡಿದ್ದ ಆದೇಶಗಳನ್ನು ಅದು ಪುನರುಚ್ಚರಿಸಿತ್ತು.
ನ್ಯಾಯಾಧಿಕರಣದ ಹಿಂದಿನ ನಿರ್ದೇಶನಗಳನ್ನು ಎಲ್ಲಾ ರಾಜ್ಯಗಳು ಇನ್ನೂ ಜಾರಿಗೆ ತಂದಿಲ್ಲ ಎಂದು ಎನ್‌ಜಿಟಿ ಈಗ ಕಳವಳ ವ್ಯಕ್ತಪಡಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 13ರಂದು ನಡೆಯಲಿದೆ.