ಚುನಾವಣಾ ಉಚಿತ ಕೊಡುಗೆಗೆ ಮೂಗುದಾರ: ಕಾಯಿದೆ ಜಾರಿಗೆ ಎನ್‌ಎಚ್‌ಆರ್‌ಸಿ ಅಧ್ಯಕ್ಷ ನ್ಯಾ. ಅರುಣ್ ಮಿಶ್ರಾ ಕರೆ

ಕಾನೂನುಬದ್ಧ ಭರವಸೆ ಮತ್ತು ಉಚಿತ ಕೊಡುಗೆಗಳ ಮೂಲಕ ಮತದಾರರನ್ನು ಆಕರ್ಷಿಸುವುದರ ನಡುವಿನ ವ್ಯತ್ಯಾಸವನ್ನು ಸೂಕ್ತ ಮಟ್ಟದಲ್ಲಿ ಮತ್ತು ವೇದಿಕೆಯಲ್ಲಿ ನಿರ್ಧರಿಸಬೇಕು ಎಂದು ಅವರು ಸಲಹೆ ನೀಡಿದರು.
ನ್ಯಾಯಮೂರ್ತಿ ಅರುಣ್ ಮಿಶ್ರಾ
ನ್ಯಾಯಮೂರ್ತಿ ಅರುಣ್ ಮಿಶ್ರಾ

ಸೂಕ್ತ ಕಾನೂನು ಜಾರಿಗೆ ತರುವ ಮೂಲಕ, ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆ ನೀಡುವ ಅಭ್ಯಾಸಕ್ಕೆ ಕಡಿವಾಣ ಹಾಬೇಕಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ಎಚ್‌ಆರ್‌ಸಿ) ಅಧ್ಯಕ್ಷ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ಅವರು ಕರೆ ನೀಡಿದ್ದಾರೆ.

ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಭಾನುವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯ ಸರ್ವಸದಸ್ಯರ ಅಧಿವೇಶನದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳೂ ಆದ ಮಿಶ್ರಾ ಮಾತನಾಡಿದರು.

ಕಾನೂನುಬದ್ಧ ಭರವಸೆಗಳು ಮತ್ತು ಉಚಿತ ಕೊಡುಗೆಗಳ ಮೂಲಕ ಮತದಾರರನ್ನು ಆಕರ್ಷಿಸುವ ಭರವಸೆಗಳ ನಡುವಿನ ವ್ಯತ್ಯಾಸವನ್ನು ಸೂಕ್ತ ಮಟ್ಟದಲ್ಲಿ ಮತ್ತು ವೇದಿಕೆಯಲ್ಲಿ ನಿರ್ಧರಿಸಬೇಕು ಎಂದು ಅವರು ಸಲಹೆ ನೀಡಿದರು.

Also Read
ಫೇಸ್‌ಬುಕ್‌, ಟ್ವಿಟರ್‌, ಮಾಧ್ಯಮ ಚರ್ಚೆಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ: ಎನ್‌ಎಚ್‌ಆರ್‌ಸಿ ಮುಖ್ಯಸ್ಥ ಅರುಣ್‌ ಮಿಶ್ರಾ

"ಭಾರತೀಯ ಸಂವಿಧಾನದ ಅಧ್ಯಾಯ 4ರಲ್ಲಿ ಕಲ್ಪಿಸಲಾದ ಸಮಾನತೆಯ ಸಾಮಾಜಿಕ ವ್ಯವಸ್ಥೆಯನ್ನು ನಿರ್ಮಿಸುವುದಕ್ಕಾಗಿ ಮತದಾರರಿಗೆ ನೀಡುವ ಭರವಸೆ ಮತ್ತು ಚುನಾವಣಾ ಸಮಯದಲ್ಲಿ ಮತದಾರರನ್ನು ಓಲೈಸಲು ನಿಡುವ ಆಶ್ವಾಸನೆಗಳ ನಡುವಿನ ವ್ಯತ್ಯಾಸ ಗುರುತಿಸುವ ಸಮಯ ಈಗ ಬಂದಿದೆ. ಇದನ್ನು ಸೂಕ್ತ ಮಟ್ಟದಲ್ಲಿ ಮತ್ತು ವೇದಿಕೆಯಲ್ಲಿ ಅಗತ್ಯಬಿದ್ದರೆ ನಿರ್ದಿಷ್ಟ ಕಾಯಿದೆ ಮೂಲಕ ನಿರ್ಧರಿಸಬೇಕಿದೆ" ಎಂದು ಅವರು ವಿವರಿಸಿದರು.

ನ್ಯಾ. ಮಿಶ್ರಾ ಅವರ ಭಾಷಣದ ಪ್ರಮುಖಾಂಶಗಳು

  • ಸಕಾರಾತ್ಮಕ ಸುಧಾರಣೆ ತರುವಲ್ಲಿ ಪತ್ರ ಮುಖೇನ ನ್ಯಾಯಾಲಯಕ್ಕೆ ಸಲ್ಲಿಸುವ ಅರ್ಜಿ ಮತ್ತು ಸಾರ್ವಜನಿಕ ಹಿತಾಸಕ್ತಿ ದಾವೆಯ (ಪಿಐಎಲ್) ಪರಿಣಾಮ ಮಹತ್ವದ್ದಾಗಿದ್ದು ರಾಜಕೀಯ ಉದ್ದೇಶಗಳಿಗಾಗಿ ಅವುಗಳನ್ನು ದುರುಪಯೋಗಪಡಿಸಿಕೊಳ್ಳಬಾರದು. ಅಂತಹ ಅಭ್ಯಾಸ ನಿಲ್ಲಬೇಕು.

  • ಸಾಂವಿಧಾನಿಕ ಗುರಿ ತಲುಪುವುದಕ್ಕಾಗಿ, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಹಿಂಸಾಚಾರ ಖಂಡಿಸುವ ಮೂಲಕ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಅಗತ್ಯವಿದೆ. ನ್ಯಾಯಸಮ್ಮತ ಚುನಾವಣೆಗಳನ್ನು ಮೂಲಭೂತ ಮಾನವ ಹಕ್ಕು ಎಂದು ಗುರುತಿಸಲಾಗಿದೆ.

  • ಸಮಾಜದ ಅಂಚಿನಲ್ಲಿರುವ ವರ್ಗಗಳನ್ನು, ವಿಶೇಷವಾಗಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಹಾಗೂ ಹಿಂದುಳಿದ ವರ್ಗಗಳನ್ನು ಮೇಲೆತ್ತಲು ಸಕಾರಾತ್ಮಕ ಕ್ರಮ ಕೈಗೊಳ್ಳಬೇಕಿದೆ.

  • ಅಸ್ತಿತ್ವದಲ್ಲಿರುವ ಕ್ರಮಗಳು ಸಕಾರಾತ್ಮಕ ಪರಿಣಾಮ ಬೀರುತ್ತಿವೆಯಾದರೂ ಈ ಸಮುದಾಯಗಳೊಳಗಿನ ಕೆಲವು ಸವಲತ್ತು ವಂಚಿತ ವರ್ಗಗಳಿಗೆ ಸಮಾನ ವೇದಿಕೆ ಕಲ್ಪಿಸುವುದಕ್ಕಾಗಿ ಮೀಸಲಾತಿಯಂತಹ ಹೆಚ್ಚುವರಿ ಬೆಂಬಲದ ಅಗತ್ಯವಿದೆ.

  • ಸಮಗ್ರ ಅಭಿವೃದ್ಧಿಗೆ ಲಿಂಗ ನ್ಯಾಯದ ಮಹತ್ವದ್ದಾಗಿದ್ದು ಲಿಂಗ ಸಮಾನತೆಯ ಮರುವ್ಯಾಖ್ಯಾನ ನಡೆಯಬೇಕಿದೆ. ಮಹಿಳೆಯರು ತಾರತಮ್ಯ ಎದುರಿಸುತ್ತಲೇ ಇದ್ದಾರೆ.

  • ಮಹಿಳೆಯರಿಗೆ ಸಮಾನ ನಾಗರಿಕತ್ವ ಮತ್ತು ಪಿತ್ರಾರ್ಜಿತ ಹಕ್ಕು, ಶಿಕ್ಷಣ, ಆಸ್ತಿ ಒಡೆತನ ಹಾಗೂ ಉದ್ಯೋಗಾವಕಾಶ ನೀಡುವುದು ಅತಿಮುಖ್ಯ.

  • ನ್ಯಾಯವನ್ನು ಎತ್ತಿಹಿಡಿಯುವಲ್ಲಿ ಮತ್ತು ಸಾಂವಿಧಾನಿಕ ನಿಯಮಾವಳಿ ಬಲಪಡಿಸುವಲ್ಲಿ ಸ್ವತಂತ್ರ ಮತ್ತು ಪರಿಣಾಮಕಾರಿ ನ್ಯಾಯಾಂಗದ ಪಾತ್ರ ಮಹತ್ವದ್ದು. ಆಡಳಿತ ರಂಗದಲ್ಲಿ ಕಾರ್ಯಾಂಗ ಸೇರಿದಂತೆ ಎಲ್ಲಾ ಸಂಸ್ಥೆಗಳ ಮೂಲಾಧಾರ ನ್ಯಾಯವಾಗಿರಬೇಕು.

Kannada Bar & Bench
kannada.barandbench.com