ಯಾಸಿನ್ ಮಲಿಕ್ ಮರಣದಂಡನೆ ಪ್ರಕರಣದ ಗೌಪ್ಯ ವಿಚಾರಣೆ: ದೆಹಲಿ ಹೈಕೋರ್ಟ್‌ಗೆ ಎನ್ಐಎ ಮನವಿ

ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎನ್ಐಎ ಪ್ರಶ್ನಿಸಿದೆ.
Yasin Malik with Delhi HC
Yasin Malik with Delhi HC
Published on

ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಮರಣದಂಡನೆ ವಿಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆಯನ್ನು ಗೌಪ್ಯವಾಗಿ ನಡೆಸಲು ಕೋರಿ ದೆಹಲಿ ಹೈಕೋರ್ಟ್‌ಗೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಸೋಮವಾರ ಮನವಿ ಮಾಡಿದೆ.

ಗೌಪ್ಯ ವಿಚಾರಣೆ ವೇಳೆ ಸಾರ್ವಜನಿಕರು, ಮಾಧ್ಯಮ ಪ್ರತಿನಿಧಿಗಳು ನ್ಯಾಯಾಲಯ ಕಲಾಪದಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.

Also Read
ಕಾಶ್ಮೀರ ಸಮಸ್ಯೆ ಬಗೆಹರಿಸಲು ಆರು ಸರ್ಕಾರಗಳೊಂದಿಗೆ ಕೆಲಸ; ಗುಪ್ತಚರ ಇಲಾಖೆ ಮನವಿ ಮೇರೆಗೆ ಉಗ್ರ ಹಫೀಜ್‌ ಭೇಟಿ: ಯಾಸಿನ್

ಎನ್‌ಐಎ ಪರ ವಾದ ಮಂಡಿಸಿದ ಸರ್ಕಾರಿ ವಿಶೇಷ ಅಭಿಯೋಜಕ ಅಕ್ಷಯ್ ಮಲಿಕ್ ವಿಚಾರಣೆಗಾಗಿ ಸಾರ್ವಜನಿಕವಾಗಿ ಲಭ್ಯವಿರದಂತಹ ವರ್ಚುವಲ್‌ ನ್ಯಾಯಾಲಯ ಲಿಂಕ್‌ ಒದಗಿಸುವಂತೆ ಕೇಳಿದರು. ನ್ಯಾಯಮೂರ್ತಿಗಳಾದ ವಿವೇಕ್ ಚೌಧರಿ ಮತ್ತು ಮನೋಜ್ ಜೈನ್ ಅವರಿದ್ದ ವಿಭಾಗೀಯ ಪೀಠ ಮನವಿಯನ್ನು ಪರಿಗಣಿಸುವುದಾಗಿ ತಿಳಿಸಿತು

ಈ ಮಧ್ಯೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ತಿಹಾರ್‌ ಜೈಲಿನಿಂದ ಹಾಜರಾದ ಯಾಸಿನ್‌ ಮಲಿಕ್‌ “ನನಗೆ ಮರಣದಂಡನೆ ವಿಧಿಸಲಾಗುತ್ತದೋ ಅಥವಾ ಜೀವಾವಧಿಯ ಬಂಧನವೋ ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲದೆ ಮೂರೂ ವರ್ಷಗಳಿಂದ ಮಾನಸಿಕ ಯಾತನೆ ಅನುಭವಿಸುತ್ತಿದ್ದೇನೆ” ಎಂದರು. ಮುಂದಿನ ವಿಚಾರಣೆ ಜನವರಿ 28ಕ್ಕೆ ನಿಗದಿಯಾಗಿದೆ.

ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎನ್ಐಎ ಪ್ರಶ್ನಿಸಿತ್ತು. ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳ ಸೂತ್ರಧಾರ ಮಲಿಕ್ ಎಂದು ಅದು ದೂರಿತ್ತು.

ವಿಚಾರಣಾ ನ್ಯಾಯಾಲಯದಲ್ಲಿಯೂ ಮಲಿಕ್‌ಗೆ ಮರಣದಂಡನೆ ವಿಧಿಸುವಂತೆ ಎನ್‌ಐಎ ಒತ್ತಾಯಿಸಿತ್ತು. ಆದರೆ ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ ಮರಣ ದಂಡನೆ ವಿಧಿಸಲಾಗುತ್ತದೆ ಎಂದು ವಿಚಾರಣಾ ನ್ಯಾಯಾಲಯ ನುಡಿದಿತ್ತು.

ತಾನು 1990ರಲ್ಲಿ ಬಂಧನಕ್ಕೊಳಗಾದ ನಂತರ, ಪ್ರಧಾನ ಮಂತ್ರಿಗಳಾದ ವಿ ಪಿ ಸಿಂಗ್ ಅವರಿಂದ ಹಿಡಿದು ಮನಮೋಹನ್‌ ಸಿಂಗ್‌ ಅವರವರೆಗೆ ಕಾಶ್ಮೀರ ಸಮಸ್ಯೆ ಬಗೆಹರಿಸಲು ಕೇಂದ್ರದ ಆರು ಸರ್ಕಾರಗಳು ನಿರಂತರವಾಗಿ ನನ್ನನ್ನು ತೊಡಗಿಸಿದ್ದವು ಎಂದು ಯಾಸಿನ್‌ ಹೇಳಿದ್ದರು.

2006ರಲ್ಲಿ ಆಗಿನ ಗುಪ್ತಚರ ವಿಭಾಗದ  ವಿಶೇಷ ನಿರ್ದೇಶಕ ವಿ ಕೆ ಜೋಶಿ ಅವರ ಕೋರಿಕೆಯ ಮೇರೆಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಹಫೀಜ್ ಸಯೀದ್ ಮತ್ತಿತರ ಉಗ್ರರನ್ನು ಭೇಟಿಯಾಗಿದ್ದಾಗಿಯೂ ಅವರು ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದರು.

Also Read
ದೆಹಲಿಯ ತಿಹಾರ್ ಜೈಲಿನಿಂದಲೇ ಯಾಸಿನ್ ಮಲಿಕ್ ವರ್ಚುವಲ್ ವಿಚಾರಣೆಗೆ ಸುಪ್ರೀಂ ಸಮ್ಮತಿ

“ರಾಷ್ಟ್ರ ರಾಜಧಾನಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಉಗ್ರವಾದ ಮತ್ತು ಶಾಂತಿಯ ಮಾತುಕತೆಗಳು ಏಕಕಾಲದಲ್ಲಿ ನಡೆಯಲು ಸಾಧ್ಯವಿಲ್ಲ ಎನ್ನುವ ಸೂಚನೆಯೊಂದಿಗೆ ಹಫೀಝ್ ಸಯೀದ್ ಮತ್ತು ಪಾಕಿಸ್ತಾನದ ಇನ್ನಿತರ ತೀವ್ರವಾದಿ ನಾಯಕರೊಂದಿಗೆ ಮಾತುಕತೆ ನಡೆಸಲು ನನಗೆ ನಿರ್ದಿಷ್ಟವಾಗಿ ವಿನಂತಿಸಲಾಗಿತ್ತು” ಎಂದು ಅವರು ಹೇಳಿದರು.

ಈ ಸಭೆಯಿಂದ ಭಾರತಕ್ಕೆ ಹಿಂದಿರುಗಿದ ನಂತರ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಎನ್ ಕೆ ನಾರಾಯಣನ್ ಅವರನ್ನು ಭೇಟಿಯಾಗಿ ಅದರ ಬಗ್ಗೆ ವಿವರಿಸಿದೆ. ನನ್ನ ಪ್ರಯತ್ನ, ಸಮಯ, ತಾಳ್ಮೆ ಮತ್ತು ಸಮರ್ಪಣೆಗೆ ಪ್ರಧಾನಿಯವರು ಕೃತಜ್ಞತೆ ಸಲ್ಲಿಸಿದ್ದರು ಎಂದು ಯಾಸಿನ್‌ ಹೇಳಿದ್ದರು.

Kannada Bar & Bench
kannada.barandbench.com