ಎನ್‌ಐಎ ಸೇರಿದಂತೆ 15 ಸರ್ಕಾರಿ ಅಂಗಸಂಸ್ಥೆಗಳು ಇನ್ನು ಜಾರಿ ನಿರ್ದೇಶನಾಲಯಕ್ಕೆ ಪಿಎಂಎಲ್ಎ ಅಡಿ ಮಾಹಿತಿ ನೀಡಬೇಕು

ಜಾರಿ ನಿರ್ದೇಶನಾಲಯದ ಅಧಿಕಾರ ವ್ಯಾಪ್ತಿ ವಿಸ್ತರಿಸಲಾಗಿದ್ದು, ಸೇನಾ ಗುಪ್ತಚರ ದಳ ಸೇರಿದಂತೆ ಇನ್ನೂ 15 ಘಟಕಗಳು ಇ ಡಿಯೊಂದಿಗೆ ಇನ್ನು ಮಾಹಿತಿ ಹಂಚಿಕೊಳ್ಳಬೇಕಿದೆ.
ಎನ್‌ಐಎ ಸೇರಿದಂತೆ 15 ಸರ್ಕಾರಿ ಅಂಗಸಂಸ್ಥೆಗಳು ಇನ್ನು ಜಾರಿ ನಿರ್ದೇಶನಾಲಯಕ್ಕೆ ಪಿಎಂಎಲ್ಎ ಅಡಿ ಮಾಹಿತಿ ನೀಡಬೇಕು
Published on

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ (ಪಿಎಂಎಲ್‌ಎ)  ಜಾರಿ ನಿರ್ದೇಶನಾಲಯದ (ಇ ಡಿ)ಜೊತೆ ಮಾಹಿತಿ ಹಂಚಿಕೊಳ್ಳಬೇಕಾದ  ಪಟ್ಟಿಗೆ 15 ಸರ್ಕಾರಿ ಅಂಗಸಂಸ್ಥೆಗಳನ್ನು ಸೇರಿಸಲು ಅನುವಾಗುವಂತೆ 2006ರ ಅಧಿಸೂಚನೆಗೆ ಕೇಂದ್ರ ಸರ್ಕಾರ ಮಂಗಳವಾರ ತಿದ್ದುಪಡಿ ಮಾಡಿದೆ.

ಸಾರ್ವಜನಿಕ ಹಿತಾಸಕ್ತಿಗಾಗಿ ಪಿಎಂಎಲ್‌ ಕಾಯಿದೆಯ ಸೆಕ್ಷನ್ 66ರ ಅಡಿಯಲ್ಲಿ ತಾನು ಅಧಿಕಾರ ಚಲಾಯಿಸಿ ಪಟ್ಟಿ ತಿದ್ದುಪಡಿ ಮಾಡಿರುವುದಾಗಿ  ಕೇಂದ್ರ ಹಣಕಾಸು ಸಚಿವಾಲಯ ನವೆಂಬರ್ 22ರಂದು  ಹೊರಡಿಸಿದ ಅಧಿಸೂಚನೆಯಲ್ಲಿ ವಿವರಿಸಿದೆ.

ಕೆಳಗಿನ ಅಂಗಗಳು ಮಾಹಿತಿ ಹಂಚಿಕೊಳ್ಳಬೇಕಾದ ಅಂಗಗಳ ಪಟ್ಟಿಗೆ ಸೇರ್ಪಡೆಯಾಗಿವೆ:

1. ರಾಷ್ಟ್ರೀಯ ತನಿಖಾ ಸಂಸ್ಥೆ

2. ಗಂಭೀರ ವಂಚನೆ ಪ್ರಕರಣಗಳ ತನಿಖಾ ಸಂಸ್ಥೆ

3. ರಾಜ್ಯ ಪೊಲೀಸ್ ಇಲಾಖೆ

4. ಅಕ್ರಮ ಹಣ ವರ್ಗಾವಣೆ ನಿಯಮಾವಳಿ 2005ರ ನಿಯಮ 2ರ ಷರತ್ತು(ಎಫ್‌ಎ) ಅಡಿಯಲ್ಲಿ ವ್ಯಾಖ್ಯಾನಿಸಲಾದ ನಿಯಂತ್ರಕರು

5. ವಿದೇಶ ವ್ಯಾಪಾರದ ಮಹಾನಿರ್ದೇಶಕರು

6. ವಿದೇಶಾಂಗ ವ್ಯವಹಾರಗಳ ಸಚಿವಾಲಯ

7. ಭಾರತೀಯ ಸ್ಪರ್ಧಾ ಆಯೋಗ

8. ಹಣಕಾಸು ಸಚಿವಾಲಯದ ಕಂದಾಯ ಇಲಾಖೆಗೆ ಸಂಬಂಧಿಸಿದ ವಿಶೇಷ ತನಿಖಾ ತಂಡ

9. ರಾಷ್ಟ್ರೀಯ ಗುಪ್ತಚರ ಗ್ರಿಡ್

10. ಕೇಂದ್ರ ಜಾಗೃತ ಆಯೋಗ (ಸಿವಿಸಿ)

11. ರಕ್ಷಣಾ ಗುಪ್ತಚರ ಸಂಸ್ಥೆ

12. ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (ಎನ್‌ಟಿಆರ್‌ಒ)

13. ಸೇನಾ ಗುಪ್ತಚರ ದಳ

 14. ಕೇಂದ್ರ ನಾಗರಿಕ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1965 ಅಥವಾ ಸಾರ್ವಜನಿಕ ಸೇವಕರ (ವಿಚಾರಣೆಗಳು) ಕಾಯಿದೆ, 1850 (1850 ರ 37) ನಿಬಂಧನೆಗಳ ನಿಯಮ 14 ರ ಉಪ-ನಿಯಮ (2) ಅಡಿಯಲ್ಲಿ ನೇಮಕಗೊಂಡ ತನಿಖಾ ಪ್ರಾಧಿಕಾರ ಮತ್ತು ಕೇಂದ್ರ ಸರ್ಕಾರದ ಪೂರ್ವಾನುಮತಿಯೊಂದಿಗೆ ಶಿಸ್ತು ಪ್ರಾಧಿಕಾರದಿಂದ ಕೇಂದ್ರ ಜಾಗೃತ ಆಯೋಗದ ಒಪ್ಪಿಗೆಯೊಂದಿಗೆ ನೇಮಕಗೊಂಡ ಯಾವುದೇ ಇತರ ಪ್ರಾಥಮಿಕ ತನಿಖಾ ಸಂಸ್ಥೆ.

15. ವನ್ಯಜೀವಿ ಅಪರಾಧ ನಿಯಂತ್ರಣ ದಳ

ಕಾಯಿದೆಯ ಸೆಕ್ಷನ್ 66ರ ಅಡಿಯಲ್ಲಿ, ತನಿಖೆಯು ತನ್ನ ಅಧಿಕಾರ ವ್ಯಾಪ್ತಿಗೆ ಬಂದರೆ ಈ ಅಂಗಗಳು ಜಾರಿ ನಿರ್ದೇಶನಾಲಯಕ್ಕೆ ಪ್ರಕರಣದ ಮಾಹಿತಿಯನ್ನು ಬಹಿರಂಗಪಡಿಸಲು ಬದ್ಧವಾಗಿರುತ್ತವೆ. ಜಾರಿ ನಿರ್ದೇಶನಾಲಯ, ಈ ಮಾಹಿತಿಯ ಆಧಾರದ ಮೇಲೆ, ಅದು ಸೂಕ್ತವೆಂದು ಭಾವಿಸಿದರೆ, ಪಿಎಂಎಲ್‌ಎ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬಹುದು ಎಂದು ಹೊಸ ನಿಯಮಾವಳಿ ಹೇಳುತ್ತದೆ,

ಈವರೆಗೆ ಜಾರಿ ನಿರ್ದೇಶನಾಲಯಕ್ಕೆ ಕೆಳಗಿನ ಅಂಗಗಳು ಮಾತ್ರ ಮಾಹಿತಿ ಹಂಚಿಕೊಳ್ಳುತ್ತಿದ್ದವು:

  • ನಿರ್ದೇಶಕರು (ಹಣಕಾಸು ಸಚಿವಾಲಯದ, ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಆರ್ಥಿಕ ಗುಪ್ತಚರ ಘಟಕ)

  • ಕ್ಯಾಬಿನೆಟ್ ಸೆಕ್ರೆಟರಿಯೇಟ್ (ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ)

  • ಗೃಹ ವ್ಯವಹಾರಗಳ ಸಚಿವಾಲಯ/ರಾಷ್ಟ್ರೀಯ ಭದ್ರತಾ ಮಂಡಳಿಯ ಸಚಿವಾಲಯ/ಗುಪ್ತಚರ ದಳ

  • ಸಿಬಿಐನ ಆರ್ಥಿಕ ಅಪರಾಧಗಳ ವಿಭಾಗ

  • ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು

  • ಭಾರತೀಯ ರಿಸರ್ವ್ ಬ್ಯಾಂಕ್

  • ಕಂಪನಿ ವ್ಯವಹಾರಗಳ ಇಲಾಖೆ

  • ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ

Kannada Bar & Bench
kannada.barandbench.com