[ಬಸವ ಪ್ರಶಸ್ತಿ] ತೇಲ್ತುಂಬ್ಡೆ ಅವರಿಗೆ ಕರ್ನಾಟಕ ಪ್ರಯಾಣಕ್ಕೆ ಎನ್ಐಎ ನ್ಯಾಯಾಲಯ ಅನುಮತಿ; ಇಂದು ಪ್ರಶಸ್ತಿ ಪ್ರದಾನ

ಇಂದು ಸಂಜೆ (ಜನವರಿ 31) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಭೀಮಾ ಕೋರೆಗಾಂವ್‌, ದಲಿತ ಚಿಂತಕ ಆನಂದ್‌ ತೇಲ್ತುಂಬ್ಡೆ
ಭೀಮಾ ಕೋರೆಗಾಂವ್‌, ದಲಿತ ಚಿಂತಕ ಆನಂದ್‌ ತೇಲ್ತುಂಬ್ಡೆ
Published on

ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರಕ್ಕೆ ಭಾಜನರಾಗಿರುವ ಮಹಾರಾಷ್ಟ್ರದ  ಸಾಹಿತಿ, ಹೋರಾಟಗಾರ ಹಾಗೂ ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿ ಪ್ರೊ. ಆನಂದ್‌ ತೇಲ್ತುಂಬ್ಡೆ ಅವರು ಪ್ರಶಸ್ತಿ ಸ್ವೀಕರಿಸುವ ನಿಟ್ಟಿನಲ್ಲಿ ಬೆಂಗಳೂರಿಗೆ ತೆರಳಲು ಮುಂಬೈ ನ್ಯಾಯಾಲಯ ಮಂಗಳವಾರ ಅನುಮತಿ ನೀಡಿದೆ.

ಪ್ರಶಸ್ತಿ ಸ್ವೀಕರಿಸುವುದಕ್ಕಾಗಿ ಎನ್‌ಐಎ ನ್ಯಾಯಾಲಯದ ವ್ಯಾಪ್ತಿ ತೊರೆಯಲು ಅನುಮತಿ ನೀಡುವಂತೆ ತೇಲ್ತುಂಬ್ಡೆ ಅವರು ನ್ಯಾಯಾಲಯವನ್ನು ಕೋರಿದ್ದರು. ಪ್ರಕರಣದಲ್ಲಿ ಈಗಾಗಲೇ ಜಾಮೀನು ಪಡೆದಿರುವ ಅವರು ಜಾಮೀನು ಷರತ್ತಿನಂತೆ ಅನುಮತಿ ಕೇಳಿದ್ದರು.

ಕರ್ನಾಟಕ ಸರ್ಕಾರ ನೀಡುವ ರಾಷ್ಟ್ರಮಟ್ಟದ ಅತ್ಯುನ್ನತ ಪ್ರಶಸ್ತಿಯಾದ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ದಲಿತ ಚಿಂತಕರೂ ಆಗಿರುವ ತೇಲ್ತುಂಬ್ಡೆ ಅವರನ್ನು ಜಾನಪದ ವಿದ್ವಾಂಸ ಗೊ. ರು. ಚನ್ನಬಸಪ್ಪ ನೇತೃತ್ವದ ಸಮಿತಿ ಕಳೆದ ವಾರ ಆಯ್ಕೆ ಮಾಡಿತ್ತು. 

ಪ್ರಶಸ್ತಿ ರೂ 10 ಲಕ್ಷ ನಗದು ಬಹುಮಾನ ಒಳಗೊಂಡಿದೆ. ಇಂದು ಸಂಜೆ (ಜನವರಿ 31) 6 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಎಲ್ಗಾರ್‌ ಪರಿಷತ್‌ ಸಮಾವೇಶದ ಸಂಘಟಕರಲ್ಲಿ ಒಬ್ಬರಾದ ತೇಲ್ತುಂಬ್ಡೆ ಅವರು 2018ರ ಜನವರಿ 1ರಂದು ಮಾಡಿದ ಪ್ರಚೋದನಾಕಾರಿ ಭಾಷಣ ಭೀಮಾ ಕೋರೆಗಾಂವ್‌ ಗಲಭೆಗೆ ನಾಂದಿ ಹಾಡಿತ್ತು ಎಂದು ಎನ್‌ಐಎ ಈ ಹಿಂದೆ ಆರೋಪಿಸಿ ಬಂಧಿಸಿತ್ತು. ತೇಲ್ತುಂಬ್ಡೆ ಅವರು ನಿಷೇಧಿತ ಸಿಪಿಐ (ಮಾವೋವಾದಿ) ಪಕ್ಷದ ಸದಸ್ಯರಾಗಿದ್ದಾರೆ ಎನ್ನಲಾಗಿತ್ತು.

ಸುದೀರ್ಘ ವಿಚಾರಣೆ ಬಳಿಕ ಬಾಂಬೆ ಹೈಕೋರ್ಟ್‌ ತೇಲ್ತುಂಬ್ಡೆ ಅವರಿಗೆ ಜಾಮೀನು ನೀಡಿತ್ತು. ಇದನ್ನು ಎನ್‌ಐಎ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತಾದರೂ ಸರ್ವೋಚ್ಚ ನ್ಯಾಯಾಲಯ ಹೈಕೋರ್ಟ್‌ನ ಜಾಮೀನು ಆದೇಶವನ್ನು ಎತ್ತಿ ಹಿಡಿದಿತ್ತು.

ತೇಲ್ತುಂಬ್ಡೆ ಅವರಲ್ಲದೆ ವಕೀಲೆ, ಮಾನವ ಹಕ್ಕು ಹೋರಾಟಗಾರ್ತಿ ಸುಧಾ ಭಾರದ್ವಾಜ್, ತೆಲುಗು ಕವಿ ವರವರ ರಾವ್, ಸಾಮಾಜಿಕ ಕಾರ್ಯಕರ್ತರಾದ ವೆರ್ನಾನ್ ಗೊನ್ಸಾಲ್ವಿಸ್ ಹಾಗೂ ಅರುಣ್ ಫೆರೇರಾ, ಮಹೇಶ್‌ ರಾವುತ್‌ ಅವರಿಗೂ ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಜಾಮೀನು ದೊರೆತಿದೆ. 

Kannada Bar & Bench
kannada.barandbench.com