ಹಿರಿಯ ಮಾವೋವಾದಿ ಮುಖಂಡ ಕಿರಣ್‌ ಕುಮಾರ್‌ ಜಾಮೀನು ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ನಿರಾಕರಿಸಿದ್ದೇಕೆ?

ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿ ಮೇ, 2019ರಲ್ಲಿ ನಡೆದಿದ್ದ 15 ಪೊಲೀಸರ ಹತ್ಯೆ ಹಾಗೂ ಮೂಲಸೌಕರ್ಯ ಸಂಸ್ಥೆಯೊಂದಕ್ಕೆ ಸೇರಿದ 27 ವಾಹನಗಳ ಸುಟ್ಟು ಹಾಕಿದ ಪ್ರಕರಣ, ಪ್ರೆಷರ್‌ ಬಾಂಬ್‌ ಸ್ಫೋಟಿಸಿದ ಪ್ರಕರಣಗಳು ಕಿರಣ್‌ ಕುಮಾರ್ ಮೇಲಿವೆ.
Senior Maoist Leader Satyanarayana Rani alias Kiran Kumar
Senior Maoist Leader Satyanarayana Rani alias Kiran Kumar

ಹದಿನೈದು ಮಂದಿ ಪೊಲೀಸರ ಸಾವಿಗೆ ಕಾರಣವಾಗಿದ್ದ ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿ 2019ರಲ್ಲಿ ನಡೆದ ನಕ್ಸಲ್‌ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾವೋವಾದಿ ನಾಯಕ ಸತ್ಯನಾರಾಯಣ ರಾಣಿ ಅಲಿಯಾಸ್ ಕಿರಣ್‌ ಕುಮಾರ್ ಅವರ ಜಾಮೀನು ಅರ್ಜಿಯನ್ನು ಇತ್ತೀಚೆಗೆ ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

ಮಾವೋವಾದಿ ಹಿರಿಯ ನಾಯಕಿ ನರ್ಮದಾ ಅಕ್ಕ ಅವರ ಪತಿಯಾಗಿರುವ ಕಿರಣ್‌ ಕುಮಾರ್‌ ಅವರ ಮೇಲೆ ಮೂಲಸೌಕರ್ಯ ಸಂಸ್ಥೆಯೊಂದಕ್ಕೆ ಸೇರಿದ 27 ವಾಹನಗಳನ್ನು ಸುಟ್ಟ ಹಾಗೂ ಪ್ರೆಷರ್‌ ಬಾಂಬ್‌ ಬಳಸಿ ಸ್ಫೋಟಕ ಕೃತ್ಯ ಕೈಗೊಂಡ ಪ್ರಕರಣಗಳಲ್ಲಿ ಸಂಚು ರೂಪಿಸಿದ ಆರೋಪವಿದೆ.

ಘಟನೆಯಲ್ಲಿ ಸುಮಾರು 90-100 ಮಂದಿ ಇದ್ದ ನಕ್ಸಲರು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಇದರಲ್ಲಿ ಭಾಗವಹಿಸಿದ್ದ ಹಿರಿಯ ಮಾವೋವಾದಿ ನಾಯಕರು ಭಾರತೀಯ ಕಮ್ಯುನಿಸ್ಟ್‌ ಪಕ್ಷದ (ಮಾವೋವಾದಿ) ಸದಸ್ಯರು ಎಂದು ಪ್ರಾಸಿಕ್ಯೂಷನ್‌ ವಕೀಲರು ವಾದಿಸಿದ್ದರು.

ಕಿರಣ್‌ ಕುಮಾರ್ ಹಾಗೂ ನರ್ಮದಾ ದಂಪತಿಯ ಶೋಧ ನಡೆಸಿದ್ದ ಪೊಲೀಸರು ಅವರಿಂದ ಇಲೆಕ್ಟ್ರಾನಿಕ್‌ ಉಪಕರಣಗಳು ಹಾಗೂ ರೂ.10.32 ಲಕ್ಷ ಹಣವನ್ನು ಜಪ್ತಿ ಮಾಡಿದ್ದರು. ತನಿಖೆಯ ವೇಳೆ ಈ ಮಾವೋವಾದಿ ನಾಯಕರು ವಿಸ್ತೃತ ಸಂಚೊಂದರ ಭಾಗವಾಗಿದ್ದು ಭಯೋತ್ಪಾದಕ ಕೃತ್ಯದಲ್ಲಿ ಪಾಲ್ಗೊಂಡಿರುವುದು ಪತ್ತೆಯಾಗಿರುವುದಾಗಿ ಪ್ರಾಸಿಕ್ಯೂಷನ್‌ ತಿಳಿಸಿತ್ತು.

ಇದನ್ನು ಅಲ್ಲಗಳೆದಿದ್ದ ಕಿರಣ್‌ ಕುಮಾರ್, ತಮ್ಮನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ. ತಮಗೂ ಸ್ಫೋಟಕ್ಕೂ ಯಾವುದೇ ಸಂಬಂಧವಿಲ್ಲ. ತಾವು ಯಾವುದೇ ನಿಷೇಧಿತ ಸಂಘಟನೆಯ ಸದಸ್ಯರಲ್ಲ ಎಂದಿದ್ದರು. ಇದರ ಆಧಾರದಲ್ಲಿ ತಮ್ಮ ಮೇಲಿನ ಆರೋಪಗಳನ್ನು ಕೈಬಿಡುವಂತೆ ಹಾಗೂ ಜಾಮೀನು ಮಂಜೂರು ಮಾಡುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಆದರೆ, ಪ್ರಕರಣಕ್ಕೆ ಸಂಬಂಧಿಸಿದ ಸಂಚಿನಲ್ಲಿ ಅರ್ಜಿದಾರ (ಕಿರಣ್‌ ಕುಮಾರ್‌) ಪಾಲ್ಗೊಂಡಿರುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಎನ್‌ಐಎ ನ್ಯಾಯಾಧೀಶ ಡಿ ಇ ಕೋಥಲೀಕರ್‌ ಅಭಿಪ್ರಾಯಪಟ್ಟರು. ನಲವತ್ತು ನಕ್ಸಲರನ್ನು ಪೊಲೀಸರು ಕೊಂದಿದ್ದಕ್ಕೆ ಪ್ರತೀಕಾರವಾಗಿ ಭದ್ರತಾ ಸಿಬ್ಬಂದಿಯನ್ನು ಕೊಲ್ಲುವ ಸಂಚೊಂದನ್ನು 2018ರಲ್ಲಿ ರೂಪಿಸಲಾಗಿತ್ತು. ಈ ಸಂಚಿನ ಸಭೆಯಲ್ಲಿ ಅರ್ಜಿದಾರರು (ಕಿರಣ್‌ ಕುಮಾರ್) ಭಾಗವಹಿಸಿದ್ದರು ಎಂದು ಜಾಮೀನು ನಿರಾಕರಣೆಯ ಆದೇಶದಲ್ಲಿ ಅವರು ಹೇಳಿದ್ದಾರೆ.

“ಆರೋಪಪಟ್ಟಿಯಲ್ಲಿನ ದಾಖಲೆಗಳು ಹಾಗೂ ಹೇಳಿಕೆಗಳನ್ನು ವಿಶ್ಲೇಷಿಸಿದ ನಂತರ, ಮೇಲ್ನೋಟಕ್ಕೇ ಅರ್ಜಿದಾರರ ವಿರುದ್ಧ ಮಾಡಲಾಗಿರುವ ಆಪಾದನೆಗಳನ್ನು ನಂಬುವುದಕ್ಕೆ ಸೂಕ್ತ ಆಧಾರಗಳಿವೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಹಾಗಾಗಿ, ಅರ್ಜಿದಾರರು ಜಾಮೀನಿಗೆ ಅರ್ಹಯೋಗ್ಯ ಪ್ರಕರಣವನ್ನು ಮಂಡಿಸಿದ್ದಾರೆ ಎನಿಸುವುದಿಲ್ಲ,” ಎಂದು ಅವರು ಆದೇಶದಲ್ಲಿ ಹೇಳಿದ್ದಾರೆ.

Related Stories

No stories found.
Kannada Bar & Bench
kannada.barandbench.com