![[ಭೀಮಾಕೋರೆಗಾಂವ್ ಪ್ರಕರಣ] ಆನಂದ್ ತೇಲ್ತುಂಬ್ಡೆಗೆ ಜಾಮೀನು ನಿರಾಕರಿಸಿದ ಎನ್‌ಐಎ ವಿಶೇಷ ನ್ಯಾಯಾಲಯ](https://gumlet.assettype.com/barandbench-kannada%2F2021-07%2Fb9a30095-fb20-4d8a-9880-8e9296d9426b%2FAnand_Teltumbde.jpeg?rect=0%2C0%2C768%2C432&auto=format%2Ccompress&fit=max)
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿ ಆನಂದ್ ತೇಲ್ತುಂಬ್ಡೆ ಅವರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸತ್ಯ ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ ಎಂದು ಮುಂಬೈನಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯ ಹೇಳಿದೆ.
ದಲಿತ ಹಕ್ಕುಗಳ ಹೋರಾಟಗಾರ ಹಾಗೂ ಚಿಂತಕ ತೇಲ್ತುಂಬ್ಡೆ ಅವರಿಗೆ ಜಾಮೀನು ನಿರಾಕರಿಸಿರುವ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಡಿ ಇ ಕೋಥಲಿಕರ್ ಅವರು “ಅಪರಾಧ ನ್ಯಾಯಶಾಸ್ತ್ರದ ಮೂಲಭೂತ ತತ್ವವಾದ ಸಮರ್ಥ ನ್ಯಾಯಾಲಯದಿಂದ ತಪ್ಪಿತಸ್ಥನೆಂದು ಸಾಬೀತಾಗುವವರೆಗೂ ಆರೋಪಿಯು ನಿರಪರಾಧಿ ಎಂದು ಭಾವಿಸಲಾಗುತ್ತದೆ ಎಂಬ ಏಕೈಕ ಅಥವಾ ವಿಶೇಷ ಕಾರಣಕ್ಕೆ ಜಾಮೀನು ಅರ್ಜಿಯನ್ನು ಅನುಮತಿಸಲಾಗದು” ಎಂದು 40 ಪುಟಗಳ ಆದೇಶದಲ್ಲಿ ಹೇಳಲಾಗಿದೆ.
ತೇಲ್ತುಂಬ್ಡೆ ವಿರುದ್ಧ ಲಭ್ಯವಿರುವ ದಾಖಲೆಗಳನ್ನು ಬಾಂಬೆ ಹೈಕೋರ್ಟ್ ಪರಿಶೀಲಿಸಿದಾಗ ಅವರು ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗಿದೆ. ಈ ವಿಚಾರಗಳ ಹಿನ್ನೆಲೆಯಲ್ಲಿ ಅರ್ಜಿದಾರರ ಪರವಾಗಿ ವಿವೇಚನಾಧಿಕಾರ ನಿರ್ಬಂಧಿಸಲಾಗಿದೆ ಎಂದು ವಿಶೇಷ ನ್ಯಾಯಾಲಯ ಹೇಳಿದೆ.
“ದಾಖಲೆಯಲ್ಲಿ ಲಭ್ಯವಿರುವ ಅಂಶಗಳನ್ನು ಪರಿಶೀಲಿಸಿದಾಗ ಅರ್ಜಿದಾರರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ದಿಟವಾಗಿವೆ ಎಂದು ಹೇಳಲು ಯಾವುದೇ ಅಳುಕು ಇಲ್ಲ” ಎಂದು ನ್ಯಾಯಾಲಯ ಹೇಳಿದೆ.
ತೇಲ್ತುಂಬ್ಡೆ ಪರ ವಕೀಲ ಸುದೀಪ್ ಪಸ್ಬೋಲಾ ಅವರು “ಪ್ರಾಸಿಕ್ಯೂಷನ್ ಅವಲಂಬಿಸಿರುವ ದಾಖಲೆಗಳು ಅರ್ಜಿದಾರರ ಮೇಲೆ ಹೊಣೆಗಾರಿಕೆಯನ್ನು ಹೇರಲು ಅಥವಾ ಆರೋಪಗಳು ನಿಜವೆಂದು ತೀರ್ಮಾನಿಸಲು ಅನುಮತಿಸುವುದಿಲ್ಲ” ಎಂದು ವಾದಿಸಿದರು.
ಆದರೆ, ನ್ಯಾಯಾಲಯವು ರಾಷ್ಟ್ರೀಯ ತನಿಖಾ ದಳ ವರ್ಸಸ್ ಜಹೂರ್ ಅಹ್ಮದ್ ಶಾ ವಟಾಲಿ ಪ್ರಕರಣದಲ್ಲಿ ಹೇಳಿರುವಂತೆ ಜಾಮೀನು ನಿರ್ಧರಿಸುವಾಗ ಇಡೀ ಪ್ರಕರಣದ ಪುಟ್ಟ ವಿಚಾರಣೆಯನ್ನೇ ನಡೆಸಲಾಗದು ಎಂದಿದೆ. ತೇಲ್ತುಂಬ್ಡೆ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ದಾಖಲೆಗಳಿವೆ. ಹೀಗಾಗಿ, ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆಯ ಸೆಕ್ಷನ್ 43-ಡಿ ಅವರ ಅರ್ಜಿ ಜಾಮೀನಿಗೆ ಅರ್ಹವಾಗಿಲ್ಲ ಎಂದಿದೆ.
ಸಿಪಿಐ (ಮಾವೋವಾದಿ) ಕಾರ್ಯತಂತ್ರದಲ್ಲಿ ತೇಲ್ತುಂಬ್ಡೆ ಭಾಗಿಯಾಗಿದ್ದರು ಎಂದು ಹೇಳುವುದಕ್ಕೆ ದಾಖಲೆಗಳಿವೆ. ಅಲ್ಲದೇ, ತಮ್ಮ ಸಹೋದರ ಹಾಗೂ ಹಲವು ಪ್ರಕರಣಗಳಲ್ಲಿ ಬೇಕಾಗಿರುವ ಆರೋಪಿ ಮಿಲಿಂದ್ ತೇಲ್ತುಂಬ್ಡೆ ಅವರನ್ನು ಪ್ರೇರೇಪಿಸಿ, ಆ ಸಂಟನೆಯ ಕಾರ್ಯಚಟುವಟಿಕೆಯಲ್ಲಿ ಭಾಗಿಯಾಗುವಂತೆ ಮಾಡಿದ್ದಾರೆ ಎಂದು ಎನ್‌ಐಎ ವಾದಿಸಿದೆ.