ಚರ್ಚೆಗೆ ಗ್ರಾಸವಾದ ಸಚಿವ ಮುರುಗೇಶ್ ನಿರಾಣಿ ಅವರ ಎರಡು ಹಳೆಯ ಪ್ರಕರಣಗಳು

ನಿರಾಣಿ ಅವರು ಎರಡೂ ದಾವೆಗಳಲ್ಲಿ ದಾಖಲಿಸಿರುವ ಅಂಶಗಳು ಸಾಮಾನ್ಯವಾಗಿದ್ದರೂ ತಮ್ಮ ತೇಜೋವಧೆಯಾಗದಂತೆ ತೀವ್ರ ಮುಂಜಾಗ್ರತೆ ವಹಿಸಿದ್ದು, ಪ್ರಮುಖವಾಗಿ ಚರ್ಚೆಯಾಗುತ್ತಿದೆ.
ಚರ್ಚೆಗೆ ಗ್ರಾಸವಾದ ಸಚಿವ ಮುರುಗೇಶ್ ನಿರಾಣಿ ಅವರ ಎರಡು ಹಳೆಯ ಪ್ರಕರಣಗಳು

ಸಚಿವ ಮುರುಗೇಶ್‌ ನಿರಾಣಿ ಅವರು 2020ರಲ್ಲಿ ಬೆಂಗಳೂರಿನ ನ್ಯಾಯಾಲಯವೊಂದರಲ್ಲಿ ಎರಡು ದಾವೆಗಳನ್ನು ಹೂಡಿ ಮಾಧ್ಯಮಗಳ ವಿರುದ್ಧ ತಾತ್ಕಾಲಿಕ ತಡೆ ಆದೇಶ ಪಡೆದಿರುವುದು ಅನೇಕ ಚರ್ಚೆಗಳನ್ನು ಹುಟ್ಟುಹಾಕಿದೆ.

ಒಂದು ದಾವೆ ಬಿಜಾಪುರ ಜಿಲ್ಲೆಯ ʼಶ್ರೀ ಮುರುಗೇಶ್‌ ನಿರಾಣಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್‌ಗೆ ಸಂಬಂಧಿಸಿದ್ದಾದರೆ ಮತ್ತೊಂದು ಮೊಕದ್ದಮೆ ಹಿಂದೂ ದೇವತೆಗಳನ್ನು ನಿಂದಿಸಿದ ಸಂದೇಶವನ್ನು ʼಮುರುಗೇಶ್‌ ನಿರಾಣಿ ಗ್ರೂಪ್‌ʼ ಸದಸ್ಯರಿಗೆ ಫಾರ್ವರ್ಡ್‌ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಎರಡೂ ದಾವೆಗಳಲ್ಲಿ ದಾಖಲಿಸಿರುವ ಅಂಶಗಳು ಸಾಮಾನ್ಯವಾಗಿದ್ದರೂ ತಮ್ಮ ತೇಜೋವಧೆಯಾಗದಂತೆ ತೀವ್ರ ಮುಂಜಾಗ್ರತೆ ವಹಿಸಿದ್ದು, ಪ್ರಮುಖವಾಗಿ ಚರ್ಚೆಯಾಗುತ್ತಿದೆ.

Also Read
ರಮೇಶ್‌ ಜಾರಕಿಹೊಳಿ ಬ್ಲ್ಯಾಕ್‌ ಮೇಲ್‌ ಪ್ರಕರಣ: ನರೇಶ್‌, ಶ್ರವಣ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ

ಕೇಂದ್ರ ಸಚಿವರಾಗಿದ್ದ ಡಿ ವಿ ಸದಾನಂದ ಗೌಡ ಅವರು ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ನ್ಯಾಯಾಲಯದಿಂದ ಇತ್ತೀಚೆಗೆ ತಡೆಯಾಜ್ಞೆ ಪಡೆದಿದ್ದರು. ಅದಾದ ಕೆಲ ದಿನಗಳಲ್ಲೇ ಅವರು ಸಚಿವ ಸ್ಥಾನದಿಂದ ಹೊರಬಂದಿದ್ದರು.

ಅದಕ್ಕೂ ಮುನ್ನ ಲೈಂಗಿಕ ಸಿಡಿ ಹಗರಣಕ್ಕೆ ಸಂಬಂಧಿಸಿದಂತೆ ರಮೇಶ್‌ ಜಾರಕಿಹೊಳಿಯವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ಬೆನ್ನಿಗೇ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರವಹಿಸಿ ಜೊತೆಯಾಗಿ ಮುಂಬೈನಲ್ಲಿ ತಂಗಿದ್ದ ಆರು ಸಚಿವರು ಕೆಲ ದಿನಗಳ ಹಿಂದೆ ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಸಚಿವರಾದ ಶಿವರಾಮ್‌ ಹೆಬ್ಬಾರ್, ಕೆ ಸುಧಾಕರ್, ಎಸ್‌ ಟಿ ಸೋಮಶೇಖರ್, ಬಿ ಸಿ ಪಾಟೀಲ್‌, ಭೈರತಿ ಬಸವರಾಜು, ನಾರಾಯಣ ಗೌಡ ಅವರು ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ಗೆ ಈ ಸಂಬಂಧ ಅರ್ಜಿ ಸಲ್ಲಿಸಿದ್ದರು.

Also Read
ಮಾನಹಾನಿಕರ ವರದಿ ಪ್ರಸಾರಕ್ಕೆ ತಡೆ: ನ್ಯಾಯಾಲಯದ ಮೊರೆ ಹೋದ ಆರು ಸಚಿವರು

ಈ ಹಿನ್ನೆಲೆಯಲ್ಲಿ ಮುರುಗೇಶ್‌ ನಿರಾಣಿ ಅವರು 2020ರಲ್ಲಿ ಪಡೆದಿದ್ದ ತಾತ್ಕಾಲಿಕ ತಡೆ ಆದೇಶಗಳು ವಿವಿಧ ಪ್ರಶ್ನೆಗಳನ್ನು ಎತ್ತುತ್ತಿವೆ. ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ದಾಖಲಿಸಿದ್ದ ಎರಡು ಪ್ರತ್ಯೇಕ ಮೊಕದ್ದಮೆಗಳಲ್ಲಿ ತಮ್ಮ ಅಥವಾ ತಮ್ಮ ಕುಟುಂಬ ಇಲ್ಲವೇ ತಮ್ಮ ಆಪ್ತರ ವಿರುದ್ಧ ಯಾವುದೇ ಸುದ್ದಿ ಪ್ರಕಟಿಸುವ, ಪ್ರಸಾರ ಮಾಡುವ ಮುನ್ನ ಸತ್ಯಶೋಧನೆ ಮಾಡಬೇಕು. ಚಾರಿತ್ರ್ಯವಧದೆ ಅಥವಾ ಮಾನಹಾನಿಕರ ಇಲ್ಲವೇ ನಕಾರಾತ್ಮಕ ರೀತಿಯ ಅಥವಾ ಕಟು ಅಥವಾ ಪೂರ್ವಾಗ್ರಹ ಪೀಡಿತವಾಗಿರುವ ಸುದ್ದಿಗಳನ್ನು ಪ್ರಕಟಣೆ ಅಥವಾ ಪ್ರಸಾರ ಮಾಡದಂತೆ ಇಲ್ಲವೇ ಹರಡದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡುವಂತೆ ಅವರು ಕೋರಿದ್ದರು. ಎರಡು ಪ್ರತ್ಯೇಕ ದಾವೆಗಳಿಗೆ ಸಂಬಂಧಿಸಿದಂತೆ ಅವರು ಮಾಡಿದ್ದ ಮನವಿಯನ್ನು ಸಿಟಿ ಸಿವಿಲ್‌ ಕೋರ್ಟ್‌ ಸೆಷನ್ಸ್‌ ನ್ಯಾಯಾಧೀಶ ರಾಜೇಶ್ವರ ಅವರು ಮಾನ್ಯ ಮಾಡಿದ್ದರು.

ಸಾಮಾನ್ಯ ಎನಿಸುವ ಪ್ರಕರಣದಲ್ಲಿ ನಿರಾಣಿ ಅವರು ರಾಷ್ಟ್ರಮಟ್ಟದ ಮಾಧ್ಯಮಗಳನ್ನು ಕೂಡ ಪ್ರತಿವಾದಿಗಳನ್ನಾಗಿ ಮಾಡಿದ್ದು, ತಾವು ನ್ಯಾಯಾಲಯದ ಮೊರೆ ಹೋಗಿರುವ ಸುದ್ದಿ ಹೆಚ್ಚು ಪ್ರಚಾರವಾಗದಂತೆ ನೋಡಿಕೊಂಡಿರುವುದು ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Kannada Bar & Bench
kannada.barandbench.com