
ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ನಿರಾಣಿ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ₹240 ಕೋಟಿ ಬಾಕಿ ಹಣ ಪಾವತಿಯಾಗದ ವಿಚಾರವನ್ನು ಗುರುವಾರ ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ಸಕ್ಕರೆ ಮಾರಾಟ ಮಾಡಿ ರೈತರಿಗೆ ಹಣ ಪಾವತಿಸುವುದಾಗಿ ಮುಚ್ಚಳಿಕೆ ನೀಡುವಂತೆ ನಿರಾಣಿ ಶುಗರ್ಸ್ ಲಿಮಿಟೆಡ್‌ಗೆ ನಿರ್ದೇಶಿಸಿದೆ.
ರೈತರಿಗೆ ಹಣ ಪಾವತಿ ಮಾಡುವಂತೆ ಸೂಚಿಸಿ ರಾಜ್ಯ ಕಬ್ಬು ಅಭಿವೃದ್ಧಿ ಆಯುಕ್ತರು 2025ರ ಫೆಬ್ರವರಿ 2 ಮತ್ತು 25ರಂದು ಹೊರಡಿಸಿದ್ದ ಆದೇಶ ರದ್ದುಪಡಿಸಬೇಕು ಮತ್ತು ಪ್ರಕರಣ ಸಂಬಂಧ ತಮ್ಮ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಸರ್ಕಾರ ಹಾಗೂ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಕೋರಿ ನಿರಾಣಿ ಶುಗರ್ಸ್ ಲಿಮಿಟೆಡ್ ಕಾರ್ಯಕಾರಿ ನಿರ್ದೇಶಕ ಸಂಗಮೇಶ್ ನಿರಾಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರರ ಸಂಸ್ಥೆಗೆ ರೈತರು ಕಬ್ಬು ಮಾರಾಟ ಮಾಡಿದ್ದಾರೆ. ಅದಕ್ಕಾಗಿ ಆ ಕಬ್ಬಿನಿಂದ ಉತ್ಪಾದಿಸಿರುವ ಸಕ್ಕರೆಯನ್ನು ಮಾರಾಟ ಮಾಡಿ ರೈತರಿಗೆ ಬಾಕಿ ಹಣ ಪಾವತಿಸಬೇಕು. ಈ ಕುರಿತು ಮುಚ್ಚಳಿಕೆ ನೀಡಿ ಏಪ್ರಿಲ್ 7ರಂದು ಅಫಿಡವಿಟ್ ಸಲ್ಲಿಸಬೇಕು ಎಂದು ನಿರಾಣಿ ಶುಗರ್ಸ್ ಲಿಮಿಟೆಡ್‌ಗೆ ನಿರ್ದೇಶಿಸಿ, ವಿಚಾರಣೆಯನ್ನು ಮುಂದೂಡಿತು.
ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲ ಟಿ ಅಜಯ್ ಕಡ್ಕೋಲ್ ಅವರು ಕಬ್ಬಿನಿಂದ ಸಕ್ಕರೆ, ಎಥೆನಾಲ್, ವಿದ್ಯುತ್ ಉತ್ಪಾದಿಸಲಾಗಿದೆ. ವಿದ್ಯುತ್ ಅನ್ನು ಹೆಸ್ಕಾಂಗೆ ಮಾರಾಟ ಮಾಡಲಾಗಿದೆ. ಆದರೆ, ಈವರೆಗೂ ಹೆಸ್ಕಾಂ ಹಣ ಬಿಡುಗಡೆ ಮಾಡಿಲ್ಲ. ಇನ್ನೂ ದಿನನಿತ್ಯ ಅಗತ್ಯ ವಸ್ತುಗಳ ಕಾಯಿದೆ ಅಡಿ ಸಕ್ಕರೆ ಮಾರಾಟ ಮಾಡಲು ಅರ್ಜಿದಾರರಿಗೆ ನಿರ್ಬಂಧ ಇದೆ. ಇದರಿಂದ ರೈತರಿಗೆ ಬಾಕಿ ಹಣ ಪಾವತಿಸಲು ವಿಳಂಬವಾಗಿದೆ ಎಂದು ಪೀಠದ ಗಮನಕ್ಕೆ ತಂದರು.
ಅದನ್ನು ಪರಿಗಣಿಸಿದ ಹೈಕೋರ್ಟ್ ಅಫಿಡವಿಟ್ ಸಲ್ಲಿಸಲು ಅರ್ಜಿದಾರರಿಗೆ ನಿರ್ದೇಶಿಸಿ, ಏಪ್ರಿಲ್ 7ಕ್ಕೆ ವಿಚಾರಣೆ ಮುಂದೂಡಿತು.