[ನೀರವ್ ಮೋದಿ ಪ್ರಕರಣ] ಕಾಟ್ಜು ಅವರ ತಜ್ಞ ಹೇಳಿಕೆಗಳ ಬಗ್ಗೆ ಬ್ರಿಟನ್‌ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದ್ದೇಕೆ?

ಭಾರತದ ನ್ಯಾಯಾಂಗ ರಾಜಿ ಮಾಡಿಕೊಂಡಿದೆ ಎಂಬ ವಾದವನ್ನು ಬ್ರಿಟನ್‌ನ ನ್ಯಾಯಾಲಯ ತಳ್ಳಿಹಾಕಿದ್ದು ಇದಕ್ಕೆ ಸಾಲಿಸಿಟರ್‌ ಜನರಲ್‌ ಅವರ ಅಧಿಕಾರ ಪ್ರತ್ಯೇಕತೆಯ ವಾದವನ್ನು ಆಧರಿಸಿದೆ.
Justice Markandey Katju and Tushar Mehta
Justice Markandey Katju and Tushar Mehta
Published on

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅಭಿಪ್ರಾಯಗಳಿಗೆ 2016ರಲ್ಲಿ ಭಾರತದ ಸುಪ್ರೀಂ ಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ಐದು ವರ್ಷಗಳ ಬಳಿಕ ಬ್ರಿಟನ್‌ನ ನ್ಯಾಯಾಲಯವೊಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಮೂರ್ತಿಯ ಮಾತಿನ ಶೈಲಿ ಮತ್ತು ನಡತೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ (ಭಾರತ ಸರ್ಕಾರ ವರ್ಸಸ್‌ ನೀರವ್‌ ದೀಪಕ್‌ ಮೋದಿ).

ದೇಶಭ್ರಷ್ಟ ಉದ್ಯಮಿ ನೀರವ್‌ ಮೋದಿಯತ್ತ ಬಿಜೆಪಿ ಸರ್ಕಾರ ತಳೆದಿರುವ ನಿಲುವನ್ನು ಹಿಟ್ಲರ್‌ನ ಯಹೂದಿಗಳೆಡೆಗಿನ ಧೋರಣೆಗೆ ಹೋಲಿಕೆ ಮಾಡಿರುವ ಕಾಟ್ಜು ಅವರ ಹೇಳಿಕೆಯು “ಆಶ್ಚರ್ಯ ಮೂಡಿಸುವಂತಿದ್ದು, ಅಸಮರ್ಥನೀಯ ಮತ್ತು ಅಸೂಕ್ಷ್ಮತೆಯಿಂದ ಕೂಡಿದೆ” ಎಂದು ಬ್ರಿಟನ್‌ನ ವೆಸ್ಟ್‌ ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಹೇಳಿದೆ.

ಭಾರತದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಭಾರತದ ವಿವಿಧ ಅಂಗಗಳ ನಡುವೆ ಅಧಿಕಾರದ ಪ್ರತ್ಯೇಕತೆಯು ಇದೆ ಎಂದು ತಿಳಿಸಿರುವುದನ್ನು ಆಧರಿಸಿ ಭಾರತದ ನ್ಯಾಯಾಂಗ ರಾಜಿ ಮಾಡಿಕೊಂಡಿದೆ ಎಂಬ ವಾದವನ್ನು ಸಹ ಯುಕೆ ನ್ಯಾಯಾಲಯವು ತಳ್ಳಿ ಹಾಕಿದೆ. ನೀರವ್‌ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಆದೇಶಿಸಿರುವ ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟ್ಜು ಸಲ್ಲಿಸಿರುವ ತಜ್ಞ ಸಾಕ್ಷ್ಯವನ್ನು ವಜಾಗೊಳಿಸಿದೆ.

ಭಾರತದ ನ್ಯಾಯಾಂಗವು ರಾಜಿಗೆ ಒಳಗಾಗಿದ್ದು, ನೀರವ್ ಮೋದಿಯನ್ನು ನ್ಯಾಯಸಮ್ಮತ ವಿಚಾರಣೆಗೆ ಒಳಪಡಿಸಲಾಗುವುದಿಲ್ಲ ಎಂದು ಕಾಟ್ಜು ಅವರು ಹೇಳಿದ್ದರು. “ಭಾರತ ಸರ್ಕಾರವು ಮಾಧ್ಯಮದ ದಾಳಿಯನ್ನು ವ್ಯವಸ್ಥಿತವಾಗಿ ರೂಪಿಸಿದೆ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ನಿವೃತ್ತ ನ್ಯಾಯಮೂರ್ತಿ ಕಾಟ್ಜು ಅವರ ತಜ್ಞ ಸಾಕ್ಷ್ಯದ ಮೇಲೆ ಅಷ್ಟು ಭರವಸೆ ಇಲ್ಲ” ಎಂದು ಜಿಲ್ಲಾ ನ್ಯಾಯಾಧೀಶ ಸ್ಯಾಮ್‌ ಗೂಝಿ ಹೇಳಿದ್ದಾರೆ.

Also Read
ನೀರವ್ ಮೋದಿ ಪ್ರಕರಣ: ಬ್ಯಾಂಕ್, ಕೇಂದ್ರ ಸರ್ಕಾರದ ಕಾರ್ಯವೈಖರಿ ಕುರಿತು ಬ್ರಿಟನ್ ನ್ಯಾಯಾಲಯ ಹೇಳಿದ್ದೇನು?
  • ದೇಶದ ಆರ್ಥಿಕ ಸಮಸ್ಯೆಗಳನ್ನು ಬಿಜೆಪಿಯಿಂದ ಬಗೆಹರಿಸಲು ಆಗುತ್ತಿಲ್ಲ. ಹೀಗಾಗಿ ಹಿಟ್ಲರ್‌ ಯಹೂದಿಗಳನ್ನು ದೂಷಿಸಿದಂತೆ ಬಿಜೆಪಿ ಸರ್ಕಾರವು ನೀರವ್‌ ಮೋದಿಯನ್ನು ನಿಂದಿಸುತ್ತಿದೆ. “ನೀರವ್‌ ಮೋದಿ ಯಹೂದಿ ರೀತಿಯಲ್ಲಿದ್ದು, ಭಾರತದಲ್ಲಿನ ಎಲ್ಲಾ ಸಮಸ್ಯೆಗಳಿಗೆ ಅವರನ್ನು ದೂಷಿಸಲಾಗುತ್ತಿದೆ” ಎಂದು ಕಾಟ್ಜು ಅವರ ಹೇಳಿಕೆಯನ್ನು ಉಲ್ಲೇಖಿಸಿ ಇಂಗ್ಲೆಂಡ್‌ ನ್ಯಾಯಾಲಯ ಹೇಳಿದೆ. ಪಾಟಿ ಸವಾಲಿನ ವೇಳೆ ಕಾಟ್ಜು ಅವರು ಕೆಲವೊಂದು ಅಸಮರ್ಥನೀಯವೂ, ಸಂವೇದನಾಶೂನ್ಯವೂ ಆದ ಹೋಲಿಕೆಗಳನ್ನು ಮಾಡಿದ್ದಾರೆ. ಆರೋಪಗಳ ಕುರಿತಾದ ತನಿಖೆಯ ಬಗ್ಗೆ ಕಾಟ್ಜು ಅವರನ್ನು ಪ್ರಶ್ನಿಸಿದಾಗ ಕಾಟ್ಜು ಅವರು ಪ್ರಕರಣದ ಅರ್ಹತೆಯ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ, ಭಾರತದಲ್ಲಿ ನೀರವ್ ಮೋದಿಯನ್ನು ನ್ಯಾಯ ಸಮ್ಮತ ತನಿಖೆಗೆ ಒಳಪಡಿಸಲಾಗುವುದಿಲ್ಲ ಎಂದು ಹೇಳಿರುವುದನ್ನು ಪೀಠವು ಗಮನಿಸಿದೆ.

  • 2011ರಲ್ಲಿ ನಿವೃತ್ತಿ ಹೊಂದುವವರೆವಿಗೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ಕಾಟ್ಜು ಅವರು “ಕನಿಷ್ಠ ವಸ್ತುನಿಷ್ಠೆಯನ್ನು ಉಳಿಸಿಕೊಂಡಿಲ್ಲ, ನಂಬಿಕೆಗೆ ಅರ್ಹರಲ್ಲ”. “ನ್ಯಾಯಾಲಯದಲ್ಲಿನ ಅವರ (ಕಾಟ್ಜು) ಸಾಕ್ಷ್ಯವು ತಮ್ಮ ಹಿಂದಿನ ನ್ಯಾಯಿಕ ಸಹೋದ್ಯೋಗಿಗಳ ಬಗೆಗಿನ ಅಸಹನೆಯ ಪ್ರತೀಕವಾಗಿದೆ. ಇದು ತನ್ನದೇ ಆದ ವೈಯಕ್ತಿಕ ಕಾರ್ಯಸೂಚಿಯೊಂದಿಗೆ ಬಹಿರಂಗವಾಗಿ ಮಾತನಾಡುವ ವಿಮರ್ಶಕನ ಲಕ್ಷಣಗಳನ್ನು ಹೊಂದಿದೆ” ಎಂದು ಪೀಠ ಹೇಳಿದೆ.

  • ನ್ಯಾಯಾಲಯಕ್ಕೆ ಸಾಕ್ಷ್ಯ ನೀಡುವುದಕ್ಕೂ ಮುನ್ನ ಕಾಟ್ಜು ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಕ್ಕೆ ನ್ಯಾಯಾಲಯವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. “ಭಾರತದ ನ್ಯಾಯಾಂಗದಲ್ಲಿ ಕಾನೂನನ್ನು ಸಂರಕ್ಷಿಸುವ ಅತ್ಯುನ್ನತ ಸ್ಥಾನದಲ್ಲಿದ್ದು, ನ್ಯಾಯಾಲಯಕ್ಕೆ ಸಾಕ್ಷ್ಯ ಸಲ್ಲಿಸುವುದಕ್ಕೂ ಮುನ್ನ ಮಾಧ್ಯಮಗಳ ಜೊತೆ ಚರ್ಚಿಸುವ ಅವರ ನಡತೆ ಮತ್ತು ಸಾಕ್ಷ್ಯವು ಪ್ರಶ್ನಾರ್ಹವಾಗಿದೆ” ಎಂದು ತೀರ್ಪಿನಲ್ಲಿ ಹೇಳಲಾಗಿದೆ.

    ಮಾಧ್ಯಮ ವಿಚಾರಣೆಯ ಬಗ್ಗೆ ತೀವ್ರವಾಗಿ ಟೀಕೆ ಮಾಡುವ ಮತ್ತು ನೀರವ್‌ ಮೋದಿ ಪ್ರಕರಣದ ಮೇಲೆ ಅದು ಬೀರುವ ಪರಿಣಾಮದ ಬಗ್ಗೆ ತಿಳಿದಿದ್ದೂ ಅವರು ನ್ಯಾಯಾಲಯಕ್ಕೆ ಸಲ್ಲಿಸುವ ಸಾಕ್ಷ್ಯದ ಕುರಿತು ಮಾಧ್ಯಮಗಳ ಜೊತೆ ಚರ್ಚಿಸುವ ಮೂಲಕ ತಮ್ಮದೇ ಆದ ಮಾಧ್ಯಮ ಚರ್ಚೆ ಹುಟ್ಟುಹಾಕಿದ್ದಾರೆ. ಇದು ಮಾಧ್ಯಮದ ಪ್ರಚಾರದ ಮೇಲಿನ ಆಸಕ್ತಿಯಿಂದ ಮಾಡಿದ್ದಾಗಿದೆ ಎಂದು ನ್ಯಾಯಾಲಯ ಹೇಳಿದೆ.

  • ನಿವೃತ್ತಿಯ ಬಳಿಕ ರಾಜ್ಯಸಭೆಗೆ ನಾಮನಿರ್ದೇಶನ ಹೊಂದುವ ದೃಷ್ಟಿಯಿಂದ ಮಾಜಿ ಮುಖ್ಯ ನ್ಯಾಯಮೂರ್ತಿಯೊಬ್ಬರು ತೀರ್ಪು ನೀಡಿದ್ದಾರೆ. ಇದು ಭ್ರಷ್ಟಾಚಾರ ಮತ್ತು ಹೊಂದಾಣಿಕೆಗೆ ಉದಾಹರಣೆ ಎಂದು ಉಲ್ಲೇಖಿಸಿದ್ದ ಕಾಟ್ಜು ಅವರ ವಾದಕ್ಕೆ ಪ್ರತಿಯಾಗಿ ಇಂಗ್ಲೆಂಡ್‌ ನ್ಯಾಯಾಲಯವು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನಿವೃತ್ತರಾದ ಬಳಿಕ ಕಾಟ್ಜು ಅವರು ಭಾರತೀಯ ಮಾಧ್ಯಮ ಮಂಡಳಿಯ ಅಧ್ಯಕ್ಷರಾಗಿದ್ದರು ಎಂದಿದೆ.

  • ಭಾರತದಲ್ಲಿ ನ್ಯಾಯಾಂಗ ಸ್ವತಂತ್ರವಾಗಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯ ಸಮ್ಮತ ವಿಚಾರಣೆ ಸಾಧ್ಯವಿಲ್ಲ ಎಂಬುದನ್ನು ಒಪ್ಪಲಾಗದು. ಎಂ.ಎಸ್. ಮಾಲ್ಕಮ್ ಮತ್ತು ಮಿಸ್ಟರ್ ಹರ್ನ್ ಅವರು ತಮ್ಮ ಅಂತಿಮ ಲಿಖಿತ ಸಲ್ಲಿಕೆಗಳಲ್ಲಿ ಭಾರತದ ಸಾಲಿಸಿಟರ್ ಜನರಲ್ ಮಾಡಿದ ಅವಲೋಕನಗಳನ್ನು ಸರಿಯಾಗಿ ನೆನಪಿಸಿದ್ದಾರೆ. ಭಾರತದಲ್ಲಿನ ಚಟುವಟಿಕೆಗಳನ್ನು ಲಿಖಿತ ಸಂವಿಧಾನದಿಂದ ನಿಯಂತ್ರಿಸಲಾಗುತ್ತದೆ, ಇದು ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದ ನಡುವೆ ಅಧಿಕಾರಗಳನ್ನು ಬೇರ್ಪಡಿಸುವ ಮೂಲಕ ನ್ಯಾಯಾಂಗ ಸ್ವಾತಂತ್ರ್ಯದ ಮೂಲಭೂತ ತತ್ವವನ್ನು ಹೊಂದಿದೆ ಎಂದು ಪೀಠ ಹೇಳಿದೆ.

Kannada Bar & Bench
kannada.barandbench.com