ಸೂಕ್ತ ಸಮಯದಲ್ಲಿ ನೀರವ್ ಮೋದಿ, ಮಲ್ಯ, ಚೋಕ್ಸಿ ಬಂಧನ ಮಾಡದಿದ್ದರಿಂದ ಅವರು ದೇಶದಿಂದ ಪಲಾಯನ ಮಾಡಿದರು: ಮುಂಬೈ ನ್ಯಾಯಾಲಯ

ಇ ಡಿ ಮೂಲಭೂತವಾಗಿ ಯಾವ ಕೆಲವನ್ನು ಮಾಡುವಲ್ಲಿ ವಿಫಲವಾಯಿತೋ ಅದನ್ನು ತಾನು ಮಾಡಲಾಗದು ಎಂದು ನ್ಯಾಯಾಲಯ ಇದೇ ವೇಳೆ ಕುಟುಕಿತು.
Vijay Mallya, Nirav Modi, Mehul Choksi
Vijay Mallya, Nirav Modi, Mehul Choksi

ಉದ್ಯಮಿಗಳಾದ ನೀರವ್ ಮೋದಿ, ವಿಜಯ್ ಮಲ್ಯ ಮತ್ತು ಮೆಹುಲ್ ಚೋಕ್ಸಿ ಅವರನ್ನು ಸೂಕ್ತ ಸಮಯಕ್ಕೆ ಬಂಧಿಸುವಲ್ಲಿ ತನಿಖಾ ಸಂಸ್ಥೆಗಳು ವಿಫಲವಾದ ಕಾರಣ ಅವರು ದೇಶದಿಂದ ಪಲಾಯನ ಮಾಡಲು ಸಾಧ್ಯವಾಯಿತು ಎಂದು ಮುಂಬೈ ನ್ಯಾಯಾಲಯ ಮೇ 3ರಂದು ಹೇಳಿದೆ [ವ್ಯೋಮೇಶ್ ಶಾ ಮತ್ತು ಇ ಡಿ ನಡುವಣ ಪ್ರಕರಣ].

ವೃತ್ತಿಪರ ಕಾರಣಗಳಿಗಾಗಿ ವಿದೇಶಕ್ಕೆ ಪ್ರಯಾಣಿಸಲು ಜಾಮೀನು ಷರತ್ತು ಸಡಿಲಿಸುವಂತೆ ಕೋರಿ ಆರೋಪಿಯೊಬ್ಬರು ಸಲ್ಲಿಸಿದ ಮನವಿಯ ವಿಚಾರಣೆ ವೇಳೆ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ ಜಿ ದೇಶಪಾಂಡೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಅರ್ಜಿಗೆ ವಿರೋಧ ವ್ಯಕ್ತಪಡಿಸಿದ ಜಾರಿ ನಿರ್ದೇಶನಾಲಯದ (ಇ ಡಿ) ವಿಶೇಷ ಪ್ರಾಸಿಕ್ಯೂಟರ್ ಸುನಿಲ್ ಗೊನ್ಸಾಲ್ವೇಸ್‌ ಅವರು ಅಂತಹ ಮನವಿಗೆ ಸಮ್ಮತಿಸಿದರೆ ‘ನೀರವ್ ಮೋದಿ, ವಿಜಯ್ ಮಲ್ಯ ಮತ್ತು ಮೆಹುಲ್ ಚೋಕ್ಸಿʼ ರೀತಿಯ ಪರಿಸ್ಥಿತಿ ಉದ್ಭವಿಸುತ್ತದೆ ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು ಪರಾರಿಯಾಗಿರುವ ಮೂವರು ಉದ್ಯಮಿಗಳಂತಹ ವ್ಯಕ್ತಿಗಳನ್ನು ಬಂಧಿಸುವಲ್ಲಿ ತನಿಖಾ ಸಂಸ್ಥೆಗಳು ವಿಫಲವಾದ ಕಾರಣ ಅವರು ಭಾರತದಿಂದ ಪಲಾಯನ ಮಾಡಲು ಸಾಧ್ಯವಾಯಿತು ಎಂದು ಛೀಮಾರಿ ಹಾಕಿದರು.

"ನಾನು ಈ ವಾದವನ್ನು ಚಿಂತನಶೀಲವಾಗಿ ಪರಿಶೀಲಿಸಿದ್ದು ಸೂಕ್ತ ಸಮಯದಲ್ಲಿ ಅವರನ್ನು ಬಂಧಿಸದ ತನಿಖಾ ಸಂಸ್ಥೆಗಳ ವೈಫಲ್ಯದಿಂದಾಗಿ ಈ ಎಲ್ಲ ವ್ಯಕ್ತಿಗಳು ಪಲಾಯನ ಮಾಡಿದ್ದಾರೆ ಎಂಬುದನ್ನು ಗಮನಿಸುವುದು ಅಗತ್ಯ" ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ದಾಖಲಿಸಿದ್ದಾರೆ.

ಪ್ರಸ್ತುತ ಬ್ರಿಟನ್‌ನಲ್ಲಿ ನೆಲೆಸಿರುವ ನೀರವ್ ಮೋದಿ ಮತ್ತು ವಿಜಯ್ ಮಲ್ಯ ಅವರನ್ನು ಮುಂಬೈನ ನ್ಯಾಯಾಲಯಗಳು ಬೃಹತ್ ಮೊತ್ತದ ಹಗರಣಗಳಲ್ಲಿ ಪರಾರಿಯಾದ ಆರ್ಥಿಕ ಅಪರಾಧಿಗಳು (ಎಫ್‌ಇಒ) ಎಂದು ಘೋಷಿಸಿವೆ. ಚೋಕ್ಸಿ ಪ್ರಸ್ತುತ ಡೊಮಿನಿಕಾದಲ್ಲಿದ್ದು ಅವರನ್ನು ಎಫ್‌ಇಒ ಎಂದು ಘೋಷಿಸಲು ಇ ಡಿ ಅರ್ಜಿ ಸಲ್ಲಿಸಿದೆ.

ನ್ಯಾಯಾಧೀಶ ದೇಶಪಾಂಡೆ ಅವರೆದುರು ಸಲ್ಲಿಸಲಾದ ಪ್ರಸ್ತುತ ಮನವಿ 2022ರ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ವ್ಯೋಮೇಶ್ ಶಾಗೆ ಸಂಬಂಧಿಸಿದೆ.

ಇ ಡಿ ಸಲ್ಲಿಸಿದ್ದ ಆರೋಪಪಟ್ಟಿಯನ್ನು ನ್ಯಾಯಾಲಯ ಪರಿಗಣಿಸಿದ ಬಳಿಕ ಶಾ ಅವರಿಗೆ ಸಮನ್ಸ್ ನೀಡಲಾಗಿತ್ತು. ಜೂನ್ 7, 2022 ರಂದು ನ್ಯಾಯಾಲಯಕ್ಕೆ ಶಾ ನ್ಯಾಯಾಲಯಕ್ಕೆ ಹಾಜರಾಗಿದ್ದರು. ತನ್ನ ಅನುಮತಿಯಿಲ್ಲದೆ ದೇಶ ಬಿಟ್ಟು ಹೋಗಬಾರದು ಎಂದು ತಿಳಿಸಿದ್ದ ನ್ಯಾಯಾಲಯ ಷರತ್ತುಬದ್ಧ ಜಾಮೀನಿನ ಆಧಾರದಲ್ಲಿ ಅವರನ್ನು ಬಿಡುಗಡೆ ಮಾಡಿತ್ತು. ಈ ಷರತ್ತನ್ನು ಬದಲಿಸುವಂತೆ ಕೋರಿ ಶಾ ಪ್ರಸ್ತುತ ಅರ್ಜಿ ಸಲ್ಲಿಸಿದ್ದರು.

ತನ್ನ ಕೆಲಸಕ್ಕಾಗಿ ಗ್ರಾಹಕರನ್ನು ಅರಸಿ ವಿವಿಧ ದೇಶಗಳಲ್ಲಿ ಕೆಲಸ ಮಾಡಬೇಕಾಗಿರುವುದರಿಂದ ಪ್ರತಿ ಬಾರಿಯೂ ನ್ಯಾಯಾಲಯದ ಅನುಮತಿ ಪಡೆಯುವುದು ಕಾರ್ಯಸಾಧುವಲ್ಲ ಎಂದು ಅವರು ವಾದಿಸಿದರು. ಅರ್ಜಿಯನ್ನು ಪರಿಗಣಿಸಿದ ನ್ಯಾ. ದೇಶಪಾಂಡೆ ಅವರು ಅರ್ಜಿದಾರರ ಮನವಿಗೆ ಸಮ್ಮತಿ ನೀಡಿದರು.

ಇ ಡಿ ಮಾಡದೆ ಇರುವುದನ್ನು (ಆರೋಪಿಗಳು ತಪ್ಪಿಸಿಕೊಳ್ಳದಂತೆ ತಡೆಯುವುದನ್ನು) ತಾನು ಮಾಡಲು ಆಗದು ಎಂದು ನ್ಯಾಯಾಲಯ ಇದೇ ವೇಳೆ ಕುಟುಕಿತು.

ಆರೋಪಿ  ವಿದೇಶಕ್ಕೆ ಪಯಣಿಸುವ, ಸಾಕ್ಷ್ಯ ನಾಶ ಮಾಡುವ, ಅಡ್ಡಿಪಡಿಸುವ, ಪಲಾಯನ ಮಾಡುವ, ದೂರುದಾರರೊಂದಿಗೆ ರಾಜಿಯಾಗುವ ಯಾವುದೇ ಆತಂಕ ಇಲ್ಲದೆ ಇ ಡಿ ಮೂಲಭೂತವಾಗಿ ಅಂತಹವರನ್ನು ಮುಕ್ತವಾಗಿ ಬಿಟ್ಟಿರುತ್ತದೆ. ಆದರೆ ಮೊದಲ ಬಾರಿಗೆ ಅಂತಹ ವ್ಯಕ್ತಿ ನ್ಯಾಯಾಲಯದೆದುರು ಹಾಜರಾದಾಗ ಈ ಎಲ್ಲಾ ವಿವಾದ ಮತ್ತು ಆಕ್ಷೇಪಗಳು ತಲೆ ಎತ್ತುತ್ತವೆ. ಹಾಗಾಗಿ ಮೂಲಭೂತವಾಗಿ ಯಾವ ಕೆಲವನ್ನು ಮಾಡುವಲ್ಲಿ ಇ ಡಿ ವಿಫಲವಾಯಿತೋ ಅದನ್ನು ತಾನು ಮಾಡಲಾಗದು ಎಂದು ನ್ಯಾಯಾಲಯ ಪದೇ ಪದೇ ದೃಢ ನಿಲುವು ತೆಗೆದುಕೊಳ್ಳುತ್ತಿರುವುದಾಗಿ ನ್ಯಾಯಾಧೀಶರು ತಿಳಿಸಿದರು.

ಅರ್ಜಿದಾರರಿಗೆ ಪರಿಹಾರ ಕಲ್ಪಿಸಿದ ನ್ಯಾಯಾಲಯ ಪ್ರತಿ ವಿದೇಶ ಪ್ರವಾಸಕ್ಕೂ ಮುನ್ನ ಶಾ ತಮ್ಮ ಪ್ರಯಾಣದ ವಿವರವನ್ನು ಇ ಡಿಗೆ ತಿಳಿಸಬೇಕು ಎಂದು ಆದೇಶಿಸಿತು. ಶಾ ಪರವಾಗಿ ಹಿರಿಯ ವಕೀಲರಾದ ಅಬಾದ್ ಪೊಂಡಾ, ಸಜಲ್ ಯಾದವ್ ಹಾಗೂ ಆಯುಷಾ ಗೇರುಜಾ ವಾದ ಮಂಡಿಸಿದರು.

Kannada Bar & Bench
kannada.barandbench.com