
ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆಯ ಸೆಕ್ಷನ್ 2(ಎಚ್) ಪ್ರಕಾರ ನಿರ್ಮಿತಿ ಕೇಂದ್ರಗಳು ಸಾರ್ವಜನಿಕ ಪ್ರಾಧಿಕಾರ ಎಂಬ ಅರ್ಹತೆ ಪಡೆದಿದ್ದು, ಕಾಯಿದೆ ಅಡಿಯಲ್ಲಿ ಲಭ್ಯವಿರುವ ಮಾಹಿತಿ ಬಹಿರಂಗಪಡಿಸಲು ಬದ್ಧವಾಗಿರುತ್ತದೆ ಎಂದು ಸ್ಪಷ್ಟಪಡಿಸಿರುವ ಕರ್ನಾಟಕ ಹೈಕೋರ್ಟ್, ಮಾಹಿತಿ ನಿರಾಕರಿಸಿದ್ದ ಚಿತ್ರದುರ್ಗದ ನಿರ್ಮಿತಿ ಕೇಂದ್ರಕ್ಕೆ ₹50 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಆರ್‌ಟಿಐ ಅಡಿಯಲ್ಲಿ ಕೋರಲಾಗಿದ್ದ ಮಾಹಿತಿ ಒದಗಿಸುವಂತೆ ರಾಜ್ಯ ಮಾಹಿತಿ ಹಕ್ಕು ಆಯೋಗ ನೀಡಿದ್ದ ಆದೇಶ ಪ್ರಶ್ನಿಸಿ ಚಿತ್ರದುರ್ಗದ ನಿರ್ಮಿತಿ ಕೇಂದ್ರದ ಸಾರ್ವಜನಿಕ ಮಾಹಿತಿ ಅಧಿಕಾರಿ (ಪಿಐಒ) ಹಾಗೂ ಯೋಜನಾ ನಿರ್ದೇಶಕರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಇತ್ತೀಚೆಗೆ ವಜಾಗೊಳಿಸಿದೆ.
ಎಲ್ಲ ಸರ್ಕಾರಿ ಕಚೇರಿಗಳು ಮತ್ತು ಇಲಾಖೆಗಳು ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಗೆ ಒಳಪಟ್ಟಿರಲಿದ್ದು, ಕಾಯಿದೆ ಅಡಿ ಕೋರಿದ ಮಾಹಿತಿ ಲಭ್ಯವಾಗುವಂತೆ ಮಾಡಬೇಕಾಗುತ್ತದೆ. ಈ ಪ್ರಕರಣದಲ್ಲಿ ಪಾರದರ್ಶಕತೆಯನ್ನು ನಿಗ್ರಹಿಸಲು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಮಾಡಿದ ಪ್ರಯತ್ನ ಒಪ್ಪುವಂಥದ್ದಲ್ಲ ಎಂದಿರುವ ನ್ಯಾಯಾಲಯವು ಅರ್ಜಿದಾರರಿಗೆ 50 ಸಾವಿರ ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಆದೇಶದ ಪ್ರತಿ ದೊರೆತ ಮೂರು ವಾರಗಳ ಒಳಗೆ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ (ಕೆಎಸ್‌ಎಲ್‌ಎಸ್‌ಎ) ಪಾವತಿಸಬೇಕು ಎಂದು ಆದೇಶಿಸಿದೆ.
ಸರ್ಕಾರದಿಂದ ಆರ್ಥಿಕ ನೆರವು: ನಿರ್ಮಿತಿ ಕೇಂದ್ರದ ನಿಯಂತ್ರಣ ಮತ್ತು ಮೇಲ್ವಿಚಾರಣೆಯನ್ನು ಸರ್ಕಾರಿ ಅಧಿಕಾರಿಗಳು ನಡೆಸುತ್ತಾರೆ. ಸರ್ಕಾರಿ ಸಂಸ್ಥೆಯೇ ಆಗಿರುವ ವಸತಿ ಮತ್ತು ನಗರಾಭಿವೃದ್ಧಿ ನಿಗಮದಿಂದ (ಹುಡ್ಕೊ) ನಿರ್ಮಿತಿ ಕೇಂದ್ರಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ. ಈ ಹಣವನ್ನು ಸಾರ್ವಜನಿಕ ಕಾರ್ಯಗಳ ಅನುಷ್ಠಾನಕ್ಕೆ ಬಳಸಲಾಗುತ್ತದೆ. ಆದ್ದರಿಂದ, ನಿರ್ಮಿತಿ ಕೇಂದ್ರಗಳು ನಿರ್ವಹಿಸುವ ಕೆಲಸಗಳನ್ನೂ ಸರ್ಕಾರಿ ಕೆಲಸಗಳು ಎಂದು ಪರಿಗಣಿಸಲಾಗುತ್ತದೆ. ಸರ್ಕಾರದಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಆರ್ಥಿಕ ನೆರವು ಪಡೆಯುವ ಯಾವುದೇ ಸಂಸ್ಥೆ ಸಾರ್ವಜನಿಕ ಪ್ರಾಧಿಕಾರವಾಗುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಶಿಫಾರಸ್ಸಿನ ಮೇರೆಗೆ ನಿರ್ಮಿತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಿರ್ಮಿತಿ ಕೇಂದ್ರದ ಕೆಲಸಗಳ ಮೇಲ್ವಿಚಾರಣೆಗಾಗಿ ಕಾರ್ಯದರ್ಶಿಗಳು, ಮುಖ್ಯ ಇಂಜಿನಿಯರ್‌ಗಳು ಇನ್ನಿತರ ಸರ್ಕಾರಿ ಅಧಿಕಾರಿಗಳನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ. ನಿರ್ಮಿತಿ ಕೇಂದ್ರದ ದೈನಂದಿನ ಚಟುವಟಿಕೆಯನ್ನು ರಾಜ್ಯ ಸರ್ಕಾರಕ್ಕೆ ಸೇರಿದ ಅಧಿಕಾರಿಗಳು ನಡೆಸುತ್ತಾರೆ, ಅವರಲ್ಲಿ ಹಲವರು ಭಾರತೀಯ ಆಡಳಿತ ಸೇವೆ (ಐಎಎಸ್) ಮತ್ತು ಕರ್ನಾಟಕ ಆಡಳಿತ ಸೇವೆಗೆ (ಕೆಎಎಸ್) ಸೇರಿದವರಾಗಿದ್ದಾರೆ. ಇದರಿಂದ, ನಿರ್ಮಿತಿ ಕೇಂದ್ರ ಸಂಪೂರ್ಣವಾಗಿ ಸರ್ಕಾರದ ನಿಯಂತ್ರಣದಲ್ಲಿದೆ ಎನ್ನುವುದು ಸ್ಪಷ್ಟವಾಗಿದೆ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಭಾರತ ಕೃಷಿಕ ಸಮಾಜದ ಅಧ್ಯಕ್ಷ ಎಚ್ ಆರ್ ತಿಮ್ಮಯ್ಯ ಆರ್‌ಟಿಐ ಕಾಯಿದೆ ಅಡಿ ಅರ್ಜಿ ಸಲ್ಲಿಸಿ, ನಿರ್ಮಿತಿ ಕೇಂದ್ರದ ಆರ್ಥಿಕ ವಹಿವಾಟಿಗೆ ಸಂಬಂಧಿಸಿದ ಮಾಹಿತಿ ಕೋರಿದ್ದರು. ನಿರ್ಮಿತಿ ಕೇಂದ್ರ ಸಾರ್ವಜನಿಕ ಪ್ರಾಧಿಕಾರವಲ್ಲ. ಆದ್ದರಿಂದ, ಮಾಹಿತಿ ಒದಗಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಇದನ್ನು ರಾಜ್ಯ ಮಾಹಿತಿ ಆಯೋಗದಲ್ಲಿ ಪ್ರಶ್ನಿಸಲಾಗಿತ್ತು.
ವಿಚಾರಣೆ ನಡೆಸಿದ್ದ ರಾಜ್ಯ ಮಾಹಿತಿ ಆಯುಕ್ತರು, ತಿಮ್ಮಯ್ಯ ಅವರು ಕೋರಿರುವ ಮಾಹಿತಿ ನೀಡುವಂತೆ ನಿರ್ಮಿತಿ ಕೇಂದ್ರಕ್ಕೆ ನಿರ್ದೇಶಿಸಿದ್ದರಲ್ಲದೆ, ₹25 ಸಾವಿರ ದಂಡವನ್ನೂ ವಿಧಿಸಿ, 2017ರ ಆಗಸ್ಟ್ 29ರಂದು ಆದೇಶ ಹೊರಡಿಸಿದ್ದರು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.