ನಿಠಾರಿ ಹತ್ಯೆ: ಗಲ್ಲು ಶಿಕ್ಷೆಗೊಳಗಾಗಿದ್ದ ಆರೋಪಿಗಳನ್ನು ಕೆಲ ಪ್ರಕರಣಗಳಲ್ಲಿ ಖುಲಾಸೆಗೊಳಿಸಿದ ಅಲಾಹಾಬಾದ್ ಹೈಕೋರ್ಟ್

ನಿಠಾರಿ ಕೊಲೆ ಪ್ರಕರಣಗಳು 2005 ಮತ್ತು 2006ರ ನಡುವೆ ನಡೆದಿದ್ದು ಡಿಸೆಂಬರ್ 2006ರಲ್ಲಿ ನೋಯ್ಡಾದ ನಿಠಾರಿ ಗ್ರಾಮದ ಮನೆ ಸಮೀಪ ಇದ್ದ ಚರಂಡಿಯಲ್ಲಿ ಅಸ್ಥಿಪಂಜರಗಳು ಪತ್ತೆಯಾಗುವ ಮೂಲಕ ಪ್ರಕರಣ ಬೆಳಕಿಗೆ ಬಂದಿತ್ತು.
Allahabad High Court, Nithari Killings
Allahabad High Court, Nithari Killings
Published on

ನೊಯಿಡಾದ ನಿಠಾರಿಯಲ್ಲಿ 2005-2006ರ ನಡುವೆ ನಡೆದ ಸರಣಿ ಹತ್ಯೆಗಳಿಗೆ ಸಂಬಂಧಿಸಿದ ಕೆಲ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಮೊನಿಂದರ್ ಸಿಂಗ್ ಪಂಧೇರ್ ಮತ್ತು ಆತನ ಮನೆ ಸಹಾಯಕ ಸುರೇಂದ್ರ ಕೋಲಿಯನ್ನು ಅಲಾಹಾಬಾದ್‌ ಹಕೋರ್ಟ್‌ ಸೋಮವಾರ ಖುಲಾಸೆಗೊಳಿಸಿದೆ.

ಗಮನಾರ್ಹವೆಂದರೆ ಕೋಲಿಯನ್ನು 12 ಪ್ರಕರಣಗಳಲ್ಲಿ, ಪಂಧೇರ್‌ನನ್ನು ಎರಡು ಪ್ರಕರಣಗಳಲ್ಲಿ ಖುಲಾಸೆಗೊಳಿಸಲಾಗಿದೆ. ಈ ಹಿಂದೆ ಅವರನ್ನು ಈ ಪ್ರಕರಣಗಳಲ್ಲಿ ತಪ್ಪಿತಸ್ಥರು ಎಂದು ಪರಿಗಣಿಸಿ ವಿಚಾರಣಾ ನ್ಯಾಯಾಲಯ ಮರಣ ದಂಡನೆ ವಿಧಿಸಿತ್ತು.

ಸೆಪ್ಟೆಂಬರ್‌ನಲ್ಲಿ ತೀರ್ಪನ್ನು ಕಾಯ್ದಿರಿಸಿದ್ದ  ನ್ಯಾಯಮೂರ್ತಿಗಳಾದ ಅಶ್ವನಿ ಕುಮಾರ್ ಮಿಶ್ರಾ ಮತ್ತು ಎಸ್‌ ಎ ಎಚ್ ರಿಜ್ವಿ ಅವರಿದ್ದ ಹೈಕೋರ್ಟ್ ಪೀಠ ಇಂದು ಇಬ್ಬರೂ ಅಪರಾಧಿಗಳ ಮೇಲ್ಮನವಿಯನ್ನು ಪುರಸ್ಕರಿಸಿತು. ಪಂಧೇರ್‌ ಪರ ವಕೀಲರಾದ ಮನೀಷಾ ಭಂಡಾರಿ, ಕೋಲಿ ಪರ ವಕೀಲ ಪಯೋಶಿ ರಾಯ್‌ ವಾದ ಮಂಡಿಸಿದ್ದರು. ತೀರ್ಪಿನ ಪ್ರತಿ ಇನ್ನಷ್ಟೇ ದೊರೆಯಬೇಕಿದೆ.

ನಿಠಾರಿ ಕೊಲೆ ಪ್ರಕರಣಗಳು 2005 ಮತ್ತು 2006ರ ನಡುವೆ ನಡೆದಿದ್ದವು. ಪುಟ್ಟ ಮಕ್ಕಳು ಸೇರಿದಂತೆ ಹೆಣ್ಣುಮಕ್ಕಳನ್ನು ಮನೆಗೆ ಕರೆತಂದು ಬರ್ಬರವಾಗಿ ಹತ್ಯೆ ಮಾಡಿದ ಆರೋಪ ಇವರಿಬ್ಬರ ಮೇಲಿತ್ತು. ಡಿಸೆಂಬರ್ 2006ರಲ್ಲಿ ನೋಯ್ಡಾದ ನಿಠಾರಿ ಗ್ರಾಮದ ಮೋನಿಂದರ್‌ ಸಿಂಗ್‌ ಪಂಧೇರ್‌ ಮನೆ ಸಮೀಪ ಇದ್ದ ಚರಂಡಿಯಲ್ಲಿ ಅಸ್ಥಿಪಂಜರಗಳು ಪತ್ತೆಯಾಗುವ ಮೂಲಕ ಪ್ರಕರಣ ಬೆಳಕಿಗೆ ಬಂದಿತ್ತು. ಕೋಲಿ ಪಂಧೇರ್‌ನ ಮನೆ ಸಹಾಯಕನಾಗಿದ್ದ. ಕೊಲೆ, ಅಪಹರಣ, ಅತ್ಯಾಚಾರ ಹಾಗೂ ಸಾಕ್ಷ್ಯ ನಾಶ ಸೇರಿದಂತೆ ವಿವಿಧ ಆರೋಪಗಳನ್ನು ಕೋಲಿ ವಿರುದ್ಧ ಮಾಡಲಾಗಿತ್ತು. ಪಂಧೇರ್‌ ಅಕ್ರಮ ಮಕ್ಕಳ ಕಳ್ಳಸಾಗಣಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ.

ವಿವಿಧ ಹೆಣ್ಣುಮಕ್ಕಳ ಮೇಲೆ ಅನೇಕ ಬಾರಿ ಹತ್ಯೆ ಮತ್ತು ಕೊಲೆ ಮಾಡಿದ ಆರೋಪಿ ಕೋಲಿ ಎಂದು ಕೊನೆಗೆ ಸಾಬೀತಾಗಿ 10 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮರಣದಂಡನೆ ವಿಧಿಸಲಾಗಿತ್ತು. ಪಂಧೇರ್‌ ಕೆಲ ಪ್ರಕರಣಗಳಲ್ಲಿ ತಪ್ಪಿತಸ್ಥ ಎಂದು ಘೋಷಿಸಲಾಗಿತ್ತು.

ಕ್ಷಮಾದಾನ ಕೋರಿ ಕೋಲಿ ಸಲ್ಲಿಸಿದ್ದ ಅರ್ಜಿಯಲ್ಲಿ ತೀರ್ಪು ನೀಡುವ ಸಂಬಂಧ ಭಾರೀ ವಿಳಂಬವಾಗಿದೆ ಎಂಬ ಕಾರಣಕ್ಕೆ ಅಲಾಹಾಬಾದ್‌ ಹೈಕೋರ್ಟ್‌ ನ್ಯಾಯಾಲಯ 28 ಜನವರಿ 2015ರಂದು ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿತ್ತು.

ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್‌ ಸಲ್ಲಿಸಿದ್ದ ಅರ್ಜಿ ಸಂಬಂಧ ಅಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ (ಈಗ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ (ನಿವೃತ್ತರು) ಪಿ ಕೆ ಎಸ್ ಬಾಘೆಲ್ ಅವರಿದ್ದ ಪೀಠ  ಈ ತೀರ್ಪು ಪ್ರಕಟಿಸಿತ್ತು.

Kannada Bar & Bench
kannada.barandbench.com