

ರಾಷ್ಟ್ರ ರಾಜಧಾನಿ ದೆಹಲಿಗೆ ಹೊಂದಿಕೊಂಡಂತಿರುವ ನೊಯಿಡಾದ ನಿಠಾರಿ ಗ್ರಾಮದಲ್ಲಿ 2005-2006ರಲ್ಲಿ ನಡೆದಿದ್ದ ಮಕ್ಕಳ ಸರಣಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿ ಸುರೇಂದ್ರ ಕೋಲಿಯನ್ನು 15 ವರ್ಷದ ಬಾಲಕಿಯ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಖುಲಾಸೆಗೊಳಿಸಿದೆ.
15 ವರ್ಷದ ಬಾಲಕಿಯ ಹತ್ಯೆಗೆ ಸಂಬಂಧಿಸಿದಂತೆ ಕೋಲಿಯ ಶಿಕ್ಷೆಯನ್ನು ಫೆಬ್ರವರಿ 2011ರಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಆದರೆ, ಅಲಹಾಬಾದ್ ಹೈಕೋರ್ಟ್ ಉಳಿದ 12 ಪ್ರಕರಣಗಳಲ್ಲಿ ತನ್ನನ್ನು ಖುಲಾಸೆಗೊಳಿಸಿದ ಹಿನ್ನೆಲೆಯಲ್ಲಿ, ಕೋಲಿ ಈ ವರ್ಷ ಮತ್ತೆ ಕ್ಯುರೇಟಿವ್ ಅರ್ಜಿಯೊಂದಿಗೆ ಸುಪ್ರೀಂ ಕೋರ್ಟ್‌ಗೆ ಎಡತಾಕಿದ್ದ.
ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ , ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ವಿಕ್ರಮ್ ನಾಥ್ ಅವರಿದ್ದ ಪೀಠ ಕೋಲಿ ಅವರನ್ನು ಖುಲಾಸೆಗೊಳಿಸಿದ್ದು ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಆತ ಕೊನೆಯ ಪ್ರಕರಣದಲ್ಲಿಯೂ ಆರೋಪಮುಕ್ತನಾದಂತಾಗಿದೆ.
"ಅರ್ಜಿದಾರ ಆರೋಪಗಳಿಂದ ಖುಲಾಸೆಗೊಂಡಿದ್ದಾರೆ. ಅರ್ಜಿದಾರರನ್ನು ತಕ್ಷಣವೇ ಬಿಡುಗಡೆ ಮಾಡಬೇಕು" ಎಂದು ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ವಿಕ್ರಮ್ ನಾಥ್ ಹೇಳಿದರು.
ಕೇವಲ ಹೇಳಿಕೆ ಮತ್ತು ಅಡುಗೆ ಚಾಕು ವಶಪಡಿಸಿಕೊಂಡ ಆಧಾರದ ಮೇಲೆ ಶಿಕ್ಷೆ ವಿಧಿಸಲಾಗಿದೆ ಎಂದು ಅಕ್ಟೋಬರ್ 7ರಂದು ಕೋಲಿ ಅವರ ಕ್ಯುರೇಟಿವ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ , ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಉಳಿದ ಪ್ರಕರಣಗಳಲ್ಲಿ ಖುಲಾಸೆಗೊಂಡಿರುವುದರಿಂದ ಅಸಂಗತ ಪರಿಸ್ಥಿತಿ ತಲೆದೋರಿದೆ ಎಂದು ಅದು ಹೇಳಿತ್ತು.
ನಿಠಾರಿ ಹತ್ಯಾಕಾಂಡ 2005- 2006ರಲ್ಲಿ ನಡೆದಿತ್ತು. ಪುಟ್ಟ ಮಕ್ಕಳು ಸೇರಿದಂತೆ ಹೆಣ್ಣುಮಕ್ಕಳನ್ನು ಮನೆಗೆ ಕರೆತಂದು ಬರ್ಬರವಾಗಿ ಹತ್ಯೆ ಮಾಡಿದ ಆರೋಪ ಮೊನಿಂದರ್ ಸಿಂಗ್ ಮತ್ತು ಸುರೇಂದ್ರ ಕೋಲಿ ಮೇಲಿತ್ತು. ಡಿಸೆಂಬರ್ 2006ರಲ್ಲಿ ನೋಯ್ಡಾದ ನಿಠಾರಿ ಗ್ರಾಮದ ಮೊನಿಂದರ್ ಸಿಂಗ್ ಪಂಧೇರ್ ಮನೆ ಸಮೀಪ ಇದ್ದ ಚರಂಡಿಯಲ್ಲಿ ಅಸ್ಥಿಪಂಜರಗಳು ಪತ್ತೆಯಾಗಿದ್ದವು.
ಕೋಲಿ ಪಂಧೇರ್ ಮನೆಯಲ್ಲಿ ಸಹಾಯಕನಾಗಿದ್ದ. ಕೊಲೆ, ಅಪಹರಣ, ಅತ್ಯಾಚಾರ ಹಾಗೂ ಸಾಕ್ಷ್ಯ ನಾಶ ಸೇರಿದಂತೆ ವಿವಿಧ ಆರೋಪಗಳನ್ನು ಕೋಲಿ ವಿರುದ್ಧ ಮಾಡಲಾಗಿತ್ತು. ಪಂಧೇರ್ ಮಕ್ಕಳ ಅಕ್ರಮ ಕಳ್ಳಸಾಗಣಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ. ಕಡೆಗೆ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಹಲವು ಪ್ರಕರಣಗಳನ್ನು ದಾಖಲಿಸಿತ್ತು.
ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮರಣದಂಡನೆಯನ್ನು ಅಕ್ಟೋಬರ್ 2023ರಲ್ಲಿ ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್ ನಿಠಾರಿ ಹತ್ಯಾಕಾಂಡಕ್ಕೆ ಸಂಬಂಧಿಸಿದ ವಿವಿಧ ಪ್ರಕರಣಗಳಲ್ಲಿ ಪಂಧೇರ್ ಮತ್ತು ಕೋಲಿಯನ್ನು ಖುಲಾಸೆಗೊಳಿಸಿತ್ತು. ಹೀಗಾಗಿ ಸಿಬಿಐ ಮತ್ತು ಸಂತ್ರಸ್ತರ ಕುಟುಂಬಗಳು ಒಟ್ಟು 14 ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದವು. ಜುಲೈ 31ರಂದು ಸುಪ್ರೀಂ ಕೋರ್ಟ್ ಮೇಲ್ಮನವಿಗಳನ್ನು ವಜಾಗೊಳಿಸಿತ್ತು. ಇದೀಗ 15 ವರ್ಷದ ಬಾಲಕಿ ಹತ್ಯೆ ಪ್ರಕರಣದಲ್ಲಿ ಕೋಲಿ ಖುಲಾಸೆಗೊಂಡಿರುವುದರಿಂದ ಆತ ಬಂಧಮುಕ್ತನಾಗಲಿದ್ದಾನೆ.