ಸುಪ್ರೀಂ ಕೋರ್ಟ್ ವಿರುದ್ಧ ದಾಳಿ ನಡೆಸುವ ಬದಲು ಎನ್‌ಜೆಎಸಿ ಕಾನೂನನ್ನು ಮರುರೂಪಿಸಿ: ಕೇಂದ್ರಕ್ಕೆ ದಾತಾರ್ ಕಿವಿಮಾತು

ʼಐವತ್ತು ವರ್ಷಗಳ ಮೂಲರಚನಾ ಸಿದ್ಧಾಂತ - ನ್ಯಾಯಾಂಗ ಅತಿಕ್ರಮಣ ಅಥವಾ ಸಾಂವಿಧಾನಿಕ ಅವಶ್ಯಕತೆʼ ಎಂಬ ವಿಷಯದ ಕುರಿತು ಹಿರಿಯ ವಕೀಲ ದಾತಾರ್ ಅವರು ನ್ಯಾ. ಪಿ ಡಿ ದೇಸಾಯಿ ಸ್ಮಾರಕ ಹತ್ತೊಂಬತ್ತನೇ ಉಪನ್ಯಾಸ ನೀಡಿದರು.
Supreme Court, Arvind Datar
Supreme Court, Arvind Datar

ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ನೇಮಕಕ್ಕೆ  2015ರಲ್ಲಿ ಕೇಂದ್ರ ಸರ್ಕಾರ ರೂಪಿಸಿದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಕಾರ್ಯಸಾಧುವಲ್ಲ ಎಂದು ಹಿರಿಯ ವಕೀಲ ಅರವಿಂದ ದಾತಾರ್ ಹೇಳಿದರು.

ನ್ಯಾ. ಪಿ ಡಿ ದೇಸಾಯಿ ಸ್ಮಾರಕ ಹತ್ತೊಂಬತ್ತನೇ ಉಪನ್ಯಾಸ ಕಾರ್ಯಕ್ರಮದಲ್ಲಿ ʼಐವತ್ತು ವರ್ಷಗಳ ಮೂಲರಚನಾ ಸಿದ್ಧಾಂತ - ನ್ಯಾಯಾಂಗ ಅತಿಕ್ರಮಣ ಅಥವಾ ಸಾಂವಿಧಾನಿಕ ಅವಶ್ಯಕತೆʼ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಎನ್‌ಜೆಎಸಿಯನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್‌ ಮೇಲೆ ದಾಳಿ, ಟೀಕೆ ಮಾಡುವ ಬದಲು ಆ ಕಾನೂನನ್ನು ಮರುರೂಪಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಸಂವಿಧಾನ ಮೂಲರಚನಾ ಸಿದ್ಧಾಂತದ ಭಾಗವಾಗಿರುವ ನ್ಯಾಯಾಂಗ ಸ್ವಾತಂತ್ರ್ಯವನ್ನು ಉಲ್ಲಂಘಿಸುವ ಕಾರಣಕ್ಕೆ 2015 ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ಎನ್‌ಜೆಎಸಿಗೆ ಸಂಬಂಧಿಸಿದ ತಿದ್ದುಪಡಿಗಳನ್ನು ರದ್ದುಗೊಳಿಸಿತ್ತು.

ಕೇಶವಾನಂದ ಭಾರತಿ ತೀರ್ಪನ್ನು ವಿವರವಾಗಿ ಪರಿಶೀಲಿಸಿದರೆ ಸಂವಿಧಾನ ಮೂಲರಚನಾ ಸಿದ್ಧಾಂತವು ನ್ಯಾಯಾಂಗ ಅತಿಕ್ರಮಣಕ್ಕೆ ದಾರಿ ಮಾಡಿಕೊಟ್ಟಿದೆ ಎಂಬ ಕಲ್ಪನೆಯೇ ಉಳಿಯುವುದಿಲ್ಲ ಎಂದು ಕೂಡ  ಅವರು ಹೇಳಿದರು.

ಕೇಶವಾನಂದ ಭಾರತಿ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಸಂವಿಧಾನದ ಕೆಲ ನಿಯಮಾವಳಿಗಳನ್ನು ಸರ್ಕಾರ ತಿದ್ದುಪಡಿ ಮಾಡುವಂತಿಲ್ಲ ಎಂದು ಸಂವಿಧಾನದ ಮೂಲರಚನಾ ಸಿದ್ಧಾಂತ ವಿವರಿಸುತ್ತದೆ.

ದಾತಾರ್‌ ಉಪನ್ಯಾಸದ ಪ್ರಮುಖ ಅಂಶಗಳು

  • ಮೂಲ ರಚನಾ ಸಿದ್ಧಾಂತ ಸರ್ಕಾರದ ಯಾವುದೇ ಅಭಿವೃದ್ಧಿ ಯತ್ನಗಳನ್ನು ಎಂದಿಗೂ ತಡೆಯಲಿಲ್ಲ. ಇಡಬ್ಲ್ಯೂಎಸ್‌ ಮೀಸಲಾತಿಗೆ ಸಂಬಂಧಿಸಿದ 103ನೇ ತಿದ್ದುಪಡಿಯೇ ಇದಕ್ಕೆ ಉದಾಹರಣೆ.

  • ಸಂವಿಧಾನ ಮೂಲರಚನಾ ಸಿದ್ಧಾಂತ ಅಡ್ಡಿ ಉಂಟು ಮಾಡಿದೆಯೇ? ನಾನೊಂದು ಸರಳ ಪ್ರಶ್ನೆ ಕೇಳುತ್ತೇನೆ. ಚುನಾಯಿತ ಸರ್ಕಾರ ಮಾಡಲು ಬಯಸುವ ಯಾವ ಪ್ರಸ್ತಾಪವನ್ನು ಮೂಲರಚನಾ ಸಿದ್ಧಾಂತ ಎಲ್ಲಾದರೂ ತಡೆ ಹಿಡಿದಿದೆಯೇ  ಮತ್ತು ಅದು ಸಾಮಾಜಿಕ ಅಭಿವೃದ್ಧಿಗೆ ಹೇಗೆ ಅಡ್ಡಿ ಉಂಟುಮಾಡಿದೆ ಎಂಬುದನ್ನು ನನಗೆ ತಿಳಿಸಿ.

  • ಸುಪ್ರೀಂ ಕೋರ್ಟ್ ಎಂದಿಗೂ ಸಾಮಾಜಿಕ ಸುಧಾರಣೆಯ ಹಾದಿಗೆ ಅಡ್ಡಗಾಲು ಹಾಕಿಲ್ಲ ಅಥವಾ ಮೀಸಲಾತಿ ಇಲ್ಲವೇ ಸಾಮಾಜಿಕ ನೀತಿಗಳನ್ನು ಜಾರಿಗೊಳಿಸುವ ಸಂಸತ್ತಿನ ಉದ್ದೇಶವನ್ನು ತಡೆ ಹಿಡಿದಿಲ್ಲ.

  • ಮೂಲರಚನಾ ಸಿದ್ಧಾಂತ ಮರುಪರಿಶೀಲಿಸಬೇಕೆಂದು ಹೇಳಲು ಬಯಸುವ ವಿಮರ್ಶಕರು ನನ್ನನ್ನು ಗೊಂದಲಗೊಳಿಸುತ್ತಿದ್ದಾರೆ. ಅವರು ಏನು ಹೇಳಬೇಕೆಂದು ಯತ್ನಿಸುತ್ತಿದ್ದಾರೆ?

  • ಕೇಶವಾನಂದ ಭಾರತಿ ತೀರ್ಪು ಸಂಸತ್ತಿಗೆ ದೊಡ್ಡ ತಡೆ ಎಂದೂ, ಅದರಿಂದ ನ್ಯಾಯಾಂಗ (ಶಾಸಕಾಂಗದ ಮೇಲೆ) ಅತಿಕ್ರಮಣ ಮಾಡುತ್ತಿದೆಯೆಂದೂ ನಾವೆಲ್ಲಾ ಭಾವಿಸುತ್ತೇವೆ. ತೀರ್ಪನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿದರೆ ಸರ್ಕಾರದ ಯಾವುದೇ ಅಭಿವೃದ್ಧಿ ಯತ್ನಗಳನ್ನು ಅದು ಎಂದಿಗೂ ತಡೆಯಲಿಲ್ಲ ಎಂಬುದು ಅರಿವಿಗೆ ಬರುತ್ತದೆ.

  • ಸಂವಿಧಾನದ 24ನೇ ವಿಧಿಯನ್ನು ಎತ್ತಿ ಹಿಡಿಯಲಾಯಿತು, 26ನೇ ವಿಧಿಯನ್ನು ಹಿಂದಕ್ಕೆ ಕಳಿಸಿ ನಂತರ ಎತ್ತಿಹಿಡಿಯಲಾಯಿತು. 29ನೇ ವಿಧಿಯನ್ನು ಎತ್ತಿಹಿಡಿಯಲಾಯಿತು. 25 ನೇ ವಿಧಿಯನ್ನೂ ಎತ್ತಿಹಿಡಿಯಲಾಯಿತು. 31ನೇ ವಿಧೀಯ ಎರಡನೇ ಭಾಗವನ್ನು ಮಾತ್ರ ರದ್ದುಗೊಳಿಸಲಾಯಿತು. ಇದನ್ನು ಈ ರೀತಿಯಾಗಿ ನೋಡಿದರೆ ನ್ಯಾಯಾಂಗ (ಶಾಸಕಾಂಗ ಅಥವಾ ಕಾರ್ಯಾಂಗವನ್ನು) ಅತಿಕ್ರಮಿಸುತ್ತಿದೆ ಎಂಬ ಆರೋಪ ಸಮರ್ಥನೀಯವಲ್ಲ.  

  • (ಮೂಲರಚನಾ ಸಿದ್ಧಾಂತದ ಕುರಿತು ಇತ್ತೀಚೆಗೆ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಮಾತನಾಡುತ್ತಾ) ಮೂಲರಚನಾ ಸಿದ್ಧಾಂತ ಅಸ್ತಿತ್ವಕ್ಕೆ ಬಂದ ನಂತರ ನಮ್ಮ ಸಂವಿಧಾನವನ್ನು ರಕ್ಷಿಸಲು ಅದನ್ನು ಹೇಗೆ ಬಳಸಬಹುದು ಎಂಬುದನ್ನು ನೋಡಿ. ಮೂಲರಚನಾ ಸಿದ್ಧಾಂತ ಅಸ್ತಿತ್ವಕ್ಕೆ ಬಂದ ತಕ್ಷಣವೇ ತುರ್ತುಪರಿಸ್ಥಿತಿ ಜಾರಿಗೆ ಬಂದಿತು. ಕಾನೂನಿಗಿಂತ ಯಾರೂ ಮಿಗಿಲಲ್ಲ ಎಂಬುದನ್ನು ಹೇಳಲು ಮೂಲರಚನಾ ಸಿದ್ಧಾಂತದಿಂದ ಸಾಧ್ಯವಾಯಿತು. ನೀವು ಪ್ರಧಾನಿಯಾದ ಮಾತ್ರಕ್ಕೆ ಚುನಾವಣೆಯಲ್ಲಿ ಏನು ಬೇಕಾದರೂ ಮಾಡಬಹುದು ಮತ್ತು ಅದನ್ನು ಪ್ರಶ್ನಿಸುವಂತಿಲ್ಲ ಎಂದರ್ಥವಲ್ಲ.

  • ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ ಅಥವಾ ರಾಜ್ಯಪಾಲರು ತಿದ್ದುಪಡಿ ಮಾಡಲಾದ 361ನೇ ವಿಧಿಯಡಿಯಲ್ಲಿ ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆಯಿಂದ ಜೀವಮಾನದ ವಿನಾಯಿತಿ ಪಡೆಯುತ್ತಾರೆ. ಒಬ್ಬ ವ್ಯಕ್ತಿ ಕೇವಲ ಒಂದು ದಿನ ರಾಜ್ಯಪಾಲನಾಗಿ ಕೊಲೆ ಮಾಡಿದರೂ ಆತನನ್ನು ವಿಚಾರಣೆಗೆ ಒಳಪಡಿಸುವಂತಿಲ್ಲ ಅದೃಷ್ಟವಶಾತ್‌ ಅಂತಹ ಸ್ಥಿತಿ ಎಂದಿಗೂ ಬಂದಿಲ್ಲ. ಆದರೆ ಒಂದು ವೇಳೆ ಆ ಸ್ಥಿತಿ ಬಂದರೆ ಆಗ 361ನೇ ವಿಧಿಯನ್ನು ರದ್ದುಪಡಿಸಬೇಕಾಗುತ್ತದೆ ಎಂದು ನಾನು ಧೈರ್ಯದಿಂದ ಹೇಳಬಲ್ಲೆ. ಇದಲ್ಲದೆ ಕೇಂದ್ರ ಸರ್ಕಾರದ ಕಾಯಿದೆಯನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸುವುದು ಕೂಡ ಇದರಿಂದ ಅಸಾಧ್ಯವಾಗುತ್ತದೆ.

  • ಕಾನೂನು ಆಳ್ವಿಕೆಯ ಪ್ರಮುಖ ಸ್ತಂಭ ಲಿಖಿತ ಸಂವಿಧಾನವಾಗಿದ್ದು,ಲಿಖಿತ ಸಂವಿಧಾನದ ಮುಖ್ಯ ಆಧಾರ ಸ್ತಂಭ ಎಂದರೆ ಅದು ಮೂಲರಚನಾ ಸಿದ್ಧಾಂತವಾಗಿದೆ.

Related Stories

No stories found.
Kannada Bar & Bench
kannada.barandbench.com