ಭೋಪಾಲ್‌ನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸಂಸ್ಥೆ ಹಾಗೂ ರಾಯಪುರದ ಹಿದಾಯತುಲ್ಲಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಸಹಯೋಗದಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಹಳೆಯ ವಿದ್ಯಾರ್ಥಿಗಳ ಒಕ್ಕೂಟ ಪ್ರತಿಷ್ಠಾನ (ಸಿಎಎನ್ ಪ್ರತಿಷ್ಠಾನ) 8 ಜುಲೈ 2023ರಂದು ನ್ಯಾಯಮೂರ್ತಿ ಎಚ್ ಆರ್ ಖನ್ನಾ ಸ್ಮಾರಕ 3ನೇ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಿದೆ.
ಭಾರತೀಯ ನ್ಯಾಯಾಂಗದ ಧೀಮಂತ ವ್ಯಕ್ತಿತ್ವ ಎನಿಸಿಕೊಂಡಿದ್ದ, 1971ರಿಂದ 1977ರವರೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ದಿವಂಗತ ಎಚ್ ಆರ್ ಖನ್ನಾ ಗೌರವಾರ್ಥ ವಿಚಾರ ಸಂಕಿರಣ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂ ಎಂ ಸುಂದರೇಶ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸುಪ್ರೀಂ ಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ವಿಚಾರ ಸಂಕಿರಣ ಎರಡು ಭಾಗಗಳನ್ನು ಒಳಗೊಂಡಿದ್ದು ಪ್ರತಿಯೊಂದೂ ವಿಭಾಗವೂ ನ್ಯಾಯಾಂಗ ವ್ಯವಸ್ಥೆಯ ನಿರ್ಣಾಯಕ ಅಂಶವನ್ನು ಕೇಂದ್ರೀಕರಿಸುತ್ತದೆ. ʼಸರ್ಕಾರದ ಕಣ್ಗಾವಲು ಮತ್ತು ಗೋಪ್ಯತೆ ಕ್ರಿಮಿನಲ್ ತನಿಖೆ ಮತ್ತು ಗೋಪ್ಯತೆ ನಡುವಿನ ಲಕ್ಷ್ಮಣ ರೇಖೆʼ ಕುರಿತು ಮೊದಲನೇ ಅವಧಿಯಲ್ಲಿ ಚರ್ಚೆ ನಡೆಯಲಿದ್ದು ಎರಡನೇ ಅವಧಿಯಲ್ಲಿ ʼಕಾನೂನು ಕ್ಷೇತ್ರದ ಧೀಮಂತರು ಮತ್ತು ನ್ಯಾಯಾಂಗ ವ್ಯವಸ್ಥೆಗೆ ಅವರ ಕೊಡುಗೆʼ ಎಂಬ ವಿಷಯವನ್ನು ಚರ್ಚಿಸಲಾಗುತ್ತದೆ.
ಕಾರ್ಯಕ್ರಮವನ್ನು ಪ್ರತಿಷ್ಠಾನದ ಯೂಟ್ಯೂಬ್ ವಾಹಿನಿಯಲ್ಲಿ ನೇರ ಪ್ರಸಾರ ಮಾಡಲಿದ್ದು, ಗೆ ಪ್ರತಿಷ್ಠಾನದ ಅಧಿಕೃತ ಜಾಲತಾಣದಿಂದ ವಿವರಗಳನ್ನು ಪಡೆಯಬಹುದು.
ಈ ಹಿಂದೆ ಜೋಧಪುರದ ರಾಷ್ಟ್ರೀಯ ಕಾನೂನು ವಿವಿ, ಗಾಂಧಿನಗರದ ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದೊಂದಿಗೆ ಸಿಎಎನ್ ಪ್ರತಿಷ್ಠಾನ ನ್ಯಾ. ಖನ್ನಾ ಸ್ಮಾರಕ ಪ್ರಥಮ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಿತ್ತು. ಎರಡನೇ ವಿಚಾರ ಸಂಕಿರಣವನ್ನು ಲಖನೌನ ಡಾ ರಾಮ್ ಮನೋಹರ್ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಮತ್ತು ಒಡಿಶಾದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ವಿಚಾರ ಸಂಕಿರಣದ 3ನೇ ಆವೃತ್ತಿಯ ಕುರಿತು ಮಾತನಾಡಿದ ಸಿಎಎನ್ ಪ್ರತಿಷ್ಠಾನದ ಸಿಇಒ ಹಾಗೂ ವಕೀಲ ಸಿದ್ಧಾರ್ಥ್ ಆರ್ ಗುಪ್ತಾ ಅವರು ನ್ಯಾ. ಖನ್ನಾ ಅವರ ಕುರಿತು ಗೌರವದ ಅಭಿಪ್ರಾಯ ಹಂಚಿಕೊಂಡಿದ್ದು ಕಾನೂನು ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸುವ ಮಹತ್ವವನ್ನು ವಿವರಿಸಿದ್ದಾರೆ.
ಕಾನೂನು ವೃತ್ತಿಪರರು, ವಿದ್ವಾಂಸರು ಮತ್ತು ಉತ್ಸಾಹಿಗಳು ಒಳನೋಟದಿಂದ ಕೂಡಿದ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು, ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಹಾಗೂ ಭಾರತೀಯ ನ್ಯಾಯಾಂಗದಲ್ಲಿ ನ್ಯಾ. ಎಚ್ ಆರ್ ಖನ್ನಾ ಅವರ ಅಳಿಸಲಾಗದ ಗುರುತನ್ನು ಸ್ಮರಿಸಲು ಪ್ರಸಕ್ತ ವಿಚಾರ ಸಂಕಿರಣ ಸೂಕ್ತ ವೇದಿಕೆಯಾಗಿದೆ.