
ವಿಭಿನ್ನವಾದ ಕಲಿಕಾ ಅಶಕ್ತತೆಯಿಂದ ಬಳಲುತ್ತಿರುವ ಕಾನೂನು ವಿದ್ಯಾರ್ಥಿನಿಯು ಅರ್ಥಶಾಸ್ತ್ರ ಹೊರತುಪಡಿಸಿ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾದರೆ ಆಕೆಯು ಮೊದಲನೇ ವರ್ಷದ ಪದವಿಯಲ್ಲಿ ಪಾಸಾಗುವ ವಿಚಾರದಲ್ಲಿ ಉದಾರವಾದಿ ನಿಲುವು ತಳೆಯುವಂತೆ ಕರ್ನಾಟಕ ಹೈಕೋರ್ಟ್ ಈಚೆಗೆ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆಗೆ (ಎನ್‌ಎಲ್‌ಎಸ್‌ಯು) ನಿರ್ದೇಶಿಸಿದೆ.
ಎನ್‌ಎಲ್‌ಎಸ್‌ಯುಐ ವಿದ್ಯಾರ್ಥಿನಿಯು ಪರ್ಯಾಯ ವಿಷಯ/ ಅರ್ಥಶಾಸ್ತ್ರ ಅಧ್ಯಯನದಿಂದ ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠ ಇತ್ಯರ್ಥಪಡಿಸಿದೆ.
“ಅಂಕಗಣಿತ ಕಲಿಯಲು ನಿರ್ದಿಷ್ಟವಾದ ಕಲಿಕಾ ಸಮಸ್ಯೆಯಾದ 'ಡಿಸ್ಕ್ಯಾಲ್ಕುಲಿಯಾ' ಎಂಬುದರಿಂದ ವಿದ್ಯಾರ್ಥಿನಿ ಬಳಲುತ್ತಿದ್ದು, ಇದರಿಂದ ಆಕೆಗೆ ಸಂಖ್ಯೆಗಳನ್ನು ಅರ್ಥೈಸಿಕೊಳ್ಳುವ ಸಮಸ್ಯೆಯಿದೆ. “ಅರ್ಜಿದಾರೆಯು ಅರ್ಥಶಾಸ್ತ್ರ ಅಥವಾ ಆರ್ಥಿಕ ಇತಿಹಾಸ ಪರಿಕಲ್ಪನೆ ಹೊರತುಪಡಿಸಿ ಎಲ್ಲಾ ವಿಷಯಗಳಲ್ಲಿ ಪಾಸಾದರೆ ಮೊದಲನೇ ವರ್ಷದ ಪದವಿ ಪೂರೈಸಲು ವಿದ್ಯಾರ್ಥಿನಿಯ ದೃಷ್ಟಿಯಲ್ಲಿ ಎನ್‌ಎಲ್‌ಎಸ್‌ಯುಐ ಉದಾರವಾದಿ ನಿಲುವು ತಳೆಯಬೇಕು. ಇಂಥ ಸಂದರ್ಭದಲ್ಲಿ ಎನ್‌ಎಲ್‌ಎಸ್‌ಯುಐನ ಕುಲಪತಿಯು ಸೂಕ್ತವಾದ ಆದೇಶ ಮಾಡಬೇಕು” ಎಂದು ನ್ಯಾಯಾಲಯ ಹೇಳಿದೆ.
“ವಿದ್ಯಾರ್ಥಿನಿಯು ಅರ್ಥಶಾಸ್ತ್ರ ಮತ್ತು ಅರ್ಥಶಾಸ್ತ್ರದ ವಿಷಯಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಎನ್‌ಎಲ್‌ಎಸ್‌ಯುಐನ ಶೈಕ್ಷಣಿಕ ಪರಿಶೀಲನಾ ಸಮಿತಿಯಲ್ಲಿ ಸದರಿ ವಿಚಾರವನ್ನು ಪ್ರಸ್ತಾಪಿಸುವಂತೆ ವಿಶ್ವವಿದ್ಯಾಲಯ ಮತ್ತು ಕುಲಪತಿಗೆ ಆಕೆ ಮನವಿ ಮಾಡಿದ್ದರು. ಈ ವಿಚಾರಕ್ಕೆ ಎನ್‌ಎಲ್‌ಎಸ್‌ಐಯು ಆಗಲಿ ಅಥವಾ ಶೈಕ್ಷಣಿಕ ಆಡಳಿತವು ವಿರೋಧಿಸುತ್ತಿಲ್ಲ. ಭಾರತೀಯ ವಕೀಲರ ಪರಿಷತ್ ನಿಯಮದ ಅನುಸಾರ ಎನ್‌ಎಲ್‌ಎಸ್‌ಐಯು ಪಠ್ಯಕ್ರಮವನ್ನು ರೂಪಿಸಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ.
ಎನ್‌ಎಲ್‌ಎಸ್‌ಐಯು ಮೊದಲ ವರ್ಷದಲ್ಲಿ ಕ್ಲಿಷ್ಟ ಪಠ್ಯಕ್ರಮವನ್ನು ರೂಪಿಸುವುದಿಲ್ಲ. ಪ್ರಥಮ ವರ್ಷದ ಮೊದಲ ಸೆಮಿಸ್ಟರ್‌ನಲ್ಲಿ ಕಾನೂನಿನ ವಿಧಗಳು, ಸಮಾಜ, ಸಂಖ್ಯೆ, ಸಂಕಥನ ಬಗ್ಗೆ ತಿಳಿಯಲು ಪಠ್ಯಕ್ರಮ ರೂಪಿಸಲಾಗಿರುತ್ತದೆ. ಎರಡನೇ ಸೆಮಿಸ್ಟರ್‌ನಲ್ಲಿ ಲಾ ಆಫ್ ಟೋರ್ಟ್, ಕಾಂಟ್ರ್ಯಾಕ್ಟ್ಸ್-I, ಆರ್ಥಿಕತೆ, ಅಧಿಕಾರದ ವಿಚಾರಗಳು ಇರಲಿವೆ. ಮೂರನೇ ಸೆಮಿಸ್ಟರ್‌ನಲ್ಲಿ ಕಾಂಟ್ರ್ಯಾಕ್ಟ್ಸ್-II, ಕ್ರಿಮಿನಲ್ ಕಾನೂನು, ಆಸ್ತಿ ಕಾನೂನು, ಇತಿಹಾಸದ ಬಗ್ಗೆ ಓದಲಿದ್ದಾರೆ. ಸಣ್ಣ ಅಥವಾ ಕ್ಲಿಷ್ಟ ವಿಷಯಗಳನ್ನು ಆಯ್ಕೆ ಮಾಡುವ ವಿಚಾರವು ಎರಡನೇ ವರ್ಷದಿಂದ ಬರಲಿದೆ ಎಂದು ವಿಶ್ವವಿದ್ಯಾಲಯ ವಾದಿಸಿತ್ತು.
ಸಂಖ್ಯೆಗಳ ಕೋರ್ಸ್ ಹೊರತುಪಡಿಸಿದ ಅರ್ಥಶಾಸ್ತ್ರದ ಇತಿಹಾಸ ಪರಿಕಲ್ಪನೆ ಕೋರ್ಸ್ ಅನ್ನು ವಿದ್ಯಾರ್ಥಿನಿ ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಇದರಲ್ಲಿ ಗಣಿತದ ವಿಚಾರ ಇರುವುದಿಲ್ಲ. ಪರೀಕ್ಷೆಯಲ್ಲಿ ವಿದ್ಯಾರ್ಥಿಗೆ ಲೆಕ್ಕಾಚಾರಕ್ಕೆ ಬದಲಾಗಿ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ವಿಶ್ವವಿದ್ಯಾಲಯ ವಾದಿಸಿತ್ತು.
ಪಾರ್ಟಿ ಇನ್ ಪರ್ಸನ್ ರೂಪದಲ್ಲಿ ಹಾಜರಾಗಿದ್ದ ವಿದ್ಯಾರ್ಥಿನಿಯು ಪಠ್ಯ ವಿಷಯದ ವಿಚಾರಗಳನ್ನು ಅರ್ಥ ಮಾಡಿಕೊಂಡಿದ್ದು, ಆ ವಿಷಯದಲ್ಲಿ ಸೂಕ್ಷ್ಮತೆಯನ್ನು ಗ್ರಹಿಸಿದ್ದಾರೆ. ಅಲ್ಲದೇ, ನ್ಯಾಯಾಲಯದಲ್ಲಿನ ಚರ್ಚೆಯೂ ಆಕೆಗೆ ಅರ್ಥವಾಗಿದೆ. “ಎನ್‌ಎಲ್‌ಎಸ್‌ಐಯು ವಿದ್ಯಾರ್ಥಿನಿಯ ಅಶಕ್ತತೆ ಅರ್ಥ ಮಾಡಿಕೊಂಡು ಅತ್ಯುತ್ತಮ ಆಯ್ಕೆ ನೀಡಿದ್ದು, ಎನ್‌ಎಲ್‌ಎಸ್‌ಐಯು ನೀಡಿರುವ ಆಯ್ಕೆಗಳನ್ನು ವಿದ್ಯಾರ್ಥಿನಿ ಆಯ್ಕೆ ಮಾಡಿಕೊಳ್ಳಬೇಕು” ಎಂದಿದೆ.